
ವಿಜಯಪುರ, 29 ಆಗಸ್ಟ್ (ಹಿ.ಸ.)
ಆ್ಯಂಕರ್ : ವಿಜಯಪುರ ನಗರದ ಹೃದಯ ಭಾಗದಲ್ಲಿರುವ ಐತಿಹಾಸಿಕ ಗಾಂಧಿ ವೃತ್ತಕ್ಕೆ ಶೀಘ್ರದಲ್ಲೇ ಹೊಸ ರೂಪ ನೀಡುವ ಮಹತ್ವಾಕಾಂಕ್ಷಿ ಯೋಜನೆಗೆ ಚಾಲನೆ ದೊರೆಯಲಿದೆ. ಸತ್ಯ, ಅಹಿಂಸೆ, ಶಾಂತಿ ಹಾಗೂ ಸಮಾನತೆಯ ಸಂದೇಶವನ್ನು ಜಗತ್ತಿಗೆ ಸಾರಿದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಸ್ಮರಣೆಯನ್ನು ಮತ್ತಷ್ಟು ಅರ್ಥಪೂರ್ಣಗೊಳಿಸುವ ಉದ್ದೇಶದಿಂದ ಗಾಂಧಿ ವೃತ್ತವನ್ನು ಸಂಪೂರ್ಣವಾಗಿ ನವೀಕರಿಸಿ, ಭವ್ಯವಾದ ಗಾಂಧೀಜಿ ಪುತ್ಥಳಿಯನ್ನು ಪ್ರತಿಷ್ಠಾಪಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ್ ತಿಳಿಸಿದ್ದಾರೆ.
ವಿಜಯಪುರ ನಗರದ ಪ್ರಮುಖ ಕೇಂದ್ರಗಳಲ್ಲಿ ಒಂದಾಗಿರುವ ಗಾಂಧಿ ವೃತ್ತವು ಹಲವು ವರ್ಷಗಳಿಂದ ಹಳೆಯ ಸ್ವರೂಪದಲ್ಲಿಯೇ ಉಳಿದಿದೆ. ವೃತ್ತದಲ್ಲಿರುವ ಮಹಾತ್ಮ ಗಾಂಧೀಜಿಯವರ ಪ್ರತಿಮೆಯೂ ಚಿಕ್ಕದಾಗಿದ್ದು, ವೇಗವಾಗಿ ಬೆಳೆಯುತ್ತಿರುವ ವಿಜಯಪುರ ನಗರದ ಸೌಂದರ್ಯ ಮತ್ತು ಆಧುನಿಕ ಅಭಿವೃದ್ಧಿಗೆ ಅನುಗುಣವಾಗಿ ಈ ಪ್ರದೇಶವನ್ನು ಮತ್ತಷ್ಟು ಆಕರ್ಷಕವಾಗಿ ರೂಪಿಸುವ ಅಗತ್ಯವಿದೆ ಎಂದು ಸಚಿವರು ಅಭಿಪ್ರಾಯಪಟ್ಟಿದ್ದಾರೆ.
ಗಾಂಧೀಜಿಯವರ ಆದರ್ಶಗಳು ಕೇವಲ ಭಾರತದಷ್ಟೇ ಅಲ್ಲದೆ ಇಡೀ ವಿಶ್ವಕ್ಕೆ ದಾರಿದೀಪವಾಗಿವೆ. ಸತ್ಯ ಮತ್ತು ಅಹಿಂಸೆಯ ಮೂಲಕ ಸಮಾಜದಲ್ಲಿ ಶಾಂತಿ ಹಾಗೂ ಸಮಾನತೆಯನ್ನು ಸ್ಥಾಪಿಸಬಹುದು ಎಂಬ ಬಾಪೂಜಿಯವರ ಸಂದೇಶ ಇಂದಿಗೂ ಪ್ರಸ್ತುತವಾಗಿದೆ. ಇಂತಹ ಮಹಾನ್ ನಾಯಕನ ಸ್ಮರಣೆಯನ್ನು ಗೌರವಯುತವಾಗಿ ಉಳಿಸುವ ಜತೆಗೆ ನಗರದ ಸೌಂದರ್ಯವನ್ನು ಹೆಚ್ಚಿಸುವ ಉದ್ದೇಶದಿಂದ ಗಾಂಧಿ ವೃತ್ತದ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ.
ಈ ಹಿಂದೆ ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಆಯುಕ್ತರಿಗೆ ಗಾಂಧಿ ವೃತ್ತವನ್ನು ಅಂದ-ಚಂದಗೊಳಿಸಿ, ಇಲ್ಲಿ ಭವ್ಯವಾದ ಗಾಂಧೀಜಿ ಪ್ರತಿಮೆಯನ್ನು ಪ್ರತಿಷ್ಠಾಪಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿತ್ತು. ಅದರಂತೆ, ಪ್ರಖ್ಯಾತ ವಾಸ್ತುಶಿಲ್ಪಿ ಆನಂದ್ ಕುಸೂರ್ ಅವರು ಗಾಂಧಿ ವೃತ್ತದ ನವೀಕರಣಕ್ಕಾಗಿ ವಿಶೇಷ ವಿನ್ಯಾಸವನ್ನು ಸಿದ್ಧಪಡಿಸಿದ್ದಾರೆ.
ಸಚಿವ ಎಂ. ಬಿ. ಪಾಟೀಲ್ ಅವರು ಇಂದು ವಿಜಯಪುರ ನಗರದ ತಮ್ಮ ನಿವಾಸದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಪ್ರಮುಖರೊಂದಿಗೆ ಸಭೆ ನಡೆಸಿ, ಪ್ರಸ್ತಾವಿತ ಕಾಮಗಾರಿಯ ವಿನ್ಯಾಸ, ರೂಪುರೇಷೆ, ಸೌಂದರ್ಯೀಕರಣ ಯೋಜನೆ ಹಾಗೂ ಮುಂದಿನ ಹಂತಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸುದೀರ್ಘವಾಗಿ ಚರ್ಚಿಸಿದರು.
ವಾಸ್ತುಶಿಲ್ಪಿ ಆನಂದ್ ಕುಸೂರ್ ಅವರು ಸಿದ್ಧಪಡಿಸಿರುವ ವಿನ್ಯಾಸವನ್ನು ಪರಿಶೀಲಿಸಿದ ಸಚಿವರು, ಕಾಮಗಾರಿಯನ್ನು ಇನ್ನಷ್ಟು ಆಕರ್ಷಕ ಹಾಗೂ ಜನಮನ ಸೆಳೆಯುವ ರೀತಿಯಲ್ಲಿ ರೂಪಿಸಲು ಅಗತ್ಯ ಸಲಹೆ ಮತ್ತು ಸೂಚನೆಗಳನ್ನು ನೀಡಿದರು. ವಿಜಯಪುರದ ಐತಿಹಾಸಿಕತೆ ಮತ್ತು ಸಾಂಸ್ಕೃತಿಕ ವೈಭವಕ್ಕೆ ಪೂರಕವಾಗುವ ರೀತಿಯಲ್ಲಿ ಗಾಂಧಿ ವೃತ್ತದ ಅಭಿವೃದ್ಧಿ ನಡೆಯಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.
ಕಾಮಗಾರಿಯನ್ನು ಯಾವುದೇ ಅನಗತ್ಯ ವಿಳಂಬವಿಲ್ಲದೆ ತ್ವರಿತವಾಗಿ ಆರಂಭಿಸಲು ಸೂಚಿಸಿರುವ ಸಚಿವರು, ಮುಂಬರುವ ಅಕ್ಟೋಬರ್ 2ರ ಗಾಂಧಿ ಜಯಂತಿಯಂದೇ ಗಾಂಧಿ ವೃತ್ತ ನವೀಕರಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ನವೀಕರಣದ ನಂತರ ಗಾಂಧಿ ವೃತ್ತವು ನಗರದ ಪ್ರಮುಖ ಆಕರ್ಷಣೀಯ ಕೇಂದ್ರವಾಗಿ ರೂಪುಗೊಳ್ಳುವ ನಿರೀಕ್ಷೆಯಿದ್ದು, ಭವ್ಯ ಗಾಂಧೀಜಿ ಪುತ್ಥಳೆ, ಸುಂದರ ವಿನ್ಯಾಸ ಹಾಗೂ ಸೌಂದರ್ಯೀಕರಣದ ಮೂಲಕ ವಿಜಯಪುರ ನಗರದ ವೈಭವಕ್ಕೆ ಹೊಸ ಮೆರುಗು ಸಿಗಲಿದೆ. ಜೊತೆಗೆ ಮಹಾತ್ಮ ಗಾಂಧೀಜಿಯವರ ಆದರ್ಶಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಸ್ಮಾರಕಸ್ವರೂಪದ ಸ್ಥಳವಾಗಿಯೂ ಇದು ರೂಪುಗೊಳ್ಳಲಿದೆ ಎಂಬ ಆಶಯ ವ್ಯಕ್ತವಾಗಿದೆ.
ಸಭೆಯಲ್ಲಿ ಖಾದಿ ಮತ್ತು ಗ್ರಾಮೋದ್ಯೋಗದ ಅಧ್ಯಕ್ಷರಾದ ಬಾಪೂಗೌಡ ಪಾಟೀಲ್, ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಗಂಗಾಧರ ಸಂಬಣ್ಣಿ, ಆಯುಕ್ತರಾದ ರಾಜಶೇಖರ ಡಂಬಳ, ಮುಖಂಡರಾದ ಅಬ್ದುಲ್ ಹಮೀದ್ ಮುಶ್ರೀಫ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande