ವಿವಾದಾತ್ಮಕ ಸೈಟ್ ಹಂಚಿಕೆ ಆರೋಪ:ಬಿಡಿಎ ವಿರುದ್ಧ ರೈತರ ಆಕ್ರೋಶ
ಬಿಡಿಎ ಕಚೇರಿಗೆ 200ಕ್ಕೂ ಹೆಚ್ಚು ರೈತರ ಮುತ್ತಿಗೆ
ವಿವಾದಾತ್ಮಕ ಸೈಟ್ ಹಂಚಿಕೆ ಆರೋಪ:ಬಿಡಿಎ ವಿರುದ್ಧ ರೈತರ ಆಕ್ರೋಶ


ಬೆಂಗಳೂರು, 29 ಆಗಸ್ಟ್ (ಹಿ.ಸ.):

ಆ್ಯಂಕರ್:

ರೈತರ ಜಮೀನುಗಳನ್ನು ಸ್ವಾಧೀನಪಡಿಸಿಕೊಂಡು ಸೂಕ್ತ ಪರಿಹಾರ ನೀಡದೆ, ಕೋರ್ಟ್ ವ್ಯಾಜ್ಯಗಳಿರುವ ಹಾಗೂ ವಿವಾದಾತ್ಮಕ ಸೈಟ್ಗಳನ್ನು ಪರಿಹಾರವಾಗಿ ಹಂಚಿಕೆ ಮಾಡಲಾಗಿದೆ ಎಂದು ಆರೋಪಿಸಿ 200ಕ್ಕೂ ಹೆಚ್ಚು ರೈತರು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಅಭಿವೃದ್ಧಿ ಕಾಮಗಾರಿಗಳಿಗಾಗಿ ರೈತರ ಫಲವತ್ತಾದ ಜಮೀನುಗಳನ್ನು ಸ್ವಾಧೀನಪಡಿಸಿಕೊಂಡಿರುವ ಬಿಡಿಎ, ಜಮೀನು ಕಳೆದುಕೊಂಡ ರೈತರಿಗೆ ನ್ಯಾಯಯುತ ಪರಿಹಾರ ನೀಡುವಲ್ಲಿ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಅದರಲ್ಲೂ ಕೆಲ ರೈತರಿಗೆ ಕೋರ್ಟ್ನಲ್ಲಿ ಪ್ರಕರಣಗಳು ಬಾಕಿ ಇರುವ ಹಾಗೂ ವಿವಾದಾತ್ಮಕ ಸೈಟ್ಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ರೈತರ ಜಮೀನು ಕಿತ್ತುಕೊಂಡು, ವಿವಾದಾತ್ಮಕ ಸೈಟ್ ನೀಡಲಾಗಿದೆ’ ಎಂದು ಆರೋಪಿಸಿದ ರೈತರು, ತಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿದರು. ಬಿಡಿಎ ಅಧ್ಯಕ್ಷ ಎನ್.ಎ. ಹ್ಯಾರಿಸ್ ಹಾಗೂ ಆಯುಕ್ತ ಮಣಿವಣ್ಣನ್ ಅವರ ಗಮನಕ್ಕೆ ಸಮಸ್ಯೆಗಳನ್ನು ತಂದಿದ್ದರೂ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.

ಕೋರ್ಟ್ ಪ್ರಕರಣಗಳಿರುವ ಹಾಗೂ ವಿವಾದಾತ್ಮಕ ಸೈಟ್ಗಳ ಹಂಚಿಕೆಯನ್ನು ತಕ್ಷಣ ರದ್ದುಪಡಿಸಿ, ಯಾವುದೇ ಕಾನೂನು ತೊಡಕುಗಳಿಲ್ಲದ ಹಾಗೂ ಕೂಡಲೇ ನೋಂದಣಿ ಮಾಡಿಕೊಳ್ಳಬಹುದಾದ ಪರ್ಯಾಯ ಸೈಟ್ಗಳನ್ನು ನೀಡಬೇಕು ಎಂದು ರೈತರು ಆಗ್ರಹಿಸಿದರು.

ಅಲ್ಲದೆ, ಸ್ವಾಧೀನಪಡಿಸಿಕೊಂಡಿರುವ ಜಮೀನುಗಳಿಗೆ ಪ್ರಸ್ತುತ ಮಾರುಕಟ್ಟೆ ದರಕ್ಕೆ ಅನುಗುಣವಾಗಿ ಸೂಕ್ತ ಪರಿಹಾರಧನ ನೀಡಬೇಕು. ರೈತರ ಜಮೀನುಗಳಿಗೆ ಸಂಬಂಧಿಸಿದಂತೆ ಅಕ್ರಮವಾಗಿ ಕ್ರಮಕೈಗೊಂಡಿರುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

‘ಬಡ ರೈತರ ಜಾಗಗಳನ್ನು ನುಂಗುವ ಬಿಡಿಎ ವಿರುದ್ಧ ಕ್ರಮ ಯಾವಾಗ? ರೈತರ ಅಳಲನ್ನು ಕೇಳುವವರು ಯಾರು?’ ಎಂದು ಪ್ರಶ್ನಿಸಿದ ಪ್ರತಿಭಟನಾಕಾರರು, ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವ ಎಚ್ಚರಿಕೆ ನೀಡಿದರು.

--------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande