
ಬೆಂಗಳೂರು, 26 ಆಗಸ್ಟ್ (ಹಿ.ಸ.):
ಆ್ಯಂಕರ್:
ಆಗಸ ಮುಟ್ಟುತ್ತಿರುವ ನಿತ್ಯೋಪಯೋಗಿ ವಸ್ತುಗಳ ಬೆಲೆಯಿಂದಾಗಿ ಜನಸಾಮಾನ್ಯಯರು ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ. ಅಕ್ಕಿ, ಬೇಳೆಕಾಳು, ತರಕಾರಿ, ಈರುಳ್ಳಿ, ಸಕ್ಕರೆ ಹಾಗೂ ಬೆಲ್ಲದ ಬೆಲೆಯಲ್ಲಿನ ದಿಢೀರ್ ಏರಿಕೆಯು ಬಡ ಮತ್ತು ಮಧ್ಯಮ ವರ್ಗದವರ ಸಂಸಾರದ ಬಂಡಿಯನ್ನು ಅಯೋಮಯಗೊಳಿಸಿದೆ.
ಅಡುಗೆಮನೆಗೆ ಅತ್ಯಗತ್ಯವಿರುವ ದಿನಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದೆ.ದುಬಾರಿ ಬೆಲೆಯಿಂದಾಗಿ ಗ್ರಾಹಕರು ಅಂಗಡಿಯತ್ತ ಬರಲು ಭಯಪಡುತ್ತಿದ್ದು, ವ್ಯಾಪಾರವಿಲ್ಲದೆ ಸಣ್ಣ ವ್ಯಾಪಾರಿಗಳು ನಷ್ಟ ಅನುಭವಿಸುತ್ತಿದ್ದಾರೆ.
ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಿದ್ದರೂ, ಶ್ರಮಪಟ್ಟು ಬೆಳೆದ ರೈತನಿಗೆ ಮಾತ್ರ ಸೂಕ್ತ ಬೆಲೆ ಸಿಗುತ್ತಿಲ್ಲ; ಲಾಭವೆಲ್ಲ ದಲ್ಲಾಳಿಗಳ ಪಾಲಾಗುತ್ತಿದೆ.
ಸರ್ಕಾರದ ನಿರ್ಲಕ್ಷ್ಯದಿಂದಾಗಿ ಬಡವರ ಬದುಕಿನ ಜೊತೆ ಚೆಲ್ಲಾಟವಾಡಲಾಗುತ್ತಿದೆ ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಅತ್ಯಗತ್ಯ ವಸ್ತುಗಳ ಬೆಲೆ ಏರಿಕೆಯು ಗಾಯದ ಮೇಲೆ ಎಣ್ಣೆ ಎರೆದಂತಾಗಿದ್ದು, ಇಂತಹ ಪರಿಸ್ಥಿತಿ ಮುಂದುವರಿದರೆ ಜೀವನ ಸಾಗಿಸುವುದು ಹೇಗೆ? ಎಂದು ಜನಸಾಮಾನ್ಯರು ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ.
ಈ ತುರ್ತು ಪರಿಸ್ಥಿತಿಯಲ್ಲಿ ಸರ್ಕಾರ ತಕ್ಷಣವೇ ಮಧ್ಯಪ್ರವೇಶಿಸಿ, ಕಪ್ಪುಮಾರುಕಟ್ಟೆ ಮತ್ತು ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕಬೇಕಿದೆ. ಬೆಲೆ ನಿಯಂತ್ರಣಕ್ಕೆ ಸೂಕ್ತ ಕಠಿಣ ಕ್ರಮ ಕೈಗೊಂಡು ಸಂಕಷ್ಟದಲ್ಲಿರುವ ಬಡವರು ಹಾಗೂ ರೈತರ ನೆರವಿಗೆ ಧಾವಿಸಬೇಕೆಂದು ಸಾರ್ವಜನಿಕ ವಲಯದಿಂದ ಒತ್ತಾಯ ಕೇಳಿಬಂದಿದೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R