
ಬೆಂಗಳೂರು, 26 ಆಗಸ್ಟ್ (ಹಿ.ಸ.):
ಆ್ಯಂಕರ್:
ಆನ್ಲೈನ್ ಮೂಲಕ ಮಾರಾಟ ಮಾಡಲಾಗುವ ತರಕಾರಿಗಳು ತಾಜಾವಾಗಿ ಕಾಣುವಂತೆ ಮಾಡುವ ಸಲುವಾಗಿ ಅವುಗಳ ಮೇಲೆ ರಾಸಾಯನಿಕಗಳನ್ನು ಸಿಂಪಡಿಸಲಾಗುತ್ತಿದೆ ಎಂಬ ಗಂಭೀರ ದೂರುಗಳು ಕೇಳಿಬಂದಿದ್ದು, ಈ ಕುರಿತು ಶೀಘ್ರವೇ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಇಲಾಖೆ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.
ನಗರದಲ್ಲಿ ಇಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಾರ್ವಜನಿಕರಿಂದ ಈ ಕುರಿತು ದೂರುಗಳು ಬಂದಿರುವುದನ್ನು ಖಚಿತಪಡಿಸಿದರು. ಆನ್ಲೈನ್ನಲ್ಲಿ ಮಾರಾಟ ಮಾಡುವ ತರಕಾರಿಗಳು ಹೆಚ್ಚು ತಾಜಾವಾಗಿ ಕಾಣಬೇಕು ಎಂಬ ಕಾರಣಕ್ಕೆ ಕೆಮಿಕಲ್ ಸ್ಪ್ರೇ ಮಾಡಲಾಗುತ್ತಿದೆ ಎಂಬ ದೂರುಗಳು ನಮ್ಮ ಗಮನಕ್ಕೆ ಬಂದಿವೆ. ಸದ್ಯ ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ಇತ್ತೀಚೆಗೆ ಹೋಟೆಲ್ಗಳ ಮೇಲೆ ನಡೆದ ಅಧಿಕಾರಿಗಳ ದಾಳಿಯ ಕುರಿತು ಪ್ರತಿಕ್ರಿಯಿಸಿದ ಸಚಿವರು, ಮುಂಬರುವ ವಾರ ಅಥವಾ ಹದಿನೈದು ದಿನಗಳಲ್ಲಿ ಹೋಟೆಲ್ ಹಾಗೂ ರೆಸ್ಟೋರೆಂಟ್ ಅಸೋಸಿಯೇಷನ್ ಪದಾಧಿಕಾರಿಗಳ ಜೊತೆಗೆ ಸಭೆ ನಡೆಸುವುದಾಗಿ ತಿಳಿಸಿದರು.ಹೋಟೆಲ್ಗಳ ಪರಿಶೀಲನೆ ವೇಳೆ ಆಹಾರ ತಯಾರಿಕೆಯಲ್ಲಿ ಅನೇಕ ಲೋಪದೋಷಗಳು ಕಂಡುಬಂದಿವೆ. ಕ್ಲಬ್ಗಳು ಮತ್ತು ಹೋಟೆಲ್ಗಳು ಆಹಾರ ಸುರಕ್ಷತೆಯನ್ನು ಕಾಯ್ದುಕೊಳ್ಳುವ ಕುರಿತು ಮತ್ತು ಸಿಬ್ಬಂದಿಗೆ ಸೂಕ್ತ ತರಬೇತಿ ನೀಡುವ ಬಗ್ಗೆ ಸಭೆಯಲ್ಲಿ ವಿಸ್ತೃತ ಯೋಜನೆ ರೂಪಿಸಲಾಗುವುದು. ಇದರೊಂದಿಗೆ, ಇಂದಿರಾ ಕ್ಯಾಂಟೀನ್ ಗುತ್ತಿಗೆದಾರರ ಜೊತೆಯೂ ಚರ್ಚಿಸಿ, ಅಲ್ಲಿನ ಕಾರ್ಯವೈಖರಿಯ ಬಗ್ಗೆಯೂ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R