ಸೆಪ್ಟೆಂಬರ್ 1ರಿಂದ ಬಿಜೆಪಿಯಿಂದ 185 ಕಿಮೀ ಪಾದಯಾತ್ರೆ:ಗಾಲಿ ಜನಾರ್ದನ ರೆಡ್ಡಿ
ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಘೋಷಣೆ
ಸೆಪ್ಟೆಂಬರ್ 1ರಿಂದ ಬಿಜೆಪಿಯಿಂದ 185 ಕಿಮೀ ಪಾದಯಾತ್ರೆ:ಗಾಲಿ ಜನಾರ್ದನ ರೆಡ್ಡಿ


ಬೆಂಗಳೂರು, 26 ಆಗಸ್ಟ್ (ಹಿ.ಸ.)

ಆ್ಯಂಕರ್:

ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು, ಸೆಪ್ಟೆಂಬರ್ 1ರಿಂದ ಬಿಜೆಪಿ ಪಾದಯಾತ್ರೆಯು ಪ್ರಾರಂಭವಾಗಲಿದ್ದು, ಸುಮಾರು 185 ಕಿಲೋಮೀಟರ್ ದೂರವನ್ನು ಕ್ರಮಿಸಲಿದೆ ಎಂದು ತಿಳಿಸಿದರು.

ಪಾದಯಾತ್ರೆಯ ಹಾದಿಯ ಕುರಿತು ಮಾಹಿತಿ ನೀಡಿದ ಅವರು, ಈ ಯಾತ್ರೆಯು ಲಿಂಗಸುಗೂರಿನಿಂದ ಆರಂಭಗೊಂಡು ಅಲ್ಲಿಂದ ಮಸ್ಕಿ, ಸಿಂಧನೂರು, ಕಾರಟಗಿ, ಗಂಗಾವತಿ, ಕಂಪ್ಲಿ ಹಾಗೂ ಸೊಂಡೂರು ಮೂಲಕ ಬಳ್ಳಾರಿ ನಗರಕ್ಕೆ ಪ್ರವೇಶಿಸಲಿದೆ ಎಂದು ವಿವರ ನೀಡಿದರು. ನಾಳೆ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜೀವ್ ಕುಡಚಿ ಅವರ ನೇತೃತ್ವದ ತಂಡವು ರಾತ್ರಿ ವಾಸ್ತವ್ಯ ಹಾಗೂ ಇತರ ರೂಪುರೇಷೆಗಳನ್ನು ಅಂತಿಮಗೊಳಿಸಲಿದೆ ಎಂದ ಅವರು, ಸೆಪ್ಟೆಂಬರ್ 9 ಅಥವಾ 10ರಂದು ಪಾದಯಾತ್ರೆಯ ಸಮಾರೋಪ ಸಮಾರಂಭವನ್ನು ನಡೆಸುವ ಕುರಿತು ನಾಳೆ ಅಥವಾ ನಾಡಿದ್ದು ನಿರ್ಧರಿಸಲಾಗುವುದು ಎಂದು ಹೇಳಿದರು.

ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ನಾಗೇಂದ್ರರ ರಾಜೀನಾಮೆ ಪಡೆಯದ ಕಾರಣ ಡಿ.ಕೆ. ಶಿವಕುಮಾರ್ ನೇತೃತ್ವದ ಸರಕಾರಕ್ಕೆ ಪಲಾಯನವಾದಿ ಎಂಬ ಅಪಕೀರ್ತಿ ಪಡೆಯಬೇಕಾಯಿತು. ಅವರು ಆರಂಭದಲ್ಲೇ ರಾಜೀನಾಮೆ ಪಡೆದಿದ್ದರೆ ಈ ಹಣೆಪಟ್ಟಿಯನ್ನು ತಪ್ಪಿಸಬಹುದಿತ್ತು ಎಂದು ತರಾಟೆಗೆ ತೆಗೆದುಕೊಂಡರು. ಮುಂದುವರಿದು, ಪಾದಯಾತ್ರೆಯ ವೇಳೆ ರೈತರ ವಿವಿಧ ಸಮಸ್ಯೆಗಳು, ರಾಜ್ಯದಲ್ಲಿ ತಲೆದೋರಿರುವ ಬರಗಾಲ ಪರಿಸ್ಥಿತಿ ಹಾಗೂ ನವಲಿ ಜಲಾಶಯದ ವಿಚಾರವನ್ನೂ ಕೂಡ ಗಂಭೀರವಾಗಿ ಪ್ರಸ್ತಾಪಿಸಲಿದ್ದೇವೆ ಎಂದು ತಿಳಿಸಿದರು.

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಕುರಿತು ಮಾತನಾಡಿದ ಅವರು, ದುರುಪಯೋಗವಾದ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನು ಯುವಕರು ಮತ್ತು ಮಹಿಳೆಯರು ಸೇರಿದಂತೆ ಆ ಸಮಾಜದ ಸಮಗ್ರ ಅಭಿವೃದ್ಧಿಗೆ ಬಳಸಬೇಕಾಗಿತ್ತು. ಈ ನಿಟ್ಟಿನಲ್ಲಿ ನಿರಂತರ ಹೋರಾಟದ ಮೂಲಕ ಆ ಸಮಾಜಕ್ಕೆ ನ್ಯಾಯ ಒದಗಿಸಲು ತಮ್ಮ ಪಕ್ಷವು ಮುಂದಾಗಿದೆ ಎಂದು ಗಾಲಿ ಜನಾರ್ದನ ರೆಡ್ಡಿ ಸ್ಪಷ್ಟಪಡಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande