
ಬೆಂಗಳೂರು, 26 ಆಗಸ್ಟ್ (ಹಿ.ಸ.)
ಆ್ಯಂಕರ್:
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆದಿನಾರಾಯಣ ಹೊಸಹಳ್ಳಿ ಕೈಗಾರಿಕಾ ಪ್ರದೇಶದ 2ನೇ ಹಂತದಲ್ಲಿ 'ಮೆಗಾ ಜ್ಯೂವೆಲರಿ ಪಾರ್ಕ್' ಸ್ಥಾಪನೆಗಾಗಿ 50 ಎಕರೆ ಜಮೀನು ಮಂಜೂರು ಮಾಡುವಂತೆ ಕೋರಿ, ವಿಧಾನ ಪರಿಷತ್ತಿನ ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕ ಟಿ.ಎ. ಶರವಣ ಅವರು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಬಜೆಟ್ ಘೋಷಣೆ ವಿಳಂಬ: 2022-23ನೇ ಸಾಲಿನ ರಾಜ್ಯ ಬಜೆಟ್ನಲ್ಲಿಯೇ ಮೆಗಾ ಜ್ಯೂವೆಲರಿ ಪಾರ್ಕ್ ಸ್ಥಾಪನೆ ಕುರಿತು ಘೋಷಣೆಯಾಗಿದ್ದರೂ, ಇದುವರೆಗೆ ಯೋಜನೆ ಕಾರ್ಯಗತಗೊಳ್ಳದಿರುವುದು ವಿಷಾದನೀಯ ಎಂದು ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಉದ್ಯೋಗ ಸೃಷ್ಟಿ ಹಾಗೂ ಆರ್ಥಿಕ ಲಾಭ: ಈ ಪಾರ್ಕ್ ಸ್ಥಾಪನೆಯಿಂದ ರಾಜ್ಯಕ್ಕೆ ಸಾವಿರಾರು ಕೋಟಿ ರೂ. ಜಿಎಸ್ಟಿ ಆದಾಯ ಬರಲಿದೆ. ಅಲ್ಲದೆ, ಸುಮಾರು 5 ಲಕ್ಷ ಉದ್ಯಮಿಗಳಿಗೆ ಮತ್ತು 10 ಸಾವಿರ ನಿರುದ್ಯೋಗಿಗಳಿಗೆ ಬೃಹತ್ ಉದ್ಯೋಗಾವಕಾಶ ದೊರೆತು, ರಾಜ್ಯದ ಆರ್ಥಿಕ ಅಭಿವೃದ್ಧಿಗೆ ಮಹತ್ವದ ಕೊಡುಗೆ ಸಿಗಲಿದೆ.
ಈ ಹಿಂದೆ ಜಮೀನು ಮಂಜೂರು ಮಾಡುವಂತೆ ಹಲವು ಬಾರಿ ಸರ್ಕಾರಕ್ಕೆ ಮನವಿ ಮಾಡಲಾಗಿದ್ದು, ಸಂಬಂಧಪಟ್ಟ ಇಲಾಖೆಗೆ ಸೂಚನೆ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬುದನ್ನು ಅವರು ಸಿಎಂ ಗಮನಕ್ಕೆ ತಂದರು.
ಮನವಿಯನ್ನು ಸ್ವೀಕರಿಸಿದ ಮುಖ್ಯಮಂತ್ರಿಗಳು, ಈ ಕುರಿತು ಪರಿಶೀಲಿಸಿ ಶೀಘ್ರದಲ್ಲೇ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಈ ಸಭೆಯಲ್ಲಿ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R