ಗ್ರಾಹಕರ ಆರೋಗ್ಯದ ಜತೆ ಚೆಲ್ಲಾಟ: ಪ್ರತಿಷ್ಠಿತ ಕ್ಲಬ್ಗಳಿಗೆ ಆಹಾರ ಇಲಾಖೆ ನೋಟಿಸ್
ಬೆಂಗಳೂರು, 26 ಆಗಸ್ಟ್ (ಹಿ.ಸ.): ಆ್ಯಂಕರ್: ಬೆಂಗಳೂರಿನ ಪ್ರತಿಷ್ಠಿತ ಕ್ಲಬ್‌ಗಳ ಅಡುಗೆಮನೆಗಳಲ್ಲಿನ ಕಳಪೆ ನಿರ್ವಹಣೆ ಮತ್ತು ಆಹಾರ ಸುರಕ್ಷತಾ ನಿಯಮಗಳ ಉಲ್ಲಂಘನೆ ಆಹಾರ ಸುರಕ್ಷತಾ ಇಲಾಖೆಯ ದಿಢೀರ್‌ ದಾಳಿಯಲ್ಲಿ ಬಯಲಾಗಿದೆ. ನಗರದ 10 ಪ್ರಮುಖ ಕ್ಲಬ್‌ಗಳ ಮೇಲೆ ಅಧಿಕಾರಿಗಳು ನಡೆಸಿದ ತಪಾಸಣೆಯಲ್ಲಿ ಅವಧಿ
ಗ್ರಾಹಕರ ಆರೋಗ್ಯದ ಜತೆ ಚೆಲ್ಲಾಟ: ಪ್ರತಿಷ್ಠಿತ ಕ್ಲಬ್ಗಳಿಗೆ ಆಹಾರ ಇಲಾಖೆ ನೋಟಿಸ್


ಬೆಂಗಳೂರು, 26 ಆಗಸ್ಟ್ (ಹಿ.ಸ.):

ಆ್ಯಂಕರ್:

ಬೆಂಗಳೂರಿನ ಪ್ರತಿಷ್ಠಿತ ಕ್ಲಬ್‌ಗಳ ಅಡುಗೆಮನೆಗಳಲ್ಲಿನ ಕಳಪೆ ನಿರ್ವಹಣೆ ಮತ್ತು ಆಹಾರ ಸುರಕ್ಷತಾ ನಿಯಮಗಳ ಉಲ್ಲಂಘನೆ ಆಹಾರ ಸುರಕ್ಷತಾ ಇಲಾಖೆಯ ದಿಢೀರ್‌ ದಾಳಿಯಲ್ಲಿ ಬಯಲಾಗಿದೆ. ನಗರದ 10 ಪ್ರಮುಖ ಕ್ಲಬ್‌ಗಳ ಮೇಲೆ ಅಧಿಕಾರಿಗಳು ನಡೆಸಿದ ತಪಾಸಣೆಯಲ್ಲಿ ಅವಧಿ ಮೀರಿದ ಮಾಂಸ, ಮೀನು ಸೇರಿದಂತೆ ಹಲವು ಗಂಭೀರ ಲೋಪಗಳು ಪತ್ತೆಯಾಗಿವೆ.

ಸೆಂಚುರಿ ಕ್ಲಬ್, ಕೆಎಸ್ಸಿಎ ಕ್ಲಬ್, ರೇಸ್ ಕೋರ್ಸ್ ಕ್ಲಬ್ ಹಾಗೂ ಬೌರಿಂಗ್ ಕ್ಲಬ್ ಸೇರಿದಂತೆ ಪ್ರಮುಖ ಕ್ಲಬ್‌ಗಳಲ್ಲಿ ತಪಾಸಣೆ ನಡೆಸಲಾಗಿದೆ. ಕೆಲವು ಕ್ಲಬ್‌ಗಳ ಶೈತ್ಯಾಗಾರಗಳಲ್ಲಿ ತಿಂಗಳುಗಟ್ಟಲೆ ಹಳೆಯದಾದ ಹಾಗೂ ಅವಧಿ ಮೀರಿದ ಮಾಂಸ ಮತ್ತು ಮೀನು ಸಂಗ್ರಹಿಸಿರುವುದು ಪತ್ತೆಯಾಗಿದೆ. ತಯಾರಿಸಿದ ದಿನಾಂಕ ನಮೂದಿಸದ ಆಹಾರ ಪದಾರ್ಥಗಳನ್ನೂ ಸಂಗ್ರಹಿಸಿಡಲಾಗಿತ್ತು.

ಅಡುಗೆಮನೆಗಳಲ್ಲಿ ಜಿರಳೆಗಳ ಹಾವಳಿ ಕಂಡುಬಂದಿದ್ದು, ಸ್ವಚ್ಛತೆ ಮತ್ತು ನೈರ್ಮಲ್ಯಕ್ಕೆ ಆದ್ಯತೆ ನೀಡದಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ. ಪಾತ್ರೆಗಳನ್ನು ತೊಳೆಯುವ ಸ್ಥಳದಲ್ಲಿ ಬಿಸಿನೀರಿನ ವ್ಯವಸ್ಥೆಯೂ ಇರಲಿಲ್ಲ. ಆಹಾರ ತಯಾರಿಸುವ ಮತ್ತು ಬಡಿಸುವ ಸಿಬ್ಬಂದಿ ವೈಯಕ್ತಿಕ ಸ್ವಚ್ಛತೆಯ ನಿಯಮಗಳನ್ನು ಪಾಲಿಸದಿರುವುದು ಕಂಡುಬಂದಿದೆ.

ಇದಲ್ಲದೆ, ಸಸ್ಯಾಹಾರ ಮತ್ತು ಮಾಂಸಾಹಾರ ಪದಾರ್ಥಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಬೇಕೆಂಬ ನಿಯಮವನ್ನೂ ಕೆಲವು ಕ್ಲಬ್‌ಗಳು ಉಲ್ಲಂಘಿಸಿರುವುದು ಪತ್ತೆಯಾಗಿದೆ.

ನಿಯಮ ಉಲ್ಲಂಘಿಸಿದ ಚಿನ್ನಸ್ವಾಮಿ ಕ್ರೀಡಾಂಗಣ ಕ್ಲಬ್, ಮಹಾಲಕ್ಷ್ಮಿ ಲೇಔಟ್ ಕ್ಲಬ್ ಸೇರಿದಂತೆ ಹಲವು ಕ್ಲಬ್‌ಗಳಿಗೆ ಆಹಾರ ಸುರಕ್ಷತಾ ಇಲಾಖೆ ನೋಟಿಸ್ ಜಾರಿಗೊಳಿಸಿದೆ. ಮುಂದಿನ ದಿನಗಳಲ್ಲಿ ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳ ಮೇಲೂ ದಿಢೀರ್‌ ತಪಾಸಣೆ ನಡೆಸಲಾಗುವುದು. ಆಹಾರ ಸುರಕ್ಷತಾ ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಇಲಾಖೆ ಎಚ್ಚರಿಸಿದೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande