ಸೇವಾದಳ ಸ್ಥಾಪಕ ನಾ.ಸು.ಹರ್ಡೀಕರ್ ಪುಣ್ಯ ಸ್ಮರಣೆ
ಸೇವಾದಳ ಸ್ಥಾಪಕ ನಾ.ಸು.ಹರ್ಡೀಕರ್ ಪುಣ್ಯ ಸ್ಮರಣೆ
ಕೋಲಾರ ನಗರದಲ್ಲಿ ಭಾರತ ಸೇವಾದಳ ಸಂಸ್ಥಾಪಕ ನಾ.ಸು.ಹರ್ಡೀಕರ್ ರ ೫೧ ನೇ ಪುಣ್ಯಸ್ಮರಣೆಯನ್ನು ಆಚರಿಸಲಾಯಿತು.


ಕೋಲಾರ, 26 ಆಗಸ್ಟ್ (ಹಿ.ಸ):

ಆ್ಯಂಕರ್ : ಸೇವಾ ಭಾವನೆಯನ್ನೇ ಜೀವನವನ್ನಾಗಿಸಿಕೊಂಡು ಭಾರತ ಸೇವಾದಳ ಸ್ಥಾಪನೆಯ ಮೂಲಕ ದೇಶಪ್ರೇಮವನ್ನು ಸಮಾಜದಲ್ಲಿ ಭಿತ್ತಿದ ನಾರಾಯಣ ಸುಬ್ಬರಾವ್ ಹರ್ಡೀಕರ್ ಅವರ ಜನ್ಮ ದಿನಾಚರಣೆಯನ್ನು ರಾಷ್ಟ್ರೀಯ ಕಾರ್ಯಕ್ರಮವಾಗಿ ಇಡೀ ದೇಶದಲ್ಲಿ ಆಚರಿಸುವಂತಾಗಬೇಕು ಎಂದು ಭಾರತ ಸೇವಾದಳ ಜಿಲ್ಲಾಧ್ಯಕ್ಷ ಕೆ.ಎಸ್.ಗಣೇಶ್ ಕರೆ ನೀಡಿದರು.

ನಗರದ ಭಾರತ ಸೇವಾದಳ ಕಚೇರಿಯಲ್ಲಿ ನಾ.ಸು.ಹರ್ಡೀಕರ್ ಅವರ ೫೧ನೇ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಕರ್ನಾಟಕದಲ್ಲಿ ಜನಿಸಿ, ಚಿಕ್ಕಂದಿನಲ್ಲಿಯೇ ತಂದೆ ತಾಯಿಯನ್ನು ಕಳೆದುಕೊಂಡರೂ ಎದೆಗುಂದದೆ ಸೇವಾ ಮನೋಭಾವನೆ ಮೈಗೂಡಿಸಿಕೊಂಡು, ವೈದ್ಯರಾದ ನಂತರ ಸ್ವಾತಂತ್ರ್ಯ ಚಳವಳಿಗೆ ಧುಮುಕಿ ಬ್ರಿಟೀಷರ ವಿರುದ್ಧ ಸಮರಶೀಲವಾಗಿ ಹೋರಾಡಲು ಹಿಂದೂಸ್ತಾನಿ ಸೇವಾದಳ ಎಂಬ ಸಂಘಟನೆಯನ್ನು ಸ್ಥಾಪಿಸಿದ ಕೀರ್ತಿ ನಾ.ಸು.ಹರ್ಡೀಕರ್ ಅವರಿಗೆ ಸಲ್ಲುತ್ತದೆ. ಕರ್ನಾಟಕ ಗಾಂಧಿ ಹೆಸರಿನಿಂದ ಖ್ಯಾತಿ ಪಡೆದಿರುವ ನಾ.ಸು.ಹರ್ಡೀಕರ್ ಸ್ವಾತಂತ್ರ ಹೋರಾಟಗಾರರಲ್ಲಿ ಶಿಸ್ತು, ಧೈರ್ಯ ಹಾಗೂ ತ್ಯಾಗ ಮನೋಭಾವನೆಯನ್ನು ಹಿಂದೂಸ್ತಾನಿ ಸೇವಾದಳದ ಮೂಲಕ ಪರಿಚಯಿಸಿ ಸ್ವಾತಂತ್ರ ಸಂಗ್ರಾಮವನ್ನು ಚುರುಕುಗೊಳಿಸಿದ ಮಹನೀಯರಲ್ಲಿ ಪ್ರಮುಖರೆಂದು ತಿಳಿಸಿದರು.

ಸ್ವಾತಂತ್ರ ನಂತರ ಹಿಂದೂಸ್ತಾನಿ ಸೇವಾದಳವು ಶಿಕ್ಷಣ ಇಲಾಖೆಯ ಭಾಗವಾಗಿ ಭಾರತ ಸೇವಾದಳವಾಗಿ ಬದಲಾಗಿದೆ, ಜಾತಿ, ಮತ, ಧರ್ಮಗಳ ಬೇಧವಿಲ್ಲದೆ ಪ್ರತಿಯೊಬ್ಬರೂ ಭಾರತೀಯರು, ರಾಷ್ಟ್ರ ಗೀತೆ, ರಾಷ್ಟ್ರ ಧ್ವಜಕ್ಕೆ ಗೌರವ ಸಲ್ಲಿಸುವ ವಿಧಾನಗಳ ಕುರಿತು ತರಬೇತಿ ನೀಡುವ ದೇಶದ ಏಕೈಕ ಸಂಸ್ಥೆಯಾಗಿ ಭಾರತ ಸೇವಾದಳ ಕಾರ್ಯನಿರ್ವಹಿಸುತ್ತಿದೆ ಎಂದು ವಿವರಿಸಿದರು.

ರಾಷ್ಟ್ರ ಧ್ವಜ ಸಂಹಿತೆ ರೂಪಿಸುವುದರ ಜೊತೆಗೆ, ಸ್ವಾತಂತ್ರ ಸಂಗ್ರಾಮಕ್ಕೆ ಶಿಸ್ತು ಮೂಡಿಸುವ ಸಲುವಾಗಿಯೇ ಹಿಂದೂಸ್ತಾನಿ ಸೇವಾದಳವನ್ನು ನೂರು ವರ್ಷಗಳ ಹಿಂದೆ ಆರಂಭಿಸಿದ್ದರು. ಸ್ವಾತಂತ್ರ ನಂತರ ಭಾರತ ಸೇವಾದಳ ರಾಜಕೀಯ ರಹಿತ ಸಂಘಟನೆಯಾಗಿ ಸೇವೆ ಮಾಡಲು ಯೋಜಿಸಿದರೆಂದರು. ಇಂತ ಸೇವಾದಳ ಚಟುವಟಿಕೆಗಳು ಕೇವಲ ಕರ್ನಾಟಕಕ್ಕೆ ಸೀಮಿತವಾಗದೆ ದೇಶದ ಎಲ್ಲಾ ರಾಜ್ಯಗಳಲ್ಲಿಯೂ ನಾ.ಸು.ಹರ್ಡೀಕರ್ ಸ್ಥಾಪಿತ ಸೇವಾದಳ ಚಟುವಟಿಕೆಗಳು ನಡೆಯುವಂತಾಗಬೇಕೆಂದರು.

ಭಾರತ ಸೇವಾದಳ ಜಿಲ್ಲಾ ಸಮಿತಿ ಸದಸ್ಯ ಆರ್.ಶ್ರೀನಿವಾಸನ್ ಮಾತನಾಡಿ, ಸೇವೆಗಾಗಿ ಬಾಳು ಎಂಬ ಧ್ಯೇಯವಾಕ್ಯದಡಿ ಭಾರತ ಸೇವಾದಳ ಕಾರ್ಯನಿರ್ವಹಿಸುತ್ತಿದ್ದು, ಇಂದು ದೇಶ ಪ್ರೇಮ ಮರೆಯಾಗುತ್ತಿದೆ, ಯುವಕರು,ಮಕ್ಕಳಲ್ಲಿ ಮೊಬೈಲ್ ಗೀಳು ಹೆಚ್ಚಾಗುತ್ತಿರುವುದು ವಿಷಾದಕರ. ಹರ್ಡಿಕರ ಆದರ್ಶ ಎಂದೆಂದು ಪ್ರಸ್ತುತವಾಗಿದೆ. ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಕುಸಿತದಿಂದಾಗಿ ಸೇವಾದಳ ಚಟುವಟಿಕೆಗಳ ಮೇಲೂ ಪರಿಣಾಮ ಬೀರುತ್ತಿದೆ, ಅನೇಕ ಶಾಲೆಗಳಲ್ಲಿ ಇಂದು ೧೦ಕ್ಕಿಂತ ಕಡಿಮೆ ಮಕ್ಕಳಿರುವುದನ್ನು ಕಂಡಿದ್ದೇವೆ, ಇದು ಸರಿಹೋಗಬೇಕು, ಸಮಾನತೆ ತತ್ವ ಪಾಲನೆಗೆ ಸರ್ಕಾರಿ ಶಾಲೆಗಳು ಉಳಿಯಬೇಕು ಎಂದರು.

ಜಿಲ್ಲಾ ಸಮಿತಿ ಸದಸ್ಯ ಜಿ.ಶ್ರೀನಿವಾಸ್ ಮಾತನಾಡಿ, ಹರ್ಡೀಕರ್ ರೂಪಿಸಿದ ಶಿಸ್ತಿನ ಪಾಠಗಳು ಸ್ವಾತಂತ್ರ ಹೋರಾಟದಲ್ಲಿ ಮಾತ್ರವಲ್ಲದೆ ಪ್ರಸ್ತುತ ಹಾಗೂ ಎಲ್ಲಾ ಕಾಲಕ್ಕೂ ವಿದ್ಯಾರ್ಥಿಗಳಿಗೆ ಅನುಕೂಲವಾಗುವುದರಿಂದ ಸೇವಾದಳ ಶಿಕ್ಷಣ ಪಡೆದುಕೊಳ್ಳಬೇಕೆಂದರು. ಪ್ರತಿ ಶಾಲೆಯಲ್ಲೂ ಸೇವಾದಳ ಘಟಕಗಳ ಸ್ಥಾಪನೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು, ಸೇವಾದಳಕ್ಕೆ ಪ್ರತ್ಯೇಕ ಜಾಗ, ಕಟ್ಟಡ ನಿರ್ಮಾಣಕ್ಕೆ ಅವಕಾಶ ಕಲ್ಪಿಸಬೇಕು ಈ ನಿಟ್ಟಿನಲ್ಲಿ ನಾವು ಶ್ರಮಿಸೋಣ ಎಂದರು.

ನಾ.ಸು.ಹರ್ಡೀಕರ್ ಭಾವಚಿತ್ರಕ್ಕೆ ಅತಿಥಿಗಳು ಪುಷ್ಪಾರ್ಚನೆ ನೆರವೇರಿಸಿದರು. ಭಾರತ ಸೇವಾದಳ ಜಿಲ್ಲಾ ಸಂಘಟಕ ಎಂ.ಬಿ.ದಾನೇಶ್ ಕಾರ್ಯಕ್ರಮ ನಿರ್ವಹಿಸಿದರು

ಕಾರ್ಯಕ್ರಮದಲ್ಲಿ ಸೇವಾದಳ ಜಿಲ್ಲಾ,ತಾಲ್ಲೂಕು ಸಮಿತಿ ಸದಸ್ಯರಾದ ಅಪ್ಪಿ ನಾರಾಯಣಸ್ವಾಮಿ, ತಾಲ್ಲೂಕು ಅಧ್ಯಕ್ಷ ಹಾಗೂ ಶಿಕ್ಷಕ ಶ್ರೀರಾಮ್, ಮುನಿವೆಂಕಟಯಾದವ್, ಮಲ್ಲಿಕಾರ್ಜುನ್,ವಿನಯ್,ರಾಜು, ಶ್ರೀನಿವಾಸಲು,ಶ್ರೀನಿವಾಸಪುರದ ರವಿಕುಮಾರ್,ಪುಟಾಣಿ ಫಲ್ಗುಣಿ ಭಾಗಿಯಾಗಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande