ವಕಾರ ಸಾಲಿನಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಾಣ: ಯೋಜನೆ ಕೈಬಿಡದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ
ಗದಗ, 26 ಆಗಸ್ಟ್ (ಹಿ.ಸ.) ಆ್ಯಂಕರ್:- ಗದಗ-ಬೆಟಗೇರಿ ನಗರಸಭೆಯ ವಕಾರ ಸಾಲಿನಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಾಣ ಮಾಡುವ ಯೋಜನೆಯನ್ನು ಕೂಡಲೇ ಕೈಬಿಡಬೇಕು. ಇಲ್ಲವಾದರೆ ಉಗ್ರ ಹೋರಾಟ ನಡೆಸುವುದರ ಜೊತೆಗೆ ನ್ಯಾಯಾಲಯದ ಮೊರೆ ಹೋಗಿ ತಡೆಯಾಜ್ಞೆ ತರಲಾಗುವುದು ಎಂದು ಜೆಡಿಎಸ್ ರಾಜ್ಯ ವಕ್ತಾರ ವೆಂಕನಗೌಡ ಗೋವಿಂದಗ
ಫೋಟೋ


ಗದಗ, 26 ಆಗಸ್ಟ್ (ಹಿ.ಸ.)

ಆ್ಯಂಕರ್:- ಗದಗ-ಬೆಟಗೇರಿ ನಗರಸಭೆಯ ವಕಾರ ಸಾಲಿನಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಾಣ ಮಾಡುವ ಯೋಜನೆಯನ್ನು ಕೂಡಲೇ ಕೈಬಿಡಬೇಕು. ಇಲ್ಲವಾದರೆ ಉಗ್ರ ಹೋರಾಟ ನಡೆಸುವುದರ ಜೊತೆಗೆ ನ್ಯಾಯಾಲಯದ ಮೊರೆ ಹೋಗಿ ತಡೆಯಾಜ್ಞೆ ತರಲಾಗುವುದು ಎಂದು ಜೆಡಿಎಸ್ ರಾಜ್ಯ ವಕ್ತಾರ ವೆಂಕನಗೌಡ ಗೋವಿಂದಗೌಡರ ಎಚ್ಚರಿಸಿದರು.

ಗದಗ ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗದಗ-ಬೆಟಗೇರಿ ನಗರಸಭೆಗೆ ಸೇರಿದ ಸುಮಾರು 34 ಎಕರೆ 32 ಗುಂಟೆ ವಕಾರ ಸಾಲು ನಿವೇಶನದಲ್ಲಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲು ಬಹುರಾಷ್ಟ್ರೀಯ ಕಂಪನಿಗೆ ಗುತ್ತಿಗೆ ನೀಡುವ ಪ್ರಸ್ತಾವನೆಯು ಸ್ಥಳೀಯ ವ್ಯಾಪಾರಿಗಳಿಗೆ ಯಾವುದೇ ರೀತಿಯ ಪ್ರಯೋಜನ ನೀಡುವುದಿಲ್ಲ ಎಂದು ಆರೋಪಿಸಿದರು.

ನಗರಸಭೆಯ ಆಸ್ತಿಯನ್ನು ಬಂಡವಾಳಶಾಹಿಗಳ ಕೈಗೆ ಒಪ್ಪಿಸುವ ಪ್ರಯತ್ನ ನಡೆಯುತ್ತಿದೆ. ನಗರಸಭೆಯ ಆಸ್ತಿಯನ್ನು ಅಭಿವೃದ್ಧಿಪಡಿಸಿ ನಗರಸಭೆಗೆ ಆದಾಯ ತರುವ ಹೆಸರಿನಲ್ಲಿ ಖಾಸಗಿ ಕಂಪನಿಗೆ ಗುತ್ತಿಗೆ ನೀಡುವುದು ರಿಯಲ್ ಎಸ್ಟೇಟ್ ವ್ಯವಹಾರದ ರೀತಿಯಾಗಿದೆ ಎಂದು ಅವರು ದೂರಿದರು.

ಗದಗ-ಬೆಟಗೇರಿ ವಕಾರ ಸಾಲು ಅಭಿವೃದ್ಧಿ ಪ್ರಾಧಿಕಾರ ರಚಿಸಿರುವ ಶಾಸಕ ಎಚ್.ಕೆ. ಪಾಟೀಲರು, ನಗರಸಭೆಗೆ ಯಾವುದೇ ಹಣ ನೀಡದೆ ನಗರಸಭೆಯ ಆಸ್ತಿಯನ್ನು ಪ್ರಾಧಿಕಾರದ ವ್ಯಾಪ್ತಿಗೆ ತೆಗೆದುಕೊಂಡು ಸಿಂಗಪೂರ್ ಮಾದರಿಯಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸುವ ಯೋಜನೆ ರೂಪಿಸಿದ್ದಾರೆ. ಬಾಡಿಗೆದಾರರು 35 ವರ್ಷಗಳ ಕಾಲ ಬಾಡಿಗೆ ಪಾವತಿಸಿದ ಬಳಿಕ ಗುತ್ತಿಗೆದಾರ ಕಂಪನಿ ಆಸ್ತಿಯನ್ನು ಬಿಟ್ಟುಕೊಡಲಿದೆ ಎಂಬ ಪ್ರಸ್ತಾವನೆ ಇದೆ. ಇದರಿಂದ ಸ್ಥಳೀಯ ಸಣ್ಣ ವ್ಯಾಪಾರಸ್ಥರಿಗೆ ಯಾವುದೇ ಶಾಶ್ವತ ಪ್ರಯೋಜನವಾಗುವುದಿಲ್ಲ ಎಂದು ವೆಂಕನಗೌಡ ಆರೋಪಿಸಿದರು.

ಸ್ಥಳೀಯ ವ್ಯಾಪಾರಸ್ಥರ ಬಗ್ಗೆ ನಿಜವಾದ ಕಾಳಜಿ ಇದ್ದರೆ ಸರ್ಕಾರದಿಂದ ಅನುದಾನ ಪಡೆದು ವಾಣಿಜ್ಯ ಸಂಕೀರ್ಣ ನಿರ್ಮಿಸಬೇಕು. ಹುಬ್ಬಳ್ಳಿ ಸೇರಿದಂತೆ ವಿವಿಧ ನಗರಗಳಲ್ಲಿ ಅನುಸರಿಸಿರುವ ಮಾದರಿಯಂತೆ ಸ್ಥಳೀಯ ಬಡ ಮತ್ತು ಸಣ್ಣ ವ್ಯಾಪಾರಸ್ಥರಿಗೆ ಮಳಿಗೆಗಳನ್ನು ಒದಗಿಸಿ ಅವರ ಜೀವನೋಪಾಯಕ್ಕೆ ನೆರವಾಗಬೇಕು ಎಂದು ಅವರು ಆಗ್ರಹಿಸಿದರು.

ಗದಗ ನಗರವನ್ನು ನೂರು ದಿನಗಳಲ್ಲಿ ಮಾದರಿ ನಗರವನ್ನಾಗಿ ಮಾಡುತ್ತೇವೆ ಎಂದು ಹೇಳಿಕೊಳ್ಳುವ ಜನಪ್ರತಿನಿಧಿಗಳು ಮೊದಲು ನಗರದ ಮೂಲಭೂತ ಸಮಸ್ಯೆಗಳನ್ನು ಪರಿಹರಿಸಬೇಕು. ದಶಕಗಳು ಕಳೆದರೂ ಗದಗ-ಬೆಟಗೇರಿ ಜನರಿಗೆ ಸಮರ್ಪಕ ಕುಡಿಯುವ ನೀರು ಹಾಗೂ ಒಳಚರಂಡಿ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗಿಲ್ಲ. ಇಂತಹ ಮೂಲಭೂತ ಸಮಸ್ಯೆಗಳನ್ನು ಬಗೆಹರಿಸುವ ಬದಲು ನಗರಸಭೆಯ ಅಮೂಲ್ಯ ಆಸ್ತಿಯನ್ನು ಖಾಸಗಿ ಕಂಪನಿಗಳಿಗೆ ನೀಡುವ ಯೋಜನೆ ರೂಪಿಸಿರುವುದು ಖಂಡನೀಯ ಎಂದು ಅವರು ಹೇಳಿದರು.

ವಕಾರ ಸಾಲಿನ ಆಸ್ತಿ ನಗರಸಭೆಯ ಸ್ವತ್ತು. ಈ ಆಸ್ತಿಯಿಂದ ಸ್ಥಳೀಯರಿಗೆ ಉದ್ಯೋಗ ಮತ್ತು ವ್ಯಾಪಾರಾವಕಾಶ ಕಲ್ಪಿಸುವಂತಹ ಯೋಜನೆ ರೂಪಿಸಬೇಕು. ಖಾಸಗಿ ಕಂಪನಿಗಳಿಗೆ ದೀರ್ಘಾವಧಿಯ ಗುತ್ತಿಗೆ ನೀಡುವ ಮೂಲಕ ನಗರಸಭೆಯ ಆಸ್ತಿಯನ್ನು ಪರಭಾರೆ ಮಾಡುವ ಕ್ರಮವನ್ನು ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳುವುದಿಲ್ಲ ಎಂದು ವೆಂಕನಗೌಡ ಸ್ಪಷ್ಟಪಡಿಸಿದರು.

ಯೋಜನೆಯನ್ನು ಸರ್ಕಾರ ಕೂಡಲೇ ಮರುಪರಿಶೀಲಿಸಿ ಕೈಬಿಡಬೇಕು. ಇಲ್ಲವಾದರೆ ಜೆಡಿಎಸ್ ವತಿಯಿಂದ ಹೋರಾಟ ತೀವ್ರಗೊಳಿಸಲಾಗುವುದು. ಅಗತ್ಯವಿದ್ದರೆ ನ್ಯಾಯಾಲಯದ ಮೊರೆ ಹೋಗಿ ಕಾನೂನು ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಪ್ರಧಾನ ಕಾರ್ಯದರ್ಶಿಗಳಾದ ಎಚ್.ಎಸ್. ಕೊಪ್ಪಳ, ಬಸವರಾಜ ತಿಪ್ಪಣ್ಣವರ, ಪ್ರಪುಲ್ ಪುಣೇಕರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande