
ಕೋಲಾರ, 26 ಆಗಸ್ಟ್ (ಹಿ.ಸ.):
ಆ್ಯಂಕರ್ : ಕೋಲಾರದಲ್ಲಿ ಮುಸ್ಲೀಂ ಬಾಂಧವರು ಪ್ರವಾದಿಯಾದ ಹಜರತ್ ಮೊಹಮ್ಮದ್ ಪೈಗಂಬರ್ ಜನ್ಮ ದಿನಾಚರಣೆ ಪ್ರತೀಕವಾದ ಈದ್ ಮಿಲಾದ್ ಹಬ್ಬವನ್ನು ಅತ್ಯಂತ ಸಡಗರ, ಶ್ರದ್ಧೆ ಹಾಗೂ ಭಕ್ತಿಯಿಂದ ಆಚರಿಸಿದರು.
ಈದ್ ಮಿಲಾದ್ ಎನ್ನುವುದು ಕೇವಲ ಹುಟ್ಟುಹಬ್ಬದ ಆಚರಣೆಯಲ್ಲ; ಬದಲಾಗಿ ಪ್ರವಾದಿ ಮೊಹಮ್ಮದ್ ಅವರು ತೋರಿಸಿಕೊಟ್ಟ ಸನ್ಮಾರ್ಗ, ಪ್ರೀತಿ ಮತ್ತು ಮಾನವೀಯ ಮೌಲ್ಯಗಳನ್ನು ನಮ್ಮ ದೈನಂದಿನ ಜೀವನದಲ್ಲಿ ಪಾಲಿಸುವುದಾಗಿ ಪ್ರತಿಜ್ಞೆ ಮಾಡುವ ಪವಿತ್ರ ದಿನವಾಗಿದೆ.
ನಗರದ ಅಂಜುಮಾನ್ ಇಸ್ಲಾಮಿಯ ಸಂಸ್ಥೆಯಿಂದ ಧ್ವಜಾರೋಹಣ ನೆರವೇರಿಸಿದ ನಂತರ ಪ್ರಮುಖ ಬೀದಿಗಳಲ್ಲಿ ಮುಸ್ಲೀಂ ಬಾಂಧವರು ಮೆರವಣಿಗೆ ನಡೆಸಿದರು. ಈದ್ಗಾ ಮೈದಾನದಲ್ಲಿ ಸಂಜೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ನಗರದಲ್ಲಿ ಕ್ಲಾಕ್ ಟವರ್ ಸೇರಿದಂತೆ ಇತರ ಪ್ರಮುಖ ಬೀದಿಗಳಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು.
ಜಮಾಅತೆ ಇಸ್ಲಾಮಿ ಹಿಂದ್ ಸಂಘಟನೆಯ ಮುಖಂಡ ಮುಬಾರಕ್ ಮಾತನಾಡಿ ಪ್ರವಾದಿ ಮೊಹಮದ್ ಪೈಗಂಬರ್ ಜನಿಸಿದಾಗ ಸಮಾಜ ಅಂಧಕಾರದಲ್ಲಿ ಮುಳುಗಿತ್ತು. ಅಲ್ಲಿ ದಬ್ಬಾಳಿಕೆ ಮತ್ತು ದೌರ್ಜನ್ಯ ಇತ್ತು. ಪ್ರವಾದಿಯವರು ಮೆಕ್ಕಾ ಸಮಾಜ ಸುಧಾರಣೆಯ ಕೆಲಸ ಆರಂಭಿಸಿದರು. ಒಳ್ಳೆಯ ಸಮಾಜ ನಿರ್ಮಾಣಕ್ಕೆ ದುಶ್ಚಟಗಳು ಮಧ್ಯ ಸೇವನೆ ಬಡ್ಡಿ ವ್ಯವಹಾರವನ್ನು ಪ್ರವಾದಿಯವರು ನಿಷೇದಿಸಿದರು ಎಂದು ಪ್ರವಾದಿಯವರ ಸಂದೇಶವನ್ನು ಸ್ಮರಿಸಿದರು.
ಮೂವತ್ತು ದಿನಗಳ ಚಂದ್ರಮಾನ ಕ್ಯಾಲೆಂಡರ್ನ ರಬಿ-ಉಲ್-ಅವ್ವಲ್ ತಿಂಗಳ ೧೨ ನೇ ದಿನದಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. ಪ್ರವಾದಿ ಮೊಹಮ್ಮದ್ ಅವರು ಜಗತ್ತಿಗೆ ಸತ್ಯ, ಶಾಂತಿ, ಕರುಣೆ, ಸಹನೆ, ಸಮಾನತೆ ಮತ್ತು ಮಾನವೀಯತೆಯ ಸಂದೇಶಗಳನ್ನು ನೀಡಿದರು. ಅವರ ಆದರ್ಶ ಜೀವನಶೈಲಿಯನ್ನು (ಸುನ್ನತ್) ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಈ ದಿನವು ನಮಗೆ ಸ್ಫೂರ್ತಿ ನೀಡುತ್ತದೆ ಎಂದು ತಿಳಿಸಿದರು.
ಮಾಜಿ ವಿಧಾನ ಪರಿಷತ್ ಸದಸ್ಯ ನಸೀರ್ ಅಹಮದ್ ಮಾತನಾಡಿ ಮಿಲಾದ್ ಹಬ್ಬವು ಕೇವಲ ಒಂದು ಸಮುದಾಯಕ್ಕೆ ಮಾತ್ರ ಸೀಮಿತವಾಗಿರದೆ, ಎಲ್ಲಾ ಧರ್ಮಗಳ ಜನರೊಂದಿಗೆ ಪ್ರೀತಿ, ವಿಶ್ವಾಸ ಹಾಗೂ ಭಾವೈಕ್ಯತೆಯಿಂದ ಬದುಕಬೇಕು ಎಂಬ ಸಂದೇಶವನ್ನು ಸಾರುತ್ತದೆ.
ಅಂಜುಮಾನ್ ಎ ಇಸ್ಲಾಮಿಯ ಸಂಘಟನೆಯ ಜಿಲ್ಲಾಧ್ಯಕ್ಷ ಜಮೀರ್ ಪಾಷ ಮಾತನಾಡಿ ಈ ದಿನದಂದು ಬಡವರಿಗೆ, ಅಶಕ್ತರಿಗೆ ಮತ್ತು ನಿರ್ಗತಿಕರಿಗೆ ಆಹಾರ, ಬಟ್ಟೆ ಹಾಗೂ ಧನ ಸಹಾಯವನ್ನು ನೀಡುವುದು ಅತ್ಯಂತ ಶ್ರೇಷ್ಠ ಹಾಗೂ ಪುಣ್ಯದ ಕೆಲಸವೆಂದು ಪರಿಗಣಿಸಲಾಗಿದೆ. ಮಸೀದಿಗಳಲ್ಲಿ ಮತ್ತು ಸಾರ್ವಜನಿಕ ವೇದಿಕೆಗಳಲ್ಲಿ ಪ್ರವಾದಿಯವರ ಜೀವನ ಚರಿತ್ರೆ, ಅವರ ಸದ್ಗುಣಗಳು ಹಾಗೂ ಅವರು ಪಟ್ಟ ಕಷ್ಟಗಳ ಕುರಿತು ಧಾರ್ಮಿಕ ಉಪನ್ಯಾಸಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಅಲ್ಲದೆ, ದೇಶದಲ್ಲಿ ಶಾಂತಿ ಮತ್ತು ಸಮೃದ್ಧಿಗಾಗಿ ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸಲಾಯಿತು
ಅನೇಕ ಕಡೆಗಳಲ್ಲಿ ಯುವಕರು ಮತ್ತು ಸಾರ್ವಜನಿಕರು ಶಾಂತಿಯುತವಾಗಿ ಮೆರವಣಿಗೆಗಳನ್ನು ನಡೆಸಿ, ಪ್ರವಾದಿಯವರ ಮೇಲಿನ ತಮ್ಮ ಅಪಾರ ಭಕ್ತಿಯನ್ನು ಹಸಿರು ಧ್ವಜಗಳನ್ನು ಹಿಡಿದು ಸ್ತುತಿಗೀತೆಗಳ ಮೂಲಕ ವ್ಯಕ್ತಪಡಿಸುತ್ತಾರೆ.
ಕಾರ್ಯಕ್ರಮದಲ್ಲಿ ಹಾಗೂ ದಾರ್ಮಿಕ ಮುಖಂಡರು ಪಾಲ್ಗೊಂಡಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್