
ಕೋಲಾರ,26 ಆಗಸ್ಟ್ (ಹಿ.ಸ):
ಆ್ಯಂಕರ್ : ದುಡಿಯುವ ಹಾಗೂ ತುಳಿತಕ್ಕೊಳಗಾದ ಜನರ ಸಮಸ್ಯೆಗಳಿಗೆ ನೈಜ ಕಾರಣಗಳನ್ನು ಗುರುತಿಸಬೇಕು. ಅವುಗಳ ಪರಿಹಾರಕ್ಕಾಗಿ ನಿರಂತರ ಹೋರಾಟ ರೂಪಿಸುವುದು ಸಿಪಿಐಎಂ ಪಕ್ಷದ ಆಶಯವಾಗಿದೆ ಎಂದು ಪಕ್ಷದ ರಾಜ್ಯ ಮುಖಂಡ ಆನೇಕಲ್ ಮಂಜುನಾಥ್ ತಿಳಿಸಿದರು.
ಕೋಲಾರ ನಗರದ ಹೊರವಲಯದ ತೇರಹಳ್ಳಿ ಬೆಟ್ಟದ ಆದಿಮ ಸಾಂಸ್ಕೃತಿಕ ಕೇಂದ್ರದಲ್ಲಿ ಬುಧವಾರ ನಡೆದ ಸಿಪಿಐಎಂ ಪಕ್ಷದ ಎರಡು ದಿನಗಳ ಜಿಲ್ಲಾ ಮಟ್ಟದ ಸಂಘಟನಾ ಕಾರ್ಯಾಗಾರದಲ್ಲಿ ಮಾತನಾಡಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನಸಾಮಾನ್ಯರಿಗೆ ಆಹಾರ, ಆರೋಗ್ಯ, ಶಿಕ್ಷಣ, ವಸತಿ ಮತ್ತು ಉದ್ಯೋಗ ಭದ್ರತೆ ಕಲ್ಪಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿವೆ ಎಂದು ಆರೋಪಿಸಿದರು.
ಸ್ವಾತಂತ್ರ್ಯ ಬಂದು ಹಲವು ದಶಕಗಳು ಕಳೆದರೂ ದೇಶದ ದೊಡ್ಡ ಸಂಖ್ಯೆಯ ಕುಟುಂಬಗಳಿಗೆ ಸ್ವಂತ ನಿವೇಶನ ಹಾಗೂ ವಸತಿ ಸೌಲಭ್ಯ ದೊರೆತಿಲ್ಲ. ಬಡವರಿಗೆ ನೀಡಿರುವ ಮನೆಗಳಿಗೆ ವಿದ್ಯುತ್ ಮೀಟರ್ ಅಳವಡಿಸಿ, ಹೆಚ್ಚಿನ ಬಿಲ್ಗಳ ನೆಪದಲ್ಲಿ ಸಂಪರ್ಕ ಕಡಿತಗೊಳಿಸಲಾಗುತ್ತಿದೆ. ಇದರಿಂದ ಬಡ ಕುಟುಂಬಗಳು ಮತ್ತೆ ಕತ್ತಲೆಯಲ್ಲಿ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.
ಪ್ರತಿವರ್ಷ ಕೋಟ್ಯಂತರ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಬದಲು ಇರುವ ಉದ್ಯೋಗಗಳನ್ನೂ ಕಡಿಮೆ ಮಾಡಿದೆ. ಇದರಿಂದ ಯುವಜನತೆ ನಿರುದ್ಯೋಗದ ಸಮಸ್ಯೆ ಎದುರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿಪಿಐಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಪಿ.ಆರ್. ಸೂರ್ಯನಾರಾಯಣ ಮಾತನಾಡಿ, ಶೋಷಣೆ ಮುಕ್ತ ಸಮಾಜ ನಿರ್ಮಾಣದ ಗುರಿಯೊಂದಿಗೆ ಕಾರ್ಯನಿರ್ವಹಿಸುತ್ತಿರುವ ಪಕ್ಷದ ಸದಸ್ಯರಿಗೆ ಸೈದ್ಧಾಂತಿಕ ತರಬೇತಿ ನೀಡುವುದು ಶಿಬಿರದ ಉದ್ದೇಶವಾಗಿದೆ. ಜಿಲ್ಲೆಯ ರೈತರ ಮೇಲಿನ ಅರಣ್ಯ ಇಲಾಖೆ ದೌರ್ಜನ್ಯ, ಕಾರ್ಮಿಕರ ಸಮಸ್ಯೆ, ಸರ್ಕಾರಿ ಆಸ್ಪತ್ರೆಗಳ ಮೂಲಸೌಕರ್ಯ ಕೊರತೆ, ವಿಧವಾ ಹಾಗೂ ವೃದ್ಧಾಪ್ಯ ವೇತನ ಸೇರಿದಂತೆ ಸ್ಥಳೀಯ ಸಮಸ್ಯೆಗಳ ವಿರುದ್ಧ ನಿರ್ಣಾಯಕ ಹೋರಾಟ ನಡೆಸಲು ಶಿಬಿರ ಸಹಕಾರಿಯಾಗಬೇಕು ಎಂದರು.
ಶಿಬಿರದಲ್ಲಿ ವಿವಿಧ ವಿಷಯಗಳ ಕುರಿತು ಚರ್ಚೆ ಹಾಗೂ ವಿಚಾರ ವಿನಿಮಯ ನಡೆಯಿತು. ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಪಾತಕೋಟ ಪಿ.ಆರ್. ನವೀನ್ ಕುಮಾರ್, ಪಿ. ತಂಗರಾಜ್, ಜಿಲ್ಲಾ ಸಮಿತಿ ಸದಸ್ಯರಾದ ಗಂಗಮ್ಮ, ಎಸ್.ಡಿ. ಆನಂದನ್, ಮಾಲೂರು ಅಶೋಕ್, ನುಕ್ಕನಹಳ್ಳಿ ಶ್ರೀರಾಮ್ ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್