
ಕೋಲಾರ, 26 ಆಗಸ್ಟ (ಹಿ.ಸ.):
ಆ್ಯಂಕರ್ : ಇತ್ತೀಚೆಗೆ ಸ್ವಾರ್ಥ ಮತ್ತು ಅಧಿಕಾರದ ಹುದ್ದೆ ಗಿಟ್ಟಿಸುವ ಸಲುವಾಗಿ ಬರವಣಿಗೆಯನ್ನು ಸ್ವಾರ್ಥಕ್ಕೆ ಬಳಸಿಕೊಳ್ಳುವ ಸಾಹಿತಿಗಳೇ ಹೆಚ್ಚಾಗಿದ್ದಾರೆ ಎಂದು ಮನ್ವಂತರ ಸಂಸ್ಥೆಯ ಅಧ್ಯಕ್ಷ ಪಾ.ಶ್ರೀ.ಅನಂತರಾಂ ಕಳವಳ ವ್ಯಕ್ತಪಡಿಸಿದರು.
ಕೋಲಾರದಲ್ಲಿ ಉಪನ್ಯಾಸಕ ಡಾ.ಬಿ.ಎಸ್.ಶ್ರೀನಿವಾಸ ಪ್ರಸಾದ್ ಅವರ ೫೩ನೇ ಕೃತಿ 'ಬಿದ್ದು ಮೇಲೆದ್ದವರು' ಪುಸ್ತಕ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬರವಣಿಗೆಯಲ್ಲಿ ಬದ್ಧತೆ, ಹುರುಳು ತಿರುಳುಗಳು ಇಲ್ಲದಿದ್ದರೂ ಪ್ರಚಾರ ಗಿಟ್ಟಿಸಲು ಪುಸ್ತಕ ಬರೆಯಬೇಕೆಂಬ ಹುಚ್ಚಿನಲ್ಲಿ ಬರೆದು ರಾಜಕಾರಣಿಗಳ ಬಳಿ ಲಾಬಿ ಮಾಡಿ ಸಾಹಿತಿಗಳ ಕೋಟಾದಲ್ಲಿ ಲಾಭ ಪಡೆದುಕೊಳ್ಳುವವರ ಸಂಖ್ಯೆ ಮಿತಿಮೀರಿದೆ ಇಂದು ವಿಷಾದಿಸಿದರು. ಇಂತಹವರ ಸಾಲಿಗೆ ಸೇರದೆ ಶ್ರೀನಿವಾಸ ಪ್ರಸಾದ ಬರವಣಿಗೆಯನ್ನು ಸಮಾಜಮುಖಿಯಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.
ಕೃತಿಯ ಕುರಿತು ಮಾತನಾಡಿದ ಹಿರಿಯ ಪತ್ರಕರ್ತ ಬಿ.ವಿ.ಗೋಪಿನಾಥ್ ಪ್ರತಿ ಮನೆಯಲ್ಲಿ ಇರಿಸಿಕೊಂಡು ಮಕ್ಕಳಿಗೆ ಓದಿಸಿ ಅವರಲ್ಲಿ ಬದುಕಿನ ಧೈರ್ಯ ಮತ್ತು ಧೈರ್ಯ ಬಳಸುವ ನಿಟ್ಟಿನಲ್ಲಿ ಬಿದ್ದು ಮೇಲೆದ್ದವರು ಪುಸ್ತಕ ಸಂಗ್ರಹ ಯೋಗ್ಯವಾಗಿದೆ. ಮಕ್ಕಳನ್ನು ಅಂಕ ಗಳಿಕೆಯ ಯಂತ್ರಗಳಾಗಿ ಮಾರ್ಪಡಿಸಲಾಗುತ್ತಿದೆಯೇ ಹೊರತು ಅವರಲ್ಲಿ ಸವಾಲುಗಳನ್ನು ಎದುರಿಸುವ ಸಾಮರ್ಥ್ಯ ಬೆಳೆಸುತ್ತಿಲ್ಲ. ಇದರಿಂದಾಗಿಯೇ ಐಎಎಸ್ ಐಪಿಎಸ್ ಓದಿದವರು ಸಹ ಸಣ್ಣ ಸಮಸ್ಯೆಯನ್ನೂ ಎದುರಿಸಲಾಗದೆ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎಂದು ಹೇಳಿದರು.
ಜೀವನದಲ್ಲಿ ಎಂತಹ ಕಷ್ಟ ನಷ್ಟ ಮತ್ತು ಸವಾಲುಗಳನ್ನು ಎದುರಿಸಿದರೂ ಎದೆಗುಂದದೆ ತಮ್ಮ ಸಾಧನೆಯ ಮೂಲಕ ಜಗತ್ತಿನ ಗಮನ ಸೆಳೆದಿರುವ ೫೦ ಮಂದಿ ಸಾಧಕರ ಪರಿಚಯಾತ್ಮಕ ಪುಸ್ತಕ ಬಿದ್ದು ಮೇಲೆದ್ದವರು ಶಾಲೆಗಳಲ್ಲಿ ಪಠ್ಯವಾಗಲೂ ಅರ್ಹವಾಗಿದೆ. ಮನೆ ಮನೆಗಳಲ್ಲಿ ಇರಿಸಿ ಮಕ್ಕಳಿಗೆ ಬದುಕಿನ ಮಾರ್ಗದರ್ಶಿಯಾಗಿ ಬಳಕೆ ಮಾಡಿಕೊಳ್ಳುವಂತಿದೆ ಎಂದು ಬಣ್ಣಿಸಿದರು.
ನಿವೃತ್ತ ಮುಖ್ಯೋಪಾಧ್ಯಾಯ ಜಿ.ಶ್ರೀನಿವಾಸ್ ಮಾತನಾಡಿ ಸಾಧಕರ ಬದುಕು ಪ್ರತಿಯೊಬ್ಬರಿಗೂ ಸ್ಪೂರ್ತಿಯಾಗಬೇಕು ಎಂದರು.
ಪತ್ರಕರ್ತ ಕೆ.ಎಸ್.ಗಣೇಶ್ ಮಾತನಾಡಿ, ಸದಾ ಒಂದಿಲ್ಲೊಂದು ಪುಸ್ತಕ ಬಿಡುಗಡೆಯ ಮೂಲಕ ಸಾಹಿತ್ಯ ವಲಯದಲ್ಲಿ ಕ್ರಿಯಾಶೀಲರಾಗಿರುವ ಶ್ರೀನಿವಾಸಪ್ರಸಾದ್ ಬರವಣಿಗೆ ನಿರಂತರ ಮುಂದುವರೆಯಲಿ ಎಂದರು.
ಲೇಖಕ ಶ್ರೀನಿವಾಸಪ್ರಸಾದ್ ಮಾತನಾಡಿ, ಹಣ ಸಂಪಾದನೆ ಅಥವಾ ಯಾವುದೇ ರೀತಿಯ ಸ್ವಾರ್ಥಕ್ಕಾಗಿ ಪುಸ್ತಕಗಳನ್ನು ಬರೆಯುತ್ತಿಲ್ಲ. ಬರವಣಿಗೆ ಮೂಲಕ ಸಮಾಜಕ್ಕೆ ಅನುಕೂಲ ಆಗಬೇಕು ಎಂಬುದೇ ನನ್ನ ಧ್ಯೇಯ. ಕೊನೆಗಾಲದವರೆಗೂ ಇದನ್ನು ನಾನು ಉಳಿಸಿಕೊಂಡು ಹೋಗುವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬೆಮೆಲ್ ಜಯಸಿಂಹ, ಪ್ರಾಧ್ಯಾಪಕ ಡಾ.ಮುರಳಿಧರ್, ಉಪನ್ಯಾಸಕಿ ವಾಣಿಶ್ರೀ, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ನಾಗನಂದ ಕೆಂಪರಾಜ್, ಜ್ಞಾನ ವಿಜ್ಞಾನ ಸಮಿತಿಯ ಪದ್ಮಾವತಿ, ನಿರೂಪಕಿ ಸ್ಪೂರ್ತಿ, ಗಾಯಕರಾದ ಮಂಜುಳ ಕೊಂಡರಾಜನಹಳ್ಳಿ ಮತ್ತು ಶರಣಪ್ಪ ಗಬ್ಬೂರು ಭಾಗಿಯಾಗಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್