18 ವರ್ಷಗಳ ಬಳಿಕ ಗದಗ-ಬೆಟಗೇರಿ ಅವಳಿ ನಗರದಲ್ಲಿ ಶಕ್ತಿ ದೇವತೆಗಳ ಹರಿ ಜಾತ್ರಾ ಮಹೋತ್ಸವ
ಗದಗ, 26 ಆಗಸ್ಟ್ (ಹಿ.ಸ.) ಆ್ಯಂಕರ್:- ಗದಗ-ಬೆಟಗೇರಿ ಅವಳಿ ನಗರದಲ್ಲಿ 18 ವರ್ಷಗಳ ಬಳಿಕ ಶಕ್ತಿ ದೇವತೆಗಳಾದ ಶ್ರೀ ದ್ಯಾಮವ್ವ ಹಾಗೂ ಶ್ರೀ ದುರಗಮ್ಮ ದೇವಿಯರ ಹರಿ ಜಾತ್ರಾ ಮಹೋತ್ಸವ ಅತ್ಯಂತ ಸಂಭ್ರಮ ಹಾಗೂ ಸಡಗರದಿಂದ ನೆರವೇರಿತು. ನಗರದ ಒಕ್ಕಲಗೇರಿ ಓಣಿಯಲ್ಲಿ ನಡೆದ ಈ ಅಪರೂಪದ ಜಾತ್ರಾ ಮಹೋತ್ಸವವನ್ನು ಕಣ
ಫೋಟೋ


ಗದಗ, 26 ಆಗಸ್ಟ್ (ಹಿ.ಸ.)

ಆ್ಯಂಕರ್:- ಗದಗ-ಬೆಟಗೇರಿ ಅವಳಿ ನಗರದಲ್ಲಿ 18 ವರ್ಷಗಳ ಬಳಿಕ ಶಕ್ತಿ ದೇವತೆಗಳಾದ ಶ್ರೀ ದ್ಯಾಮವ್ವ ಹಾಗೂ ಶ್ರೀ ದುರಗಮ್ಮ ದೇವಿಯರ ಹರಿ ಜಾತ್ರಾ ಮಹೋತ್ಸವ ಅತ್ಯಂತ ಸಂಭ್ರಮ ಹಾಗೂ ಸಡಗರದಿಂದ ನೆರವೇರಿತು. ನಗರದ ಒಕ್ಕಲಗೇರಿ ಓಣಿಯಲ್ಲಿ ನಡೆದ ಈ ಅಪರೂಪದ ಜಾತ್ರಾ ಮಹೋತ್ಸವವನ್ನು ಕಣ್ತುಂಬಿಕೊಳ್ಳಲು ಜಿಲ್ಲೆಯ ವಿವಿಧ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು.

ಪಾರಂಪರಿಕ ಆಚರಣೆ, ಧಾರ್ಮಿಕ ವಿಧಿ-ವಿಧಾನ, ಭಕ್ತಿಯ ಘೋಷಣೆ, ಡೊಳ್ಳು-ಸಮ್ಮಾಳಗಳ ನಿನಾದ ಹಾಗೂ ಭಂಡಾರ ಎರೆಚಾಟದೊಂದಿಗೆ ನಡೆದ ಜಾತ್ರೆಯ ಕೊನೆಯ ದಿನ ಅವಳಿ ನಗರದ ಜನರ ಗಮನ ಸೆಳೆಯಿತು. ದೇವಿಯರ ಮೆರವಣಿಗೆ ಸಾಗಿದ ಮಾರ್ಗದುದ್ದಕ್ಕೂ ಭಕ್ತರು ಭಂಡಾರ ಎರೆಚಿ ತಮ್ಮ ಭಕ್ತಿಭಾವವನ್ನು ಮೆರೆದರು.

18 ವರ್ಷಗಳ ಬಳಿಕ ಜಾತ್ರೆ

ಗದಗ ನಗರದ ಒಕ್ಕಲಗೇರಿ ಓಣಿಯ ಗ್ರಾಮ ದೇವತೆಗಳಾದ ಶ್ರೀ ದ್ಯಾಮವ್ವ ಹಾಗೂ ಶ್ರೀ ದುರಗಮ್ಮ ದೇವಿಯರ ಜಾತ್ರೆ ಸಂಪ್ರದಾಯದಂತೆ 12 ವರ್ಷಕ್ಕೊಮ್ಮೆ ನಡೆಯಬೇಕಾಗಿತ್ತು. ಆದರೆ ಕೋವಿಡ್ ಸೇರಿದಂತೆ ವಿವಿಧ ಕಾರಣಗಳಿಂದ ಜಾತ್ರೆ ಮುಂದೂಡಿಕೆಯಾಗಿತ್ತು. ಹೀಗಾಗಿ ಬರೋಬ್ಬರಿ 18 ವರ್ಷಗಳ ಬಳಿಕ ಈ ಬಾರಿ ಹರಿ ಜಾತ್ರಾ ಮಹೋತ್ಸವವನ್ನು ಅದ್ದೂರಿಯಾಗಿ ಆಯೋಜಿಸಲಾಗಿತ್ತು.

ರಾಚೋಟೇಶ್ವರ ಟ್ರಸ್ಟ್ ನೇತೃತ್ವದಲ್ಲಿ ಒಂಬತ್ತು ದಿನಗಳ ಕಾಲ ಜಾತ್ರಾ ಮಹೋತ್ಸವ ನಡೆಯಿತು. ಜಾತ್ರೆಯ ಆರಂಭದಿಂದಲೇ ಒಕ್ಕಲಗೇರಿ ಓಣಿಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ದೇವಿಯರ ದರ್ಶನ, ವಿಶೇಷ ಪೂಜೆ, ಧಾರ್ಮಿಕ ಆಚರಣೆಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಭಕ್ತರು ಪಾಲ್ಗೊಂಡರು.

ಕಟ್ಟುನಿಟ್ಟಿನ ಸಂಪ್ರದಾಯ ಪಾಲನೆ

ಜಾತ್ರೆಯ ಒಂಬತ್ತು ದಿನಗಳ ಅವಧಿಯಲ್ಲಿ ಭಕ್ತರು ಹಲವು ಕಟ್ಟುನಿಟ್ಟಿನ ನಿಯಮಗಳನ್ನು ಶ್ರದ್ಧೆಯಿಂದ ಪಾಲಿಸಿದರು. ಜಾತ್ರೆ ನಡೆಯುವ ಸಂದರ್ಭದಲ್ಲಿ ಮನೆಗಳಲ್ಲಿ ಅಡುಗೆ ಮಾಡದಿರುವುದು, ಪಾದರಕ್ಷೆ ಧರಿಸದಿರುವುದು ಸೇರಿದಂತೆ ಹಲವು ಸಂಪ್ರದಾಯಗಳನ್ನು ಭಕ್ತರು ಆಚರಿಸಿದರು.

ಜಾತ್ರೆಯ ಸಂದರ್ಭದಲ್ಲಿ ಗಂಡನ ಮನೆಗಳಿಗೆ ತೆರಳಿದ್ದ ಹೆಣ್ಣು ಮಕ್ಕಳು, ಬಂಧು-ಬಳಗ ಹಾಗೂ ದೂರದ ಊರುಗಳಲ್ಲಿ ನೆಲೆಸಿರುವ ಕುಟುಂಬದ ಸದಸ್ಯರು ಸ್ವಗ್ರಾಮಕ್ಕೆ ಆಗಮಿಸಿ ದೇವಿಯರ ಆರಾಧನೆಯಲ್ಲಿ ಪಾಲ್ಗೊಂಡರು. ಕುಟುಂಬ ಸಮೇತರಾಗಿ ದೇವಿಯ ದರ್ಶನ ಪಡೆದು ಉಡಿ ತುಂಬಿ, ಹರಕೆ ಸಲ್ಲಿಸಿ ಇಷ್ಟಾರ್ಥ ಈಡೇರಿಸುವಂತೆ ಪ್ರಾರ್ಥಿಸಿದರು.

140 ಕ್ವಿಂಟಾಲ್ ಭಂಡಾರ

ಜಾತ್ರೆಯ ಕೊನೆಯ ದಿನ ನಡೆದ ಭಂಡಾರ ಜಾತ್ರೆ ವಿಶೇಷ ಆಕರ್ಷಣೆಯಾಗಿತ್ತು. ಜಾತ್ರೆಗಾಗಿ ಸುಮಾರು 14 ಟನ್, ಅಂದರೆ 140 ಕ್ವಿಂಟಾಲ್ ಭಂಡಾರ ತರಿಸಲಾಗಿತ್ತು. ದೇವಿಯರ ಮೆರವಣಿಗೆ ಸಾಗುತ್ತಿದ್ದಂತೆ ಭಕ್ತರು ಭಂಡಾರವನ್ನು ಎರಚಿ ಸಂಭ್ರಮಿಸಿದರು.

ಮೆರವಣಿಗೆ ಸಾಗಿದ ರಸ್ತೆಗಳೆಲ್ಲ ಹಳದಿ ಬಣ್ಣದ ಭಂಡಾರದಿಂದ ಆವೃತವಾಗಿದ್ದವು. ಭಕ್ತರು ಪರಸ್ಪರ ಭಂಡಾರ ಎರಚಿಕೊಂಡು, ದೇವಿಯ ನಾಮಸ್ಮರಣೆ ಮಾಡುತ್ತಾ ಸಂಭ್ರಮಿಸಿದರು. ಭಂಡಾರದ ಜಾತ್ರೆಯಲ್ಲಿ ಪಾಲ್ಗೊಂಡ ಭಕ್ತರಲ್ಲಿ ಮಕ್ಕಳು, ಯುವಕರು, ಮಹಿಳೆಯರು ಹಾಗೂ ವಯೋವೃದ್ಧರು ಸೇರಿದಂತೆ ಎಲ್ಲ ವಯೋಮಾನದವರೂ ಇದ್ದರು.

ತವರು ಮನೆಯಿಂದ ಗಂಡನ ಮನೆಗೆ ದೇವಿಯರ ಮೆರವಣಿಗೆ

ಜಾತ್ರೆಯ ಪ್ರಮುಖ ಧಾರ್ಮಿಕ ಆಚರಣೆಗಳಲ್ಲಿ ಒಂದಾದ ದೇವಿಯರ ಬೀಳ್ಕೊಡುಗೆ ಕಾರ್ಯಕ್ರಮವೂ ವಿಜೃಂಭಣೆಯಿಂದ ನಡೆಯಿತು. ತವರು ಮನೆಯಾದ ಒಕ್ಕಲಗೇರಿಯ ದ್ಯಾಮವ್ವನ ದೇವಸ್ಥಾನದಿಂದ ಗಂಡನ ಮನೆಯಾದ ಕಿಲ್ಲಾ ಓಣಿಯವರೆಗೆ ದೇವಿಯರ ಭವ್ಯ ಮೆರವಣಿಗೆ ನಡೆಸಲಾಯಿತು.

ಸಂಪ್ರದಾಯದ ಪ್ರಕಾರ ಶಕ್ತಿದೇವತೆ ದ್ಯಾಮವ್ವ ನಾಲ್ವಡದವರ ಮನೆತನದ ಮಗಳೆಂದು ಭಕ್ತರು ಆರಾಧಿಸುತ್ತಾರೆ. ಹೀಗಾಗಿ ತವರು ಮನೆಯಿಂದ ಹೊರಟ ದೇವಿಯು ನಾಲ್ವಡದವರ ಮನೆಗೆ ತೆರಳಿ ಉಡಿ ತುಂಬಿಸಿಕೊಂಡು ಬಳಿಕ ಗಂಡನ ಮನೆಯಾದ ಕಿಲ್ಲಾ ಓಣಿಯಲ್ಲಿ ಪ್ರತಿಷ್ಠಾಪನೆಗೊಳ್ಳುವ ಸಂಪ್ರದಾಯವನ್ನು ಭಕ್ತರು ಶ್ರದ್ಧೆಯಿಂದ ನೆರವೇರಿಸಿದರು.

ವಾದ್ಯಮೇಳದೊಂದಿಗೆ ಭವ್ಯ ಮೆರವಣಿಗೆ

ಒಕ್ಕಲಗೇರಿಯಿಂದ ಕಿಲ್ಲಾ ಓಣಿಯವರೆಗೆ ನಡೆದ ದೇವಿಯರ ಮೆರವಣಿಗೆ ಅತ್ಯಂತ ವಿಜೃಂಭಣೆಯಿಂದ ಕೂಡಿತ್ತು. ಗಂಜಿ ಬಸವೇಶ್ವರ ಸರ್ಕಲ್, ರಾಚೋಟೇಶ್ವರ ದೇವಸ್ಥಾನ, ಹನುಮಾನ್ ಗರಡಿ, ಚೌಡಿ ಕೂಟ, ಮಾಬುಸುಬಾನಿ ಕಟ್ಟಿ ಮಾರ್ಗವಾಗಿ ಕಿಲ್ಲಾ ಓಣಿಯವರೆಗೆ ಮೆರವಣಿಗೆ ಸಾಗಿತು.

ಮೆರವಣಿಗೆಯಲ್ಲಿ 108 ಡೊಳ್ಳು ಕುಣಿತ, ಐದರಿಂದ ಆರು ಸಮ್ಮಾಳ ತಂಡಗಳು, ಚಂಡಿ ವಾದ್ಯಗಳು ಹಾಗೂ ವಿವಿಧ ವೇಷಧಾರಿಗಳ ತಂಡಗಳು ಭಾಗವಹಿಸಿದ್ದವು. ವಾದ್ಯಗಳ ಭರ್ಜರಿ ಸದ್ದಿಗೆ ಯುವಕರು ಕುಣಿದು ಸಂಭ್ರಮಿಸಿದರು.

ಮಹಿಳೆಯರು ತಲೆಯ ಮೇಲೆ ಕುಂಭ ಆರತಿ ಹೊತ್ತು ಮೆರವಣಿಗೆಯಲ್ಲಿ ಪಾಲ್ಗೊಂಡರು. ವಿವಿಧ ವಾದ್ಯಮೇಳಗಳ ನಿನಾದ, ದೇವಿಯರ ಘೋಷಣೆ ಹಾಗೂ ಭಕ್ತರ ಉತ್ಸಾಹದಿಂದ ಮೆರವಣಿಗೆಯು ಹಬ್ಬದ ವಾತಾವರಣಕ್ಕೆ ಮತ್ತಷ್ಟು ಮೆರುಗು ನೀಡಿತು.

ಸಾವಿರಾರು ಭಕ್ತರ ಭಾಗಿ

ಇಷ್ಟಾರ್ಥ ಈಡೇರಿಸುವ ಶಕ್ತಿ ದೇವತೆಗಳೆಂದು ನಂಬಿರುವ ಭಕ್ತರು ದೂರದ ಊರುಗಳಿಂದಲೂ ಆಗಮಿಸಿದ್ದರು. ಸುಮಾರು ಹತ್ತು ಸಾವಿರಕ್ಕೂ ಅಧಿಕ ಭಕ್ತರು ಜಾತ್ರೆಯ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು ಎನ್ನಲಾಗಿದೆ.

ಮಹಿಳೆಯರು ದೇವಿಯರಿಗೆ ಉಡಿ ತುಂಬಿ, ವಿಶೇಷ ಪೂಜೆ ಸಲ್ಲಿಸಿ ತಮ್ಮ ಹರಕೆ ತೀರಿಸಿದರು. ಹಲವರು ಕುಟುಂಬದ ನೆಮ್ಮದಿ, ಆರೋಗ್ಯ, ಸಂತಾನ, ಉದ್ಯೋಗ ಹಾಗೂ ಸಮೃದ್ಧಿಗಾಗಿ ದೇವಿಯರಲ್ಲಿ ಪ್ರಾರ್ಥನೆ ಸಲ್ಲಿಸಿದರು.

ಜಾತ್ರೆಯ ಸಂದರ್ಭದಲ್ಲಿ ಗಂಡನ ಮನೆಗಳಿಗೆ ತೆರಳಿದ್ದ ಹೆಣ್ಣು ಮಕ್ಕಳು ಹಾಗೂ ಬಂಧು-ಬಳಗದವರು ಒಟ್ಟಾಗಿ ಸೇರಿ ದೇವಿಯರ ಆರಾಧನೆ ಮಾಡಿದ್ದು ವಿಶೇಷವಾಗಿತ್ತು. ಹಲವು ವರ್ಷಗಳ ಬಳಿಕ ಒಂದೆಡೆ ಸೇರಿದ ಕುಟುಂಬಗಳು ಜಾತ್ರೆಯ ಸಂಭ್ರಮವನ್ನು ಹಂಚಿಕೊಂಡರು.

ಭಕ್ತಿ-ಸಂಪ್ರದಾಯದ ಸಂಗಮ

ಜಾತ್ರೆಯಲ್ಲಿ ಜಾತಿ-ಭೇದ, ಮೇಲು-ಕೀಳು ಎಂಬ ಯಾವುದೇ ಭಾವನೆಯಿಲ್ಲದೆ ಎಲ್ಲರೂ ಒಗ್ಗೂಡಿ ಪಾಲ್ಗೊಂಡಿದ್ದು ಗಮನಾರ್ಹವಾಗಿತ್ತು. ವಿವಿಧ ಸಮುದಾಯಗಳ ಭಕ್ತರು ಒಟ್ಟಾಗಿ ದೇವಿಯರ ಆರಾಧನೆ ಮಾಡಿ ಜಾತ್ರೆಯ ಸಂಭ್ರಮದಲ್ಲಿ ಭಾಗಿಯಾದರು.

ಒಂಬತ್ತು ದಿನಗಳ ಕಾಲ ನಡೆದ ಜಾತ್ರೆಯ ಕೊನೆಯ ದಿನ ಭಂಡಾರ ಜಾತ್ರೆಯಾಗಿ ಮಾರ್ಪಟ್ಟಿದ್ದು, ಅವಳಿ ನಗರದ ಜನರಿಗೆ ವಿಶೇಷ ಅನುಭವ ನೀಡಿತು. ರಸ್ತೆಯುದ್ದಕ್ಕೂ ಭಂಡಾರ ಎರಚಿಕೊಂಡು ಭಕ್ತರು ಸಂಭ್ರಮಿಸಿದರು. ದೇವಿಯರ ಮೆರವಣಿಗೆ ಸಾಗಿದ ಮಾರ್ಗದಲ್ಲಿ ಭಕ್ತರ ದಂಡೇ ಕಂಡುಬಂತು.

18 ವರ್ಷಗಳ ಬಳಿಕ ನಡೆದ ದ್ಯಾಮವ್ವ ಹಾಗೂ ದುರಗಮ್ಮ ದೇವಿಯರ ಹರಿ ಜಾತ್ರಾ ಮಹೋತ್ಸವವು ಭಕ್ತಿ, ಸಂಪ್ರದಾಯ, ಕುಟುಂಬದ ಬಾಂಧವ್ಯ ಹಾಗೂ ಸಾಮಾಜಿಕ ಸೌಹಾರ್ದತೆಯ ಅಪೂರ್ವ ಸಂಗಮಕ್ಕೆ ಸಾಕ್ಷಿಯಾಯಿತು. ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆದ ಜಾತ್ರೆಯು ಭಕ್ತರ ಮನದಲ್ಲಿ ಅಚ್ಚಳಿಯದ ನೆನಪಾಗಿ ಉಳಿಯಿತು.

18 ವರ್ಷಗಳ ಬಳಿಕ ನಡೆದ ಶಕ್ತಿ ದೇವತೆಗಳ ಹರಿ ಜಾತ್ರಾ ಮಹೋತ್ಸವ ಭಂಡಾರದ ವೈಭವ, ವಾದ್ಯಮೇಳದ ಸದ್ದು ಹಾಗೂ ಭಕ್ತರ ಸಂಭ್ರಮದೊಂದಿಗೆ ವಿಜೃಂಭಣೆಯಿಂದ ತೆರೆ ಕಂಡಿತು.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande