
ಬೊಗೋಟಾ(ಕೊಲಂಬಿಯಾ), 11 ಆಗಸ್ಟ್(ಹಿ.ಸ.):
ಆ್ಯಂಕರ್:
ಕೊಲಂಬಿಯಾದಲ್ಲಿ ಸಂಭವಿಸಿದ ಪ್ರಬಲ ಭೂಕಂಪದಿಂದ ಭಾರಿ ಹಾನಿ ಸಂಭವಿಸಿದ್ದು, ಸರ್ಕಾರ ರಾಷ್ಟ್ರೀಯ ವಿಪತ್ತು ಘೋಷಿಸಿದೆ. ಇದುವರೆಗೆ ಕನಿಷ್ಠ 132 ಮಂದಿ ಮೃತಪಟ್ಟಿದ್ದು, 572 ಮಂದಿ ಗಾಯಗೊಂಡಿದ್ದಾರೆ.
ಸೋಮವಾರ ಬೆಳಗ್ಗೆ 7.34ಕ್ಕೆ 7.4 ತೀವ್ರತೆಯ ಭೂಕಂಪ ಸಂಭವಿಸಿದ್ದು, ಬಳಿಕ ಬೆಳಗ್ಗೆ 8.18ಕ್ಕೆ 4.8 ತೀವ್ರತೆಯ ಮತ್ತೊಂದು ಭೂಕಂಪ ಸಂಭವಿಸಿದೆ. ಎರಡೂ ಭೂಕಂಪಗಳ ಕೇಂದ್ರ ಪಶ್ಚಿಮ ಕೊಲಂಬಿಯಾದ ಚೋಕೊ ರಾಜ್ಯದ ಸ್ಯಾನ್ ಹೋಸೆ ಡೆಲ್ ಪಾಲ್ಮಾರ್ ಪುರಸಭೆ ಪ್ರದೇಶದಲ್ಲಿತ್ತು. ಮೊದಲ ಭೂಕಂಪ 98 ಕಿ.ಮೀ. ಹಾಗೂ ಎರಡನೆಯದು 88 ಕಿ.ಮೀ. ಆಳದಲ್ಲಿ ಸಂಭವಿಸಿದೆ ಎಂದು ಕೊಲಂಬಿಯಾ ಭೂವೈಜ್ಞಾನಿಕ ಸೇವೆ ತಿಳಿಸಿದೆ.
ದಿ.ಬೊಗೋಟಾ ಪೋಸ್ಟ್ ಮತ್ತು ಎಬಿಸಿ ನ್ಯೂಸ್ ವರದಿ ಪ್ರಕಾರ, ಭೂಕಂಪದಿಂದ 61ಕ್ಕೂ ಹೆಚ್ಚು ಕಟ್ಟಡಗಳು ಕುಸಿದಿದ್ದು, 1,600ಕ್ಕೂ ಅಧಿಕ ಮನೆಗಳು ಹಾನಿಗೊಳಗಾಗಿವೆ ಅಥವಾ ಸಂಪೂರ್ಣ ನಾಶವಾಗಿವೆ. ಹಲವು ಆರೋಗ್ಯ ಕೇಂದ್ರಗಳು, ಸಮುದಾಯ ಭವನಗಳು ಮತ್ತು ರಸ್ತೆಗಳಿಗೂ ಹಾನಿಯಾಗಿದೆ. ಪರೇರಾ ಹಾಗೂ ಕಾಲಿ ನಗರಗಳು ಹೆಚ್ಚು ಹಾನಿಗೊಳಗಾದ ಪ್ರದೇಶಗಳಾಗಿವೆ.
ಭೂಕಂಪದ ಬಳಿಕ ಆರ್ಮೇನಿಯಾ, ಕಾಲಿ, ಮನಿಜಾಲೆಸ್, ಪರೇರಾ, ಕ್ವಿಬ್ಡೊ, ಬುವೆನವೆಂಚುರಾ ಮತ್ತು ಕಾರ್ಟಾಗೊ ನಗರಗಳಲ್ಲಿನ ಏಳು ವಿಮಾನ ನಿಲ್ದಾಣಗಳ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ರಾಜಧಾನಿ ಬೊಗೋಟಾದಲ್ಲಿ ಯಾವುದೇ ಕಟ್ಟಡ ಕುಸಿದಿರುವ ಬಗ್ಗೆ ವರದಿಯಾಗಿಲ್ಲ.
ಕೊಲಂಬಿಯಾ ಮಾತ್ರವಲ್ಲದೆ ವೆನೆಜುವೆಲಾ, ಈಕ್ವೆಡಾರ್ ಮತ್ತು ಪನಾಮ ಸೇರಿದಂತೆ ನೆರೆಯ ದೇಶಗಳಲ್ಲಿಯೂ ಭೂಕಂಪದ ಕಂಪನಗಳು ಅನುಭವಕ್ಕೆ ಬಂದಿವೆ. ಕುಸಿದ ಕಟ್ಟಡಗಳ ಅವಶೇಷಗಳಲ್ಲಿ ಸಿಲುಕಿರುವವರಿಗಾಗಿ ರಕ್ಷಣಾ ಸಿಬ್ಬಂದಿ ಶೋಧ ಮತ್ತು ಪರಿಹಾರ ಕಾರ್ಯಾಚರಣೆ ಮುಂದುವರಿಸಿದ್ದಾರೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.