
ನವದೆಹಲಿ, 06 ಜುಲೈ (ಹಿ.ಸ.):
ಆ್ಯಂಕರ್:ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರ 125ನೇ ಜಯಂತಿಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಎಕ್ಸ್‌ನಲ್ಲಿ ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ.
ಭಾರತದ ಅತ್ಯಂತ ಶ್ರೇಷ್ಠ ರಾಷ್ಟ್ರನಿರ್ಮಾತೃಗಳಲ್ಲಿ ಒಬ್ಬರಾದ ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರಿಗೆ ಅವರ 125ನೇ ಜಯಂತಿಯಂದು ನಾನು ಭಕ್ತಿಪೂರ್ವಕ ನಮನ ಸಲ್ಲಿಸುತ್ತೇನೆ. ಅವರ ಜೀವನವು ಪಾಂಡಿತ್ಯ, ಧೈರ್ಯ ಮತ್ತು ರಾಷ್ಟ್ರಸೇವೆಯ ಮೇಲಿನ ಅಚಲ ಬದ್ಧತೆಗೆ ಸಮರ್ಪಿತವಾಗಿತ್ತು. ಭಾರತದ ಏಕತೆ, ಗೌರವ ಮತ್ತು ಪ್ರಗತಿಗಾಗಿ ಅವರು ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು ಎಂದು ಪ್ರಧಾನಿ ಹೇಳಿದ್ದಾರೆ.
ಡಾ. ಮುಖರ್ಜಿ ಅವರ ಕೊಡುಗೆಗಳು ಹಲವು ಕ್ಷೇತ್ರಗಳನ್ನು ವ್ಯಾಪಿಸಿದ್ದವು. ಅವರು ಅತ್ಯುತ್ತಮ ಚಿಂತಕರಾಗಿದ್ದು, ಶಿಕ್ಷಣ ತಜ್ಞರಾಗಿದ್ದರು. ನವೋದ್ಯಮ ಮತ್ತು ಭವಿಷ್ಯದ ಅಗತ್ಯಗಳಿಗೆ ತಕ್ಕ ಶಿಕ್ಷಣ ವ್ಯವಸ್ಥೆಗೆ ಅವರು ಸದಾ ಬೆಂಬಲ ನೀಡಿದರು. ಕೈಗಾರಿಕಾ ಸಚಿವರಾಗಿ ದೇಶದ ಕೈಗಾರಿಕಾ ಸ್ವಾವಲಂಬನೆಗೆ ಭದ್ರ ಅಡಿಪಾಯ ಹಾಕಿದ ಅವರು, ಸಾಂಪ್ರದಾಯಿಕ ಕೈಗಾರಿಕೆಗಳು ಮತ್ತು ಜೀವನೋಪಾಯಗಳ ಬೆಳವಣಿಗೆಯನ್ನೂ ಉತ್ತೇಜಿಸಿದರು.
ಬಂಗಾಳದ ಬರಗಾಲದ ಸಂದರ್ಭದಲ್ಲಿ ಸಂಕಷ್ಟದಲ್ಲಿದ್ದ ಜನರ ನೆರವಿಗೆ ಧಾವಿಸಿದ ಅವರ ಮಾನವೀಯ ಸೇವೆ ಅವರ ಅಪಾರ ಕರುಣೆಯನ್ನು ಪ್ರತಿಬಿಂಬಿಸಿತು. ಎಲ್ಲಕ್ಕಿಂತ ಮುಖ್ಯವಾಗಿ, ಭಾರತದ ಏಕತೆ ಮತ್ತು ಅಖಂಡತೆಯ ಕುರಿತು ಅವರು ಹೊಂದಿದ್ದ ಅಚಲ ಬದ್ಧತೆ ಇಂದಿಗೂ ದೇಶಕ್ಕೆ ಶಾಶ್ವತ ಪ್ರೇರಣೆಯಾಗಿದೆ ಎಂದು ಪ್ರಧಾನಿ ಮೋದಿ ಬಣ್ಣಿಸಿದ್ದಾರೆ.
ವಿಕಸಿತ ಭಾರತದ ನಿರ್ಮಾಣದತ್ತ ನಾವು ಮುನ್ನಡೆಯುತ್ತಿರುವ ಈ ಸಂದರ್ಭದಲ್ಲಿ, ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರ ದೂರದೃಷ್ಟಿಯ ಚಿಂತನೆ ನಮ್ಮ ಪಯಣಕ್ಕೆ ನಿರಂತರ ಮಾರ್ಗದರ್ಶಕ ಬೆಳಕಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.