ರಾಮಮಂದಿರ ಕಾಣಿಕೆ ಕಳವು ಪ್ರಕರಣ: ನಾಯಕರ ಆರೋಪಗಳ ತನಿಖೆಗೆ ವಿಹೆಚ್ಪಿ ಆಗ್ರಹ
ನವದೆಹಲಿ, 05 ಜುಲೈ (ಹಿ.ಸ.): ಆ್ಯಂಕರ್: ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ದೇವಸ್ಥಾನದ ಕಾಣಿಕೆ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಾಜವಾದಿ ಪಕ್ಷದ ನಾಯಕ ರಾಮಗೋಪಾಲ್ ಯಾದವ್, ಆಮ್ ಆದ್ಮಿ ಪಕ್ಷದ ನಾಯಕರು ಅರವಿಂದ ಕೇಜ್ರಿವಾಲ್ ಹಾಗೂ ಸಂಜಯ್ ಸಿಂಗ್, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿ
ವಿ ಎಚ್ ಪಿ ಅಂತಾರಾಷ್ಟ್ರೀಯ ಅಧ್ಯಕ್ಷ ಅಲೋಕ ಕುಮಾರ


ನವದೆಹಲಿ, 05 ಜುಲೈ (ಹಿ.ಸ.):

ಆ್ಯಂಕರ್:

ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ದೇವಸ್ಥಾನದ ಕಾಣಿಕೆ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಾಜವಾದಿ ಪಕ್ಷದ ನಾಯಕ ರಾಮಗೋಪಾಲ್ ಯಾದವ್, ಆಮ್ ಆದ್ಮಿ ಪಕ್ಷದ ನಾಯಕರು ಅರವಿಂದ ಕೇಜ್ರಿವಾಲ್ ಹಾಗೂ ಸಂಜಯ್ ಸಿಂಗ್, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಹಲವು ರಾಜಕೀಯ ನಾಯಕರು ಮಾಡಿರುವ ಆರೋಪಗಳ ಬಗ್ಗೆ ತನಿಖೆ ನಡೆಸುವಂತೆ ವಿಶ್ವ ಹಿಂದೂ ಪರಿಷತ್ (ವಿಹೆಚ್‌ಪಿ) ಅಂತಾರಾಷ್ಟ್ರೀಯ ಅಧ್ಯಕ್ಷ ಹಾಗೂ ಹಿರಿಯ ವಕೀಲ ಆಲೋಕ್ ಕುಮಾರ್ ಆಗ್ರಹಿಸಿದ್ದಾರೆ.

ಈ ಕುರಿತು ಅಯೋಧ್ಯೆಯ ಡಿಎಸ್‌ಪಿ ಆಶುತೋಷ್ ತಿವಾರಿ ಅವರಿಗೆ ಪತ್ರ ಬರೆದಿರುವ ಅವರು, ಸಾರ್ವಜನಿಕವಾಗಿ ಗಂಭೀರ ಆರೋಪಗಳನ್ನು ಮಾಡಿರುವ ನಾಯಕರು ತನಿಖಾ ಸಂಸ್ಥೆಗಳ ಮುಂದೆ ತಮ್ಮ ಆರೋಪಗಳಿಗೆ ಸಂಬಂಧಿಸಿದ ದಾಖಲೆ ಮತ್ತು ಸಾಕ್ಷ್ಯಗಳನ್ನು ಸಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ. ಆರೋಪಗಳನ್ನು ಸಾಬೀತುಪಡಿಸಲು ವಿಫಲರಾದರೆ, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.

ಯಾವುದೇ ವ್ಯಕ್ತಿಗೆ ಆಧಾರರಹಿತ ಆರೋಪಗಳನ್ನು ಮಾಡುವ ಅವಕಾಶ ಇರಬಾರದು. ಸಮಾಜದಲ್ಲಿ ದ್ವೇಷ, ದುರಭಿಪ್ರಾಯ ಮತ್ತು ವೈಮನಸ್ಸು ಮೂಡಿಸುವಂತಹ ಆರೋಪಗಳನ್ನು ಯಾವುದೇ ಸಾಕ್ಷ್ಯವಿಲ್ಲದೆ ಮಾಡುವುದು ಸರಿಯಲ್ಲ. ಇಂತಹ ಪ್ರವೃತ್ತಿಯನ್ನು ಶಿಕ್ಷೆಯಿಲ್ಲದೆ ಬಿಡಬಾರದು, ಎಂದು ಆಲೋಕ್ ಕುಮಾರ್ ತಿಳಿಸಿದ್ದಾರೆ.

ತಮ್ಮ ಪತ್ರದಲ್ಲಿ, ರಾಮಜನ್ಮಭೂಮಿ ದೇವಸ್ಥಾನದಲ್ಲಿ ಕಾಣಿಕೆ ಕಳವು ಪ್ರಕರಣಕ್ಕೆ ಸಂಬಂಧಿಸಿ ದಾಖಲಾಗಿರುವ ಎಫ್‌ಐಆರ್‌ನ್ನು ಉಲ್ಲೇಖಿಸಿರುವ ಅವರು, ಕೆಲವು ರಾಜಕೀಯ ನಾಯಕರು ಸುಮಾರು ₹20 ಸಾವಿರ ಕೋಟಿ ಮೊತ್ತದ ದುರುಪಯೋಗ ನಡೆದಿದೆ ಎಂದು ಸಾರ್ವಜನಿಕವಾಗಿ ಆರೋಪಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಈ ರೀತಿಯ ಹೇಳಿಕೆಗಳಿಂದ ಸಂಬಂಧಪಟ್ಟ ನಾಯಕರು ಪ್ರಕರಣದ ವಾಸ್ತವಾಂಶಗಳು ಮತ್ತು ಪರಿಸ್ಥಿತಿಗಳ ಬಗ್ಗೆ ಮಾಹಿತಿ ಹೊಂದಿರುವಂತೆ ತೋರುತ್ತದೆ. ಹೀಗಾಗಿ ನ್ಯಾಯಸಮ್ಮತ ಮತ್ತು ಸಮಗ್ರ ತನಿಖೆಗಾಗಿ ಅವರನ್ನು ಕಾನೂನಿನ ಪ್ರಕಾರ ವಿಚಾರಣೆಗೆ ಒಳಪಡಿಸಿ, ಅವರ ಹೇಳಿಕೆಗಳನ್ನು ದಾಖಲಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ನಾಯಕರು ತಮ್ಮ ಆರೋಪಗಳಿಗೆ ಪೂರಕವಾದ ಸಾಕ್ಷ್ಯಗಳನ್ನು ಒದಗಿಸಿದರೆ ತನಿಖೆಗೆ ನೆರವಾಗಲಿದೆ. ಆದರೆ ಯಾವುದೇ ಆಧಾರವಿಲ್ಲದೆ ಸಾರ್ವಜನಿಕವಾಗಿ ಆರೋಪಗಳನ್ನು ಮಾಡಿದ್ದರೆ, ಅದು ತನಿಖೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆಯಿದ್ದು, ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಲೋಕ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande