ಪಂಡವಾಣಿ ಲೋಕದ ದಿಗ್ಗಜೆ ತೀಜನ ಬಾಯಿ ನಿಧನ; ಪ್ರಧಾನಿ ಮೋದಿ ಸಂತಾಪ
ರಾಯ್ಪುರ್, 05 ಜುಲೈ (ಹಿ.ಸ.): ಆ್ಯಂಕರ್: ಛತ್ತೀಸ್‌ಗಢದ ಖ್ಯಾತ ಪಂಡವಾಣಿ ಜಾನಪದ ಕಲಾವಿದೆ, ಪದ್ಮ ವಿಭೂಷಣ ಡಾ. ತೀಜನ ಬಾಯಿ ಅವರು 70ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ರಾಯ್ಪುರ್‌ನ ಏಮ್ಸ್ ಆಸ್ಪತ್ರೆಯಲ್ಲಿ ಮುಂಜಾನೆ 3.15ಕ್ಕೆ ಕೊನೆಯುಸಿರೆಳೆದರು. ಅವರ ನಿಧನದಿ
ದಿ.ಪಂಡವಾಣಿ ಲೋಕದ ದಿಗ್ಗಜೆ ತೀಜನ ಬಾಯಿ


ರಾಯ್ಪುರ್, 05 ಜುಲೈ (ಹಿ.ಸ.):

ಆ್ಯಂಕರ್:

ಛತ್ತೀಸ್‌ಗಢದ ಖ್ಯಾತ ಪಂಡವಾಣಿ ಜಾನಪದ ಕಲಾವಿದೆ, ಪದ್ಮ ವಿಭೂಷಣ ಡಾ. ತೀಜನ ಬಾಯಿ ಅವರು 70ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ರಾಯ್ಪುರ್‌ನ ಏಮ್ಸ್ ಆಸ್ಪತ್ರೆಯಲ್ಲಿ ಮುಂಜಾನೆ 3.15ಕ್ಕೆ ಕೊನೆಯುಸಿರೆಳೆದರು. ಅವರ ನಿಧನದಿಂದ ಜಾನಪದ ಕಲೆ ಹಾಗೂ ಸಾಂಸ್ಕೃತಿಕ ಲೋಕಕ್ಕೆ ಅಪಾರ ನಷ್ಟ ಉಂಟಾಗಿದೆ.

ತೀಜನ ಬಾಯಿ ಅವರು ಛತ್ತೀಸ್‌ಗಢದ ಪಂಡವಾಣಿ ಕಲೆಯನ್ನು ವಿಶ್ವದಾದ್ಯಂತ ಪರಿಚಯಿಸಿ ವಿಶಿಷ್ಟ ಗುರುತನ್ನು ತಂದುಕೊಟ್ಟಿದ್ದರು. ಅವರ ಅಗಲಿಕೆಗೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಶೋಕ ಸಂದೇಶ ಹಂಚಿಕೊಂಡಿರುವ ಪ್ರಧಾನಿ ಮೋದಿ, ತೀಜನ ಬಾಯಿ ಅವರ ನಿಧನದಿಂದ ತೀವ್ರ ದುಃಖವಾಗಿದೆ. ತಮ್ಮ ಅದ್ಭುತ ಕಲಾ ಪ್ರದರ್ಶನದ ಮೂಲಕ ಛತ್ತೀಸ್‌ಗಢದ ಪಂಡವಾಣಿ ಕಲೆಗೆ ಜಾಗತಿಕ ಮನ್ನಣೆ ತಂದುಕೊಟ್ಟಿದ್ದರು. ಅವರ ಅಗಲಿಕೆ ಕಲೆ ಮತ್ತು ಸಂಸ್ಕೃತಿ ಕ್ಷೇತ್ರಕ್ಕೆ ತುಂಬಲಾರದ ನಷ್ಟ. ಈ ದುಃಖದ ಸಂದರ್ಭದಲ್ಲಿ ಅವರ ಕುಟುಂಬಸ್ಥರು ಹಾಗೂ ಅಭಿಮಾನಿಗಳ ದುಃಖದಲ್ಲಿ ನಾನು ಭಾಗಿಯಾಗಿದ್ದೇನೆ. ಓಂ ಶಾಂತಿ ಎಂದು ತಿಳಿಸಿದ್ದಾರೆ.

ಭಾರತೀಯ ಜಾನಪದ ಕಲೆಗೆ ನೀಡಿದ ಅಪೂರ್ವ ಕೊಡುಗೆಯನ್ನು ಗುರುತಿಸಿ ಅವರಿಗೆ ಪದ್ಮಶ್ರೀ, ಪದ್ಮಭೂಷಣ ಹಾಗೂ ಪದ್ಮ ವಿಭೂಷಣ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿತ್ತು. ಅಲ್ಲದೆ ನಾಲ್ಕು ಬಾರಿ ಡಿ.ಲಿಟ್ ಗೌರವ ಡಾಕ್ಟರೇಟ್‌ ಕೂಡ ಲಭಿಸಿತ್ತು.

1956ರ ಏಪ್ರಿಲ್ 24ರಂದು ಗನಿಯಾರಿ ಗ್ರಾಮದಲ್ಲಿ ಪಾರಧಿ ಜನಾಂಗದ ಕುಟುಂಬದಲ್ಲಿ ಜನಿಸಿದ್ದ ತೀಜನ ಬಾಯಿ ಅವರ ಜೀವನ ಹೋರಾಟದಿಂದ ಕೂಡಿತ್ತು. ಬಾಲ್ಯದಲ್ಲಿ ಶಿಕ್ಷಣದಿಂದ ವಂಚಿತರಾದ ಅವರು ನಂತರ ಸೀಮಿತ ಮಟ್ಟದ ಶಿಕ್ಷಣ ಪಡೆದರೂ, ತಮ್ಮ ಅಪರೂಪದ ಪ್ರತಿಭೆಯಿಂದ ದೇಶ-ವಿದೇಶಗಳಲ್ಲಿ ಖ್ಯಾತಿ ಗಳಿಸಿದರು.

ತಮ್ಮ ತಾತ ಬ್ರಜ್‌ಲಾಲ್ ಅವರಿಂದ ಮಹಾಭಾರತದ ಕಥೆಗಳನ್ನು ಕೇಳುತ್ತ ಬೆಳೆದ ತೀಜನ ಬಾಯಿ, ಬಳಿಕ ಗಾಯಕ ಉಮೇದ್ ಸಿಂಗ್ ದೇಶಮುಖ್ ಅವರ ಬಳಿ ಪಂಡವಾಣಿ ಗಾಯನದಲ್ಲಿ ತರಬೇತಿ ಪಡೆದರು. ಕೇವಲ 13ನೇ ವಯಸ್ಸಿನಲ್ಲಿ ಮೊದಲ ಸಾರ್ವಜನಿಕ ಪ್ರದರ್ಶನ ನೀಡಿದರು.

ಆ ಕಾಲದಲ್ಲಿ ಮಹಿಳೆಯರು ಕುಳಿತು ಹಾಡುವ 'ವೇದಮತಿ' ಶೈಲಿಯಲ್ಲಷ್ಟೇ ಪಂಡವಾಣಿ ಹಾಡಬಹುದಾಗಿತ್ತು. ಆದರೆ ತೀಜನ ಬಾಯಿ ಈ ಸಂಪ್ರದಾಯವನ್ನು ಮುರಿದು, ಪುರುಷರು ಮಾತ್ರ ಹಾಡುತ್ತಿದ್ದ ನಿಂತುಕೊಂಡೇ ಪ್ರದರ್ಶಿಸುವ 'ಕಾಪಾಲಿಕ' ಶೈಲಿಯಲ್ಲಿ ಪಂಡವಾಣಿ ಹಾಡಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇದೇ ಅವರ ಕಲಾ ಬದುಕಿನ ಮಹತ್ವದ ಮೈಲಿಗಲ್ಲಾಗಿ, ಪಂಡವಾಣಿ ಕಲೆಗೆ ಹೊಸ ಆಯಾಮ ನೀಡಿತು.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande