ರಾಮಮಂದಿರ ಕಾಣಿಕೆ ಕಳವು ಪ್ರಕರಣ: ‘ತೀವ್ರ ನೋವು ತಂದಿದೆ:ಖಜಾಂಚಿ ಗೋವಿಂದ ಗಿರಿ ಮಹಾರಾಜ್
ನವದೆಹಲಿ, 05 ಜುಲೈ (ಹಿ.ಸ.): ಆ್ಯಂಕರ್: ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ಮಂದಿರದಲ್ಲಿ ಕಾಣಿಕೆ ಕಳವು ನಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಖಜಾಂಚಿ ಗೋವಿಂದ ಗಿರಿ ಮಹಾರಾಜ್ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದು, ಈ ಘಟನೆ ತಮ್ಮನ್ನು ತೀವ್ರವಾಗಿ
ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಖಜಾಂಚಿ ಗೋವಿಂದ ಗಿರಿ ಮಹಾರಾಜ್


ನವದೆಹಲಿ, 05 ಜುಲೈ (ಹಿ.ಸ.):

ಆ್ಯಂಕರ್:

ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ಮಂದಿರದಲ್ಲಿ ಕಾಣಿಕೆ ಕಳವು ನಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಖಜಾಂಚಿ ಗೋವಿಂದ ಗಿರಿ ಮಹಾರಾಜ್ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದು, ಈ ಘಟನೆ ತಮ್ಮನ್ನು ತೀವ್ರವಾಗಿ ನೋಯಿಸಿದೆ, ದುಃಖಿತಗೊಳಿಸಿದೆ ಮತ್ತು ನಾಚಿಕೆಪಡುವಂತೆ ಮಾಡಿದೆ ಎಂದು ಹೇಳಿದ್ದಾರೆ.

ಸಾರ್ವಜನಿಕ ಪ್ರಕಟಣೆ ಹೊರಡಿಸಿರುವ ಅವರು, ಕಾಣಿಕೆ ಎಣಿಕೆ ನಡೆಯುವ ಸ್ಥಳ ಅಥವಾ ಅದರ ಪ್ರಕ್ರಿಯೆಯೊಂದಿಗೆ ಆರಂಭದಿಂದಲೂ ತಮಗೆ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಪ್ರಕರಣದ ತನಿಖೆಯಲ್ಲಿ ತಾವು ಯಾರ ಪರವೂ ಇಲ್ಲ, ಯಾರ ವಿರುದ್ಧವೂ ಇಲ್ಲ; ಸತ್ಯದ ಪರವಾಗಿದ್ದೇವೆ ಎಂದು ಹೇಳಿರುವ ಅವರು, ತಪ್ಪಿತಸ್ಥರನ್ನು ಪತ್ತೆಹಚ್ಚಿ ಕಾನೂನುಬದ್ಧವಾಗಿ ಶಿಕ್ಷಿಸಬೇಕು ಎಂದು ಒತ್ತಾಯಿಸಿದ್ದಾರೆ.

ಎಷ್ಟು ಪ್ರಮಾಣದ ಕಳವು ನಡೆದಿದೆ, ಯಾವಾಗ ನಡೆದಿದೆ, ಹೇಗೆ ನಡೆದಿದೆ ಎಂಬುದು ತನಿಖೆಯಿಂದಲೇ ಬಹಿರಂಗವಾಗಬೇಕು. ಎಸ್‌ಐಟಿ, ಪೊಲೀಸ್ ಇಲಾಖೆ ಮತ್ತು ನ್ಯಾಯಾಂಗದ ಮೇಲೆ ಸಂಪೂರ್ಣ ವಿಶ್ವಾಸವಿದೆ. ತಪ್ಪಿತಸ್ಥರು ಯಾವುದೇ ಕಾರಣಕ್ಕೂ ತಪ್ಪಿಸಿಕೊಳ್ಳುವುದಿಲ್ಲ, ಎಂದು ಅವರು ತಿಳಿಸಿದ್ದಾರೆ.

ಗೋವಿಂದ ಗಿರಿ ಮಹಾರಾಜ್ ಅವರು ಅಯೋಧ್ಯೆಗೆ ಆಗಮಿಸುವ ಮುನ್ನವೇ ಮನವಿ ಪತ್ರವೊಂದನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಈ ಪ್ರಕರಣದ ಕುರಿತು ಹಲವು ಸ್ಪಷ್ಟೀಕರಣಗಳನ್ನು ನೀಡಿದ್ದಾರೆ. ಕೆಲವರು ಚಿನ್ನ, ಬೆಳ್ಳಿ ಸೇರಿದಂತೆ ಭಕ್ತರು ಸಮರ್ಪಿಸಿದ ಕಾಣಿಕೆಗಳನ್ನು ಎಣಿಸುವ ವೇಳೆ ಕಳವು ಮಾಡಿರುವುದು ರಾಮಭಕ್ತರ ಹೃದಯವನ್ನು ಒಡೆದಿದೆ. ಇದು ಅತ್ಯಂತ ಘೋರ ಪಾಪ ಎಂದು ಅವರು ಹೇಳಿದ್ದಾರೆ.

ಟ್ರಸ್ಟ್‌ನ ಖಜಾನೆಯಲ್ಲಿ ಜಮೆಯಾಗಿರುವ ಹಣದ ಲೆಕ್ಕಪತ್ರಗಳು ಸುರಕ್ಷಿತವಾಗಿದ್ದು, ಅಧಿಕಾರ ಪಡೆದವರು ಅವುಗಳನ್ನು ಪರಿಶೀಲಿಸಬಹುದು ಎಂದು ತಿಳಿಸಿರುವ ಅವರು, ಮಂದಿರದ ಎಲ್ಲಾ ವೆಚ್ಚಗಳು ನೇರವಾಗಿ ಬ್ಯಾಂಕ್ ಮೂಲಕವೇ ನಡೆಯುತ್ತವೆ ಹಾಗೂ ಆ ವ್ಯವಹಾರಗಳಿಗೆ ತಾವು ಅಧಿಕೃತ ಸಹಿ ಮಾಡುವವರಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಭಕ್ತರು ಹುಂಡಿಗೆ ಸಲ್ಲಿಸುವ ಕಾಣಿಕೆಯನ್ನು ಎಣಿಸುವ ಸ್ಥಳದೊಂದಿಗೆ ತಮಗೆ ಯಾವುದೇ ಸಂಬಂಧವಿಲ್ಲ ಎಂದು ಪುನರುಚ್ಚರಿಸಿದ ಅವರು, ತಾವು ಪುಣೆಯಲ್ಲಿ ವಾಸವಿದ್ದು ಧಾರ್ಮಿಕ ಪ್ರವಚನಗಳ ನಿಮಿತ್ತ ನಿರಂತರ ಪ್ರವಾಸದಲ್ಲಿರುತ್ತೇನೆ ಎಂದಿದ್ದಾರೆ. ಕಾಣಿಕೆ ಎಣಿಕೆಯ ಕಾರ್ಯವನ್ನು ಸ್ಥಳೀಯ ಟ್ರಸ್ಟಿಗಳೇ ಆರಂಭದಿಂದಲೂ ನೋಡಿಕೊಂಡಿದ್ದು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಹಯೋಗದಲ್ಲಿ ರೂಪಿಸಲಾದ ಪ್ರಮಾಣಿತ ಕಾರ್ಯವಿಧಾನ ಅನುಸಾರ ಅದು ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ಟ್ರಸ್ಟಿ ಅಥವಾ ಖಜಾಂಚಿ ಹುದ್ದೆಗಾಗಿ ತಾವು ಎಂದಿಗೂ ಪ್ರಯತ್ನಿಸಿಲ್ಲ ಎಂದು ಹೇಳಿರುವ ಗೋವಿಂದ ಗಿರಿ ಮಹಾರಾಜ್, ಅಪರೂಪದ ಸಂದರ್ಭಗಳನ್ನು ಹೊರತುಪಡಿಸಿ ಯಾರಿಂದಲೂ ನಗದು ಅಥವಾ ವಸ್ತು ರೂಪದ ಕಾಣಿಕೆಯನ್ನು ಸ್ವೀಕರಿಸಿಲ್ಲ ಎಂದಿದ್ದಾರೆ. ಚೆಕ್ ಮೂಲಕ ಬಂದ ದೇಣಿಗೆಗಳನ್ನು ಮಾತ್ರ ಸ್ವೀಕರಿಸಿರುವುದಾಗಿ ಅವರು ತಿಳಿಸಿದ್ದಾರೆ.

ಸಿಂಧಿ ಸಮುದಾಯ ಭಕ್ತಿಯಿಂದ ಸಮರ್ಪಿಸಿದ್ದ 200 ಕಿಲೋಗ್ರಾಂ ಬೆಳ್ಳಿಯ 200 ಇಟ್ಟಿಗೆಗಳು ಮೌಲ್ಯಯುತ ಲೋಹಗಳ ನೋಂದಣಿಯಲ್ಲಿ ದಾಖಲಾಗಿ, ಶುದ್ಧ ಬೆಳ್ಳಿ ಇಟ್ಟಿಗೆಗಳಾಗಿ ರೂಪಾಂತರಗೊಂಡು ಅಯೋಧ್ಯೆಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯ ಲಾಕರ್‌ನಲ್ಲಿ ಸುರಕ್ಷಿತವಾಗಿ ಇರಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಶ್ರೀರಾಮನ ಕೃಪೆಯಿಂದ ಶೀಘ್ರದಲ್ಲೇ ಸತ್ಯ ಹೊರಬರಲಿದೆ. ಎಲ್ಲ ಅನುಮಾನಗಳು ದೂರವಾಗಲಿವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಎಚ್ಚರಿಕೆ ಮತ್ತು ಪಾರದರ್ಶಕತೆ ಪಾಲಿಸಲಾಗುವುದು. ಸನಾತನ ಧರ್ಮ ಹಾಗೂ ರಾಮಮಂದಿರದ ಗೌರವಕ್ಕೆ ಧಕ್ಕೆ ತರುವ ಯಾವುದೇ ಪ್ರಯತ್ನ ಯಶಸ್ವಿಯಾಗುವುದಿಲ್ಲ ಎಂಬ ವಿಶ್ವಾಸವನ್ನು ಗೋವಿಂದ ಗಿರಿ ಮಹಾರಾಜ್ ವ್ಯಕ್ತಪಡಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande