
ಮುಂಬಯಿ, 05 ಜುಲೈ (ಹಿ.ಸ.):
ಆ್ಯಂಕರ್:
ಮಹಾರಾಷ್ಟ್ರ ರಾಜಧಾನಿ ಮುಂಬೈನಲ್ಲಿ ರವಿವಾರ ಸುರಿದ ಭಾರೀ ಮಳೆ, ಬಿರುಸಿನ ಗಾಳಿ ಮತ್ತು ಕಡಿಮೆ ಗೋಚರತೆಯಿಂದಾಗಿ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಯಿತು. ಸುರಕ್ಷತಾ ದೃಷ್ಟಿಯಿಂದ ವಿಮಾನ ನಿಲ್ದಾಣದ ರನ್‌ವೇ ಕಾರ್ಯಾಚರಣೆಯನ್ನು ಒಂದು ಗಂಟೆಯ ಕಾಲ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು.
ವಿಮಾನ ನಿಲ್ದಾಣ ಆಡಳಿತ ನೀಡಿರುವ ಮಾಹಿತಿ ಪ್ರಕಾರ, ಬೆಳಿಗ್ಗೆ 10:17 ಗಂಟೆಗೆ ಗಂಟೆಗೆ 42 ನಾಟ್‌ಗಳಷ್ಟು ವೇಗದ ಗಾಳಿ, ಭಾರೀ ಮಳೆ ಹಾಗೂ ಗೋಚರತೆ ಕುಸಿದ ಹಿನ್ನೆಲೆಯಲ್ಲಿ ರನ್‌ವೇ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಯಿತು. ಹವಾಮಾನದಲ್ಲಿ ಸುಧಾರಣೆ ಕಂಡುಬಂದ ಬಳಿಕ 11:17 ಗಂಟೆಗೆ ಮತ್ತೆ ಸಾಮಾನ್ಯ ಕಾರ್ಯಾಚರಣೆ ಆರಂಭಿಸಲಾಯಿತು. ಒಟ್ಟು 60 ನಿಮಿಷಗಳ ಕಾಲ ರನ್‌ವೇ ಬಂದ್ ಆಗಿತ್ತು.
ವಿಮಾನ ನಿಲ್ದಾಣ ಆಡಳಿತವು, ಪ್ರಯಾಣಿಕರು, ವಿಮಾನಗಳು ಹಾಗೂ ನೆಲದ ಸಿಬ್ಬಂದಿಯ ಸುರಕ್ಷತೆಯೇ ತಮ್ಮ ಮೊದಲ ಆದ್ಯತೆ ಎಂದು ಸ್ಪಷ್ಟಪಡಿಸಿದೆ.
4 ವಿಮಾನಗಳು ರದ್ದು
ಹವಾಮಾನ ವೈಪರೀತ್ಯದಿಂದಾಗಿ ಒಟ್ಟು ನಾಲ್ಕು ವಿಮಾನಗಳ ಸಂಚಾರವನ್ನು ರದ್ದುಪಡಿಸಲಾಗಿದೆ.
- ದೆಹಲಿ – ಮುಂಬೈ (6E 395)
- ಮುಂಬೈ – ಇಂದೋರ್ (6E 5273)
- ಇಂದೋರ್ – ಮುಂಬೈ (6E 552)
- ಮುಂಬೈ – ದೆಹಲಿ (6E 6613)
13 ವಿಮಾನಗಳ ಮಾರ್ಗ ಬದಲಾವಣೆ
ಪ್ರತಿಕೂಲ ಹವಾಮಾನದಿಂದ ಒಟ್ಟು 13 ವಿಮಾನಗಳ ಮಾರ್ಗವನ್ನು ಬದಲಾಯಿಸಲಾಗಿತ್ತು. ನಂತರ ಹವಾಮಾನ ಸುಧಾರಿಸಿದ ಬಳಿಕ ಮಾರ್ಗ ಬದಲಾಯಿಸಿದ್ದ ಎಲ್ಲ ವಿಮಾನಗಳು ಸುರಕ್ಷಿತವಾಗಿ ಮುಂಬೈ ವಿಮಾನ ನಿಲ್ದಾಣಕ್ಕೆ ಮರಳಿ ಬಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರೀ ಮಳೆಯ ಪರಿಣಾಮವಾಗಿ ಹಲವು ವಿಮಾನಗಳ ಹಾರಾಟ ಹಾಗೂ ಆಗಮನದಲ್ಲಿ ವಿಳಂಬವೂ ಉಂಟಾಗಿದ್ದು, ಪ್ರಯಾಣಿಕರು ತಮ್ಮ ವಿಮಾನಗಳ ವೇಳಾಪಟ್ಟಿಯನ್ನು ಸಂಬಂಧಿತ ವಿಮಾನಯಾನ ಸಂಸ್ಥೆಗಳ ಮೂಲಕ ಪರಿಶೀಲಿಸಿಕೊಳ್ಳುವಂತೆ ವಿಮಾನ ನಿಲ್ದಾಣ ಆಡಳಿತ ಮನವಿ ಮಾಡಿದೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.