
ಶ್ರೀಗಂಗಾನಗರ, 05 ಜುಲೈ (ಹಿ.ಸ.):
ಆ್ಯಂಕರ್:
ರಾಜಸ್ಥಾನದ ಶ್ರೀಗಂಗಾನಗರ ಜಿಲ್ಲೆಯ ಸೂರತ್‌ಗಢ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ–62ರಲ್ಲಿ ರವಿವಾರ ಮುಂಜಾನೆ ಸೇನೆಯ ಟ್ರಕ್ ಹಾಗೂ ಖಾಸಗಿ ಆಂಬುಲೆನ್ಸ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಸೂರತ್‌ಗಢ ಸದರ್ ಪೊಲೀಸ್ ಠಾಣೆ ವ್ಯಾಪ್ತಿಯ 22 ಎಲ್‌ಜಿಡಬ್ಲ್ಯು ಸಮೀಪ ಈ ದುರ್ಘಟನೆ ನಡೆದಿದೆ. ಅಪಘಾತದ ತೀವ್ರತೆಗೆ ಆಂಬುಲೆನ್ಸ್ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಘಟನೆ ಬಳಿಕ ಹೆದ್ದಾರಿಯಲ್ಲಿ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು.
ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳೀಯರು ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರನ್ನು ತಕ್ಷಣವೇ ಸೂರತ್‌ಗಢ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೊಲೀಸರ ಪ್ರಾಥಮಿಕ ಮಾಹಿತಿ ಪ್ರಕಾರ, ಮೃತಪಟ್ಟ ಮೂವರೂ ಹಿಂದೂಮಲ್ಕೋಟ್ ಪೊಲೀಸ್ ಠಾಣೆ ವ್ಯಾಪ್ತಿಯ 5 ಬಿ ಕೋನಿ ಗ್ರಾಮದ ನಿವಾಸಿಗಳಾಗಿದ್ದಾರೆ.
ರಾಜಸ್ಥಾನದ ರಕ್ಷಣಾ ಸಾರ್ವಜನಿಕ ಸಂಪರ್ಕಾಧಿಕಾರಿ ಲೆಫ್ಟಿನೆಂಟ್ ಕರ್ನಲ್ ನಿಖಿಲ್ ಧವನ್ ನೀಡಿರುವ ಮಾಹಿತಿಯಂತೆ, ಇಂದು ಬೆಳಿಗ್ಗೆ ಸುಮಾರು 5.30ರ ವೇಳೆಗೆ ಸೂರತ್‌ಗಢ–ಶ್ರೀಗಂಗಾನಗರ ಮಾರ್ಗದ ಕೆಂಚಿಯಾ ಪಟ್ಟಣದ ಸಮೀಪ ಖಾಸಗಿ ಆಂಬುಲೆನ್ಸ್ ಒಂದು ಟ್ರಕ್‌ನ್ನು ಓವರ್‌ಟೇಕ್ ಮಾಡುವ ವೇಳೆ ಎದುರಿನಿಂದ ಬರುತ್ತಿದ್ದ ಸೇನೆಯ ಎಡ್ವಾನ್ಸ್ಡ್ ಲೈಫ್ ಸಪೋರ್ಟ್ ವಾಹನಕ್ಕೆ ಡಿಕ್ಕಿ ಹೊಡೆದಿದೆ.
ಈ ಅಪಘಾತದಲ್ಲಿ ಮೂವರು ನಾಗರಿಕರು ಮೃತಪಟ್ಟಿದ್ದು, ಗಾಯಾಳುಗಳಿಗೆ ತಕ್ಷಣ ವೈದ್ಯಕೀಯ ನೆರವು ನೀಡಿ ಆಸ್ಪತ್ರೆಗೆ ಸಾಗಿಸಲಾಗಿದೆ. ಘಟನೆ ಸಂಬಂಧ ಪೊಲೀಸರು ಸ್ಥಳದಲ್ಲಿದ್ದು, ಅಗತ್ಯ ಕಾನೂನು ಕ್ರಮಗಳನ್ನು ಕೈಗೊಂಡಿದ್ದಾರೆ.
ಭಾರತೀಯ ಸೇನೆ ಮೃತರ ಕುಟುಂಬಗಳಿಗೆ ಆಳವಾದ ಸಂತಾಪ ಸೂಚಿಸಿದ್ದು, ಪ್ರಕರಣದ ತನಿಖೆಗೆ ನಾಗರಿಕ ಆಡಳಿತಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.