
ಮೈಸೂರು, 27 ಜುಲೈ (ಹಿ.ಸ.):
ಆ್ಯಂಕರ್:
ಕೆಪಿಎಸ್ಸಿ ಗಂಭೀರ ಅಕ್ರಮಗಳು ಹಾಗೂ ಭ್ರಷ್ಟಾಚಾರಗಳು ನಡೆದಿದ್ದರೂ ಸಹ, ಅಂತಹ ಭ್ರಷ್ಟರ ರಕ್ಷಣೆಗೆ ಬಿಜೆಪಿ ಮತ್ತು ಆರ್ಎಸ್ಎಸ್ ಪರ ವಕೀಲರೇ ನಿಂತಿದ್ದಾರೆ ಎಂದು ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಒಂದು ಕಡೆ ಭ್ರಷ್ಟಾಚಾರದ ವಿರುದ್ಧ ಮಾತನಾಡುವ ಬಿಜೆಪಿ ಹಾಗೂ ಆರ್ ಎಸ್ ಎಸ್ ನವರು, ಅಂತಹ ಭ್ರಷ್ಟ ಕೆಪಿಎಸ್ಸಿ ಅಧ್ಯಕ್ಷರ ರಕ್ಷಣೆಗೆ ಮುಂದಾಗಿ ಅವರ ಪರವಾಗಿ ವಕೀಲರನ್ನು ನಿಲ್ಲಿಸಿದ್ದಾರೆ. ಇದು ಬಿಜೆಪಿಯ ದ್ವಂದ್ವ ನೀತಿ ಸಂಪೂರ್ಣವಾಗಿ ಬಯಲು ಮಾಡಿದೆ ಎಂದು ಡಾ. ಯತೀಂದ್ರ ಕಿಡಿಕಾರಿದರು.
ರಾಜ್ಯದಲ್ಲಿ ಕೆಪಿಎಸ್ಸಿ ಮೂಲಕ ಸಾಕಷ್ಟು ಅಕ್ರಮಗಳು ನಡೆದಿವೆ. ಈ ಹಿಂದೆ ಕೆಪಿಎಸ್ಸಿ ಅಧ್ಯಕ್ಷರನ್ನು ನೇಮಕ ಮಾಡಿದ್ದು ಬಿಜೆಪಿ ಸರ್ಕಾರವೇ ಹೊರತು ನಮ್ಮ ಪಕ್ಷವಲ್ಲ. ಜಾತಿ ಮತ್ತು ಆದಾಯ ಪ್ರಮಾಣಪತ್ರ ನೀಡುವಲ್ಲಿ ಹಾಗೂ ಇತರೆ ವಿಚಾರಗಳಲ್ಲಿ ಗಂಭೀರ ತಪ್ಪುಗಳನ್ನು ಎಸಗಿರುವುದನ್ನು ಪರಿಗಣಿಸಿ, ಅವರನ್ನು ಅಮಾನತುಗೊಳಿಸಲು ರಾಜ್ಯ ಸಂಪುಟವು ಅನುಮೋದನೆ ನೀಡಿದೆ ಎಂದು ತಿಳಿಸಿದರು.
ಬಿಜೆಪಿ ಸರ್ಕಾರದ ಹಿಂದಿನ ಧೋರಣೆಗಳನ್ನು ಟೀಕಿಸಿದ ಅವರು, ಹಿಂದಿನ ಸರ್ಕಾರಗಳ ಅವಧಿಯಲ್ಲಿ ಎಷ್ಟೇ ಹಗರಣಗಳು ನಡೆದರೂ ಮತ್ತು ಮಂತ್ರಿಗಳು ತಪ್ಪು ಮಾಡಿದ್ದರೂ ಯಾರೂ ಕೂಡ ರಾಜೀನಾಮೆ ನೀಡುತ್ತಿರಲಿಲ್ಲ. ಪ್ರಜಾಸತ್ತಾತ್ಮಕ ಸಂಸ್ಥೆಗಳನ್ನು ತಮ್ಮ ಕಪಿಮುಷ್ಟಿಯಲ್ಲಿಟ್ಟುಕೊಂಡು ಅಧಿಕಾರದ ಅಹಂಕಾರದಿಂದ ಮೆರೆಯುತ್ತಿದ್ದರು. ಆದರೆ, ಇತ್ತೀಚೆಗೆ ಯುವಜನತೆ ಮತ್ತು ವಿದ್ಯಾರ್ಥಿಗಳು ನಡೆಸಿದ ದಿಟ್ಟ ಪ್ರತಿಭಟನೆಗಳು ಅಂತಹವರಿಗೆ ತಕ್ಕ ಪಾಠ ಕಲಿಸಿವೆ ಎಂದು ಹೇಳಿದರು.
ಹಿಂದೂಸ್ತಾನ್ ಸಮಾಚಾರ್ / NAVEEN PARADESHII