ಗ್ರಾಮೀಣ ಯುವಜನತೆಗೆ ತಂತ್ರಜ್ಞಾನದ ಸ್ಪರ್ಶದಿಂದ ಅಭಿವೃದ್ಧಿ ಸಾಧ್ಯ
ಗ್ರಾಮೀಣ ಯುವಜನತೆಗೆ ತಂತ್ರಜ್ಞಾನದ ಸ್ಪರ್ಶದಿಂದ ಅಭಿವೃದ್ಧಿ ಸಾಧ್ಯ
ಚಿಕ್ಕಬಳ್ಳಾಪುರ ತಾಲ್ಲೂಕಿನ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ನಡೆದ ಕೃತಕ ಬುದ್ದಿಮತ್ತೆ ಕೌಶಲ್ಯ ಮತ್ತು ಅನುಭವ ಕೇಂದ್ರ' ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.


ಕೋಲಾರ: ಜು.೨೭ (ಹಿ.ಸ) :

ಆ್ಯಂಕರ್ : ಕೃತಕ ಬುದ್ಧಿಮತ್ತೆ ರೂಪದ ಆಧುನಿಕ ತಂತ್ರಜ್ಞಾನವು ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗದೆ, ಗ್ರಾಮೀಣ ಭಾಗದ ಪ್ರತಿಯೊಬ್ಬ ಪ್ರತಿಭಾವಂತ ಯುವಕ-ಯುವತಿಯರಿಗೂ ತಲುಪಿದಾಗ ಮಾತ್ರ ದೇಶದ ನೈಜ ಅಭಿವೃದ್ಧಿ ಸಾಧ್ಯ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಡಾ. ಶಾಲಿನಿ ರಜನೀಶ್. ತಿಳಿಸಿದರು.

ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿಯ 'ಸತ್ಯಸಾಯಿ ಗ್ರಾಮ'ದಲ್ಲಿ ಏರ್ಪಡಿಸಲಾಗಿದ್ದ 'ರೂರಲ್ ಕೋರ್ಸ್ ಕೃತಕ ಬುದ್ದಿಮತ್ತೆ ಕೌಶಲ್ಯ ಮತ್ತು ಅನುಭವ ಕೇಂದ್ರ' ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ತಂತ್ರಜ್ಞಾನವು ವೇಗವಾಗಿ ಬೆಳೆಯುತ್ತಿರುವ ಈ ಕಾಲಘಟ್ಟದಲ್ಲಿ ಕೃತಕ ಬುದ್ದಿಮತ್ತೆ ನಂತಹ ಆಧುನಿಕ ತಂತ್ರಜ್ಞಾನಕ್ಕೆ ಕರುಣೆ, ನೈತಿಕತೆ ಮತ್ತು ಸದ್ಗುಣಗಳ ಸ್ಪರ್ಶವಿರಬೇಕು. ತಂತ್ರಜ್ಞಾನವು ಮಾನವನ ಬುದ್ಧಿವಂತಿಕೆ ಮತ್ತು ಸದ್ಗುಣಗಳನ್ನು ಹೆಚ್ಚಿಸುವಂತಿರಬೇಕು. ಸತ್ಯಸಾಯಿ ಗ್ರಾಮದಂತಹ ಪವಿತ್ರ ಹಾಗೂ ಸೇವಾ ಮನೋಭಾವದ ವಾತಾವರಣದಲ್ಲಿ ಈ ಕೇಂದ್ರ ಪ್ರಾರಂಭವಾಗಿರುವುದು ಅತ್ಯಂತ ಸೂಕ್ತವಾಗಿದೆ, ಎಂದು ಅಭಿಪ್ರಾಯಪಟ್ಟರು.

ರೂರಲ್ ಶೋರ್ಸ್ ಸಂಸ್ಥೆಯು ಕಳೆದ ೧೮ ವರ್ಷಗಳಿಂದ ಗ್ರಾಮೀಣ ಭಾಗದ ಯುವಜನರು ಉದ್ಯೋಗ ಅರಸಿ ನಗರಗಳಿಗೆ ವಲಸೆ ಹೋಗುವುದನ್ನು ತಪ್ಪಿಸಿ, ಅವರು ಇದ್ದಲ್ಲಿಯೇ ಉದ್ಯೋಗಾವಕಾಶ ಕಲ್ಪಿಸುತ್ತಿರುವುದು ಶ್ಲಾಘನೀಯವಾಗಿದೆ. ಈವರೆಗೆ ಸುಮಾರು ೩೦,೦೦೦ ಕ್ಕೂ ಹೆಚ್ಚು ಯುವಕ-ಯುವತಿಯರಿಗೆ ತರಬೇತಿ ಹಾಗೂ ಉದ್ಯೋಗಾವಕಾಶ ನೀಡಿರುವುದು ಮತ್ತು ಅಮೆರಿಕದಲ್ಲೂ 'ಪೀಪಲ್ಶೋರ್ಸ್' ಮೂಲಕ ಸುಮಾರು ೫೦೦ ಯುವತಿಯರು/ಮಹಿಳೆಯರಿಗೆ ಉದ್ಯೋಗ ನೀಡುತ್ತಿರುವುದು ಹೆಮ್ಮೆಯ ವಿಷಯ, ಎಂದರು.

ಉಚಿತ ಶಿಕ್ಷಣ, ಉಚಿತ ಆರೋಗ್ಯ ಮತ್ತು ಪೌಷ್ಟಿಕ ಆಹಾರ ಒದಗಿಸುವುದು ಪ್ರತಿಯೊಬ್ಬರ ಮೂಲಭೂತ ಹಕ್ಕು ಎಂಬ ತತ್ವದಡಿ ಕಾರ್ಯನಿರ್ವಹಿಸುತ್ತಿರುವ ಸದ್ಗುರು ಶ್ರೀ ಮಧುಸೂದನ ಸಾಯಿ ಅವರ ಮಾರ್ಗದರ್ಶನದ ಸೇವಾ ಕಾರ್ಯಗಳು ಅದ್ಭುತವಾಗಿವೆ. ಭಾರತದ ಪ್ರಥಮ ಸಂಪೂರ್ಣ ಉಚಿತ ಗ್ರಾಮೀಣ ವೈದ್ಯಕೀಯ ಕಾಲೇಜು (ಶ್ರೀ ಮಧುಸೂದನ ಸಾಯಿ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್) ಸೇರಿದಂತೆ ಅನೇಕ ಯೋಜನೆಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪುತ್ತಿರುವುದು ಮಾದರಿಯಾಗಿದೆ, ಎಂದು ತಿಳಿಸಿದರು.

ಕರ್ನಾಟಕವು ದೇಶದ ತಂತ್ರಜ್ಞಾನ ರಾಜಧಾನಿಯಾಗಿ ಬೆಳೆಯುತ್ತಿದ್ದು, ಇಂತಹ ಕೃತಕ ಬುದ್ದಿಮತ್ತೆ ಕೌಶಲ್ಯ ಕೇಂದ್ರಗಳು ಗ್ರಾಮೀಣ ಯುವಕರನ್ನು ಭವಿಷ್ಯದ ತಂತ್ರಜ್ಞಾನಕ್ಕೆ ಸಜ್ಜುಗೊಳಿಸಲಿವೆ. ಭಾರತವು ಜಾಗತಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ನಾಯಕತ್ವ ವಹಿಸಲು ಗ್ರಾಮೀಣ ಭಾಗದ ಪ್ರತಿಭೆಗಳ ಕೊಡುಗೆ ಅಪಾರವಾಗಲಿದೆ, ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಸದ್ಗುರು ಶ್ರೀ ಮಧುಸೂದನ ಸಾಯಿ ಜಿ, ರೂರಲ್ ಶೋರ್ಸ್ ಸಂಸ್ಥೆಯ ನಿರ್ದೇಶಕರು, ಗಣ್ಯರು, ದೇಶ-ವಿದೇಶಗಳ ಭಕ್ತಾದಿಗಳು ಹಾಗೂ ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande