
ಬೆಂಗಳೂರು, 27 ಜುಲೈ (ಹಿ.ಸ.):
ಆ್ಯಂಕರ್:
ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರ ವಿರುದ್ಧ ದಾಖಲಾಗಿರುವ ಪ್ರಕರಣ ಹಾಗೂ ನಡೆಯುತ್ತಿರುವ ಪೊಲೀಸ್ ತನಿಖೆಯ ವಿಚಾರವಾಗಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿ ಪಕ್ಷದ ನಾಯಕ ಆರ್. ಅಶೋಕ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿ ಪಕ್ಷಗಳನ್ನು ದಮನ ಮಾಡಲು ಮತ್ತು ಬೆದರಿಸಿ ತಮ್ಮ ಹಿಡಿತದಲ್ಲಿಟ್ಟುಕೊಳ್ಳಲು ಸರ್ಕಾರ ಇಂತಹ ಕುತಂತ್ರಗಳನ್ನು ನಡೆಸುತ್ತಿದ್ದು, ಇಂಥ ಯಾವುದೇ ಬೆದರಿಕೆಗಳಿಗೆ ತಾವು ಹೆದರುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಚಿಕ್ಕಮಗಳೂರಿನಲ್ಲಿ ಸಿ.ಟಿ. ರವಿ ಅವರ ವಿರುದ್ಧ ನಡೆದಿರುವ ರಾಜಕೀಯ ಬೆಳವಣಿಗೆಗಳ ಕುರಿತು, ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಸರ್ಕಾರದ ದ್ವೇಷ ರಾಜಕಾರಣದ ಧೋರಣೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ಸಿ.ಟಿ. ರವಿ ಅವರನ್ನು ಮುಟ್ಟಿ ನೋಡಲಿ, ಅದಕ್ಕೆ ತಕ್ಕ ಪ್ರತಿಫಲ ಎದುರಿಸಬೇಕಾಗುತ್ತೆ ಎಂದು ಆರ್. ಅಶೋಕ್ ನೇರ ಎಚ್ಚರಿಕೆ ನೀಡಿದರು. ಈಗಾಗಲೇ ಸಿ.ಟಿ. ರವಿ ಅವರೊಂದಿಗೆ ದೂರವಾಣಿ ಮೂಲಕ ಚರ್ಚೆ ನಡೆಸಲಾಗಿದ್ದು, ಇನ್ನು ಮೂರರಿಂದ ನಾಲ್ಕು ದಿನಗಳಲ್ಲಿ ಚಿಕ್ಕಮಗಳೂರಿನಲ್ಲಿ ಬೃಹತ್ ಮಟ್ಟದ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಹಿಂದೆ ಮಂಗಳೂರಿನಲ್ಲಿ ಶಾಸಕ ಭರತ್ ಶೆಟ್ಟಿ ಅವರ ಮೇಲಿನ ದೌರ್ಜನ್ಯದ ಸಂದರ್ಭದಲ್ಲೂ ತಾವೇ ಖುದ್ದಾಗಿ ಸ್ಥಳಕ್ಕೆ ತೆರಳಿ ಹೋರಾಟ ಸಂಘಟಿಸಿದ್ದೆವು, ಅದೇ ಮಾದರಿಯಲ್ಲಿ ಈಗಲೂ ಸರ್ಕಾರದ ವಿರುದ್ಧ ಸಮರ ಸಾರುವುದಾಗಿ ಸ್ಪಷ್ಟಪಡಿಸಿದರು.
ವಿಧಾನಸೌಧದ ಆವರಣದಲ್ಲೇ ಪಾಕಿಸ್ತಾನ ಪರ ಘೋಷಣೆ ಕೂಗಿದವರ ಮೇಲೆ ಹಾಗೂ ಕರ್ತವ್ಯದಲ್ಲಿದ್ದ ಪೊಲೀಸರನ್ನೇ ಹೀಯಾಳಿಸಿ ಪ್ರತಿಭಟನೆ ನಡೆಸಿದವರ ವಿರುದ್ಧ ಈ ಸರ್ಕಾರ ಯಾವುದೇ ಗಂಭೀರ ಕ್ರಮ ಕೈಗೊಂಡಿಲ್ಲ ಎಂದು ಕಿಡಿಕಾರಿದರು. ಸಿ.ಟಿ. ರವಿ ಅವರು ಯಾವುದೇ ಧರ್ಮದ ವಿರುದ್ಧ ಮಾತನಾಡಿಲ್ಲ, ಕೇವಲ ಒಬ್ಬ ವ್ಯಕ್ತಿಯ ಕುರಿತು ಅಷ್ಟೇ ಪ್ರಸ್ತಾಪಿಸಿದ್ದಾರೆ.
ಆದರೆ ಅದನ್ನು ರಾಜಕೀಯ ದುರುದ್ದೇಶದಿಂದ ತಿರುಚಿ, ಅವರ ಮೇಲೆ ಸುಳ್ಳು ಎಫ್ಐಆರ್ ದಾಖಲಿಸಿ ಬಂಧಿಸಲು ಹುನ್ನಾರ ನಡೆಸಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು. ಸರ್ಕಾರದ ಈ ಅನ್ಯಾಯದ ಧೋರಣೆಯನ್ನು ಖಂಡಿಸಿ ಚಿಕ್ಕಮಗಳೂರಿನಲ್ಲಿ ನಡೆಯಲಿರುವ ಪ್ರತಿಭಟನಾ ಹೋರಾಟದಲ್ಲಿ ತಾವೇ ಖುದ್ದಾಗಿ ಭಾಗವಹಿಸುವುದಾಗಿ ಆರ್. ಅಶೋಕ್ ಹೇಳಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / NAVEEN PARADESHII