
ಮೈಸೂರು, 27 ಜುಲೈ (ಹಿ.ಸ.):
ಆ್ಯಂಕರ್:
ವಿಶ್ವಪ್ರಸಿದ್ಧ ಮೈಸೂರು ದಸರಾ ಮಹೋತ್ಸವವನ್ನು ಅತ್ಯಂತ ಯಶಸ್ವಿಯಾಗಿ ಮತ್ತು ವ್ಯವಸ್ಥಿತವಾಗಿ ಆಯೋಜಿಸುವ ನಿಟ್ಟಿನಲ್ಲಿ ಸಿದ್ಧತೆಗಳು ಚುರುಕುಗೊಂಡಿದ್ದು, ಉತ್ಸವದ ನಿರ್ವಹಣೆಗಾಗಿ ಒಟ್ಟು 17 ಉಪಸಮಿತಿಗಳನ್ನು ರಚಿಸಲಾಗಿದೆ ಎಂದು ನಗರಾಭಿವೃದ್ಧಿ ಸಚಿವರಾದ ಡಾ. ಯತೀಂದ್ರ ಸಿದ್ಧರಾಮಯ್ಯ ತಿಳಿಸಿದ್ದಾರೆ.
ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಸೋಮವಾರ ಜರುಗಿದ ದಸರಾ ಕಾರ್ಯಕಾರಿ ಸಮಿತಿ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಬಾರಿಯ ದಸರಾ ಮಹೋತ್ಸವದ ರೂಪುರೇಷೆಗಳು ಹಾಗೂ ಪ್ರಮುಖ ನಿರ್ಧಾರಗಳ ಕುರಿತು ವಿವರಣೆ ನೀಡಿದರು.
ದಸರಾದ ವಿವಿಧ ಜವಾಬ್ದಾರಿಗಳನ್ನು ಹಂಚಿಕೊಳ್ಳಲು ಒಟ್ಟು 17 ಉಪಸಮಿತಿಗಳನ್ನು ರಚಿಸಲಾಗಿದ್ದು, ಪ್ರತಿಯೊಂದು ಸಮಿತಿಗೆ ಸಮರ್ಥ ಕಾರ್ಯಾಧ್ಯಕ್ಷರು ಹಾಗೂ ಸದಸ್ಯರನ್ನು ನೇಮಕ ಮಾಡಲಾಗುತ್ತಿದೆ.
ಈ ಬಾರಿಯ ದಸರಾದಲ್ಲಿ ಕರಾವಳಿ ಭಾಗದ ಸಾಂಪ್ರದಾಯಿಕ 'ಕಂಬಳ' ಕ್ರೀಡೆಯನ್ನು ಆಯೋಜಿಸುವ ಕುರಿತು ಗಂಭೀರ ಚಿಂತನೆ ನಡೆದಿದೆ. ಕಂಬಳ ಆಯೋಜನೆ ಅಂತಿಮಗೊಂಡರೆ ಇದಕ್ಕಾಗಿ ಪ್ರತ್ಯೇಕವಾಗಿ 18ನೇ ಉಪಸಮಿತಿಯನ್ನು ರಚಿಸಲಾಗುವುದು.
ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ 'ಸೈಕ್ಲಿಂಗ್ ವೆಲೋಡ್ರೋಮ್' ಪ್ರದೇಶವನ್ನು ಕಂಬಳಕ್ಕಾಗಿ ಪರಿಶೀಲಿಸಲಾಗಿದ್ದು, ಮುಖ್ಯಮಂತ್ರಿಗಳ ಅಂತಿಮ ಒಪ್ಪಿಗೆಯ ನಂತರ ಅಧಿಕೃತ ತೀರ್ಮಾನ ಹೊರಬೀಳಲಿದೆ.
ದಸರಾ ಉದ್ಘಾಟನೆಗಾಗಿ ಶಾಸಕರು ಮತ್ತು ಜನಪ್ರತಿನಿಧಿಗಳಿಂದ ಹಲವು ಗಣ್ಯರ ಹೆಸರುಗಳು ಬಂದಿವೆ. ಅಂತಿಮವಾಗಿ ಯಾರನ್ನು ಆಹ್ವಾನಿಸಬೇಕು ಎಂಬುದನ್ನು ಮುಖ್ಯಮಂತ್ರಿಗಳೇ ನಿರ್ಧರಿಸಲಿದ್ದಾರೆ.
ಮೈಸೂರು ನಗರದಲ್ಲಿ ಪ್ರಸ್ತುತ ನಡೆಯುತ್ತಿರುವ ಫ್ಲೈಓವರ್, ವೈಟ್ ಟಾಪಿಂಗ್ ಹಾಗೂ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಪೈಕಿ ದಸರಾಗೂ ಮುನ್ನ ಪೂರ್ಣಗೊಳ್ಳಬಹುದಾದ ಕೆಲಸಗಳನ್ನು ತಕ್ಷಣವೇ ಮುಗಿಸಲು ಸೂಚಿಸಲಾಗಿದೆ. ಹಬ್ಬದ ವೇಳೆಗೆ ಮುಗಿಯದ ದೀರ್ಘಾವಧಿಯ ಕಾಮಗಾರಿಗಳನ್ನು ಹಬ್ಬದ ದಿನಗಳಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ, ಸಾರ್ವಜನಿಕರು ಹಾಗೂ ಪ್ರವಾಸಿಗರಿಗೆ ಯಾವುದೇ ಸಂಚಾರ ದಟ್ಟಣೆ ಅಥವಾ ತೊಂದರೆಯಾಗದಂತೆ ಎಚ್ಚರಿಕೆ ವಹಿಸಲು ನಿರ್ದೇಶಿಸಲಾಗಿದೆ.
ಈ ಬಾರಿಯ ದಸರಾದಲ್ಲಿ ಡ್ರೋನ್ ಶೋ ಅನ್ನು ಇನ್ನಷ್ಟು ಅತ್ಯಾಧುನಿಕ ಹಾಗೂ ವಿನೂತನವಾಗಿ ಆಯೋಜಿಸಲಾಗುವುದು. ಜತೆಗೆ, ಕೇಂದ್ರ ಸರ್ಕಾರದ ಅನುಮತಿ ಲಭ್ಯವಾದರೆ ವಾಯುಪಡೆಯಿಂದ 'ಏರ್ ಶೋ' ಕೂಡ ನಡೆಸುವ ಕುರಿತು ಪ್ರಯತ್ನಗಳು ನಡೆದಿವೆ.
ಗೋಲ್ಡ್ ಪಾಸ್ ಗೊಂದಲಕ್ಕೆ ಬ್ರೇಕ್:
ದಸರಾ ವೀಕ್ಷಣೆಯ 'ಗೋಲ್ಡ್ ಪಾಸ್' ವಿತರಣೆಯಲ್ಲಿ ಎದುರಾಗುವ ಗೊಂದಲಗಳಿಗೆ ತೆರೆ ಎಳೆಯಲು ಈ ಬಾರಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಆಸನಗಳ ಲಭ್ಯತೆಗೆ ತಕ್ಕಂತೆ ಮಾತ್ರ ಪಾಸ್ಗಳನ್ನು ಮುದ್ರಿಸಿ, ಹಣ ನೀಡಿ ಅಧಿಕೃತವಾಗಿ ಖರೀದಿಸುವ ಸಾರ್ವಜನಿಕರಿಗೆ ಮಾತ್ರ ಅವುಗಳನ್ನು ನೀಡಲಾಗುವುದು. ಈ ಬಾರಿ ವಿಐಪಿಗಳಿಗೆ ಯಾವುದೇ ಉಚಿತ ಗೋಲ್ಡ್ ಪಾಸ್ ನೀಡದಿರಲು ಸ್ಪಷ್ಟ ನಿರ್ಧಾರ ಕೈಗೊಳ್ಳಲಾಗಿದೆ.
ಅಧಿಕಾರಿಗಳು ದಸರಾ ಹಾಗೂ ಇತರೆ ಸರ್ಕಾರಿ ಕೆಲಸಗಳಲ್ಲಿ ನಿರತರಾಗಿದ್ದರೂ ಸಹ, ಸಾರ್ವಜನಿಕರ ದಿನನಿತ್ಯದ ಕೆಲಸ-ಕಾರ್ಯಗಳಿಗೆ ಯಾವುದೇ ರೀತಿಯ ಅಡಚಣೆ ಉಂಟಾಗಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ದಸರಾ ನಮ್ಮ ರಾಜ್ಯದ ಹೆಮ್ಮೆ. ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳು ನೀಡಿರುವ ನೈರ್ಮಲ್ಯ ಕಾಪಾಡುವಿಕೆ, ಮಹಿಳೆಯರ ಸುರಕ್ಷತೆ ಮತ್ತು ತಾಲೂಕು ಮಟ್ಟದ ಕ್ರೀಡೋತ್ಸವಗಳ ಆಯೋಜನೆಯಂತಹ ಸಲಹೆಗಳನ್ನು ಗಣನೆಗೆ ತೆಗೆದುಕೊಂಡು ಈ ಬಾರಿಯ ದಸರಾವನ್ನು ಅತ್ಯಂತ ವಿಜೃಂಭಣೆಯಿಂದ ಹಾಗೂ ಅಚ್ಚುಕಟ್ಟಾಗಿ ಆಚರಿಸಲಾಗುವುದು ಎಂದು ಡಾ. ಯತೀಂದ್ರ ಸಿದ್ಧರಾಮಯ್ಯ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / NAVEEN PARADESHII