ಮಂಡ್ಯ ಜಿಲ್ಲೆಗೆ ಆಧಾರ್ ಸೇವಾ ಕೇಂದ್ರ ಮಂಜೂರು
ಮಂಡ್ಯ, 27 ಜುಲೈ (ಹಿ.ಸ.): ಆ್ಯಂಕರ್: ಮಂಡ್ಯ ಜಿಲ್ಲೆಯ ಸಾರ್ವಜನಿಕರ ಬಹು ದಿನಗಳ ಬೇಡಿಕೆಯಾಗಿದ್ದ ಸುಸಜ್ಜಿತ ಮತ್ತು ಆಧುನಿಕ ''ಆಧಾರ್ ಸೇವಾ ಕೇಂದ್ರ ಸ್ಥಾಪನೆಗೆ ಕೇಂದ್ರ ಸರ್ಕಾರದಿಂದ ಅಧಿಕೃತ ಒಪ್ಪಿಗೆ ಸಿಕ್ಕಿದೆ. ಮಂಡ್ಯ ಜಿಲ್ಲೆಗೆ 4 ಇಸಿಎಂಪಿ ಕಿಟ್ಗಳನ್ನು ಒಳಗೊಂಡ ಅತ್ಯಾಧುನಿಕ ಹೊಸ ಆಧಾರ್ ಸೇವಾ
AadhaarSevaKendra


ಮಂಡ್ಯ, 27 ಜುಲೈ (ಹಿ.ಸ.):

ಆ್ಯಂಕರ್:

ಮಂಡ್ಯ ಜಿಲ್ಲೆಯ ಸಾರ್ವಜನಿಕರ ಬಹು ದಿನಗಳ ಬೇಡಿಕೆಯಾಗಿದ್ದ ಸುಸಜ್ಜಿತ ಮತ್ತು ಆಧುನಿಕ 'ಆಧಾರ್ ಸೇವಾ ಕೇಂದ್ರ ಸ್ಥಾಪನೆಗೆ ಕೇಂದ್ರ ಸರ್ಕಾರದಿಂದ ಅಧಿಕೃತ ಒಪ್ಪಿಗೆ ಸಿಕ್ಕಿದೆ. ಮಂಡ್ಯ ಜಿಲ್ಲೆಗೆ 4 ಇಸಿಎಂಪಿ ಕಿಟ್ಗಳನ್ನು ಒಳಗೊಂಡ ಅತ್ಯಾಧುನಿಕ ಹೊಸ ಆಧಾರ್ ಸೇವಾ ಕೇಂದ್ರ ಮಂಜೂರಾಗಿರುವುದಾಗಿ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಸಾಮಾಜಿಕ ಜಾಲತಾಣದ ಮೂಲಕ ಹರ್ಷ ಹಂಚಿಕೊಂಡಿದ್ದಾರೆ.

ಮಂಡ್ಯ ಜಿಲ್ಲೆ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಭಾಗದ ಲಕ್ಷಾಂತರ ಜನರಿಗೆ ಆಧಾರ್ ಕಾರ್ಡ್ ಹೊಸ ನೋಂದಣಿ, ವಿಳಾಸ ಹಾಗೂ ಇತರೆ ಮಾಹಿತಿ ತಿದ್ದುಪಡಿ, ಮತ್ತು ಬಯೋಮೆಟ್ರಿಕ್ ಅಪ್ಡೇಟ್ ಸೇರಿದಂತೆ ಪ್ರಮುಖ ಸೇವೆಗಳನ್ನು ಅತ್ಯಂತ ಸುಲಭವಾಗಿ ಮತ್ತು ವಿಳಂಬವಿಲ್ಲದೆ ಒದಗಿಸುವ ನಿಟ್ಟಿನಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರು ಕೇಂದ್ರ ಐಟಿ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ವಿಶೇಷ ಮನವಿ ಸಲ್ಲಿಸಿದ್ದರು. ಸಚಿವರ ಈ ಮನವಿಗೆ ತಕ್ಷಣವೇ ಸ್ಪಂದಿಸಿರುವ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಮಂಡ್ಯಕ್ಕೆ ಹೊಸ ಕೇಂದ್ರವನ್ನು ಮಂಜೂರು ಮಾಡಿ ಅಧಿಕೃತ ಆದೇಶ ಹೊರಡಿಸಿದೆ.

ಈ ಜನಪರ ನಿರ್ಧಾರದ ಕುರಿತು ಸಂತಸ ವ್ಯಕ್ತಪಡಿಸಿರುವ ಹೆಚ್ಡಿಕೆ, ಜನಸ್ನೇಹಿ ಆಡಳಿತಕ್ಕೆ ಎಂದೆಂದಿಗೂ ಬದ್ಧವಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವಕ್ಕೆ ನನ್ನ ಹೃತ್ಪೂರ್ವಕ ಧನ್ಯವಾದಗಳು. ಹಾಗೆಯೇ, ನನ್ನ ಮನವಿಯನ್ನು ಗೌರವಿಸಿ ಮಂಡ್ಯ ಜನತೆಗೆ ಈ ಡಿಜಿಟಲ್ ಸೌಲಭ್ಯವನ್ನು ಕಲ್ಪಿಸಿಕೊಟ್ಟ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರಿಗೂ ನನ್ನ ಧನ್ಯವಾದಗಳನ್ನು ಸಮರ್ಪಿಸುತ್ತೇನೆ ಎಂದು ತಮ್ಮ ಪೋಸ್ಟ್ನಲ್ಲಿ ಉಲ್ಲೇಖಿಸಿದ್ದಾರೆ.

ಮಂಡ್ಯದಲ್ಲಿ ಸ್ಥಾಪನೆಯಾಗಲಿರುವ ಈ ಹೊಸ ಹೈಟೆಕ್ ಆಧಾರ್ ಸೇವಾ ಕೇಂದ್ರವು ಗ್ರಾಮೀಣ ಮಟ್ಟದಲ್ಲಿ 'ಡಿಜಿಟಲ್ ಇಂಡಿಯಾ' ಉಪಕ್ರಮವನ್ನು ಇನ್ನಷ್ಟು ಬಲಪಡಿಸಲಿದೆ. ಈ ಕೇಂದ್ರದ ಆರಂಭದೊಂದಿಗೆ, ಸ್ಥಳೀಯ ಸಾರ್ವಜನಿಕರು ಆಧಾರ್ಗೆ ಸಂಬಂಧಿಸಿದ ವಿವಿಧ ಸೇವೆಗಳಿಗಾಗಿ ಇನ್ನು ಮುಂದೆ ಬೆಂಗಳೂರು ಅಥವಾ ಇತರೆ ದೂರದ ನಗರಗಳಿಗೆ ಅಲೆದಾಡುವುದು ತಪ್ಪಲಿದೆ. ಇನ್ಮುಂದೆ ಎಲ್ಲರಿಗೂ ತಮ್ಮ ಸ್ವಂತ ಜಿಲ್ಲೆಯಲ್ಲೇ ಅತ್ಯಂತ ಸುಲಭವಾಗಿ ತಂತ್ರಜ್ಞಾನ ಆಧಾರಿತ ಸೇವೆಗಳು ಲಭ್ಯವಾಗಲಿವೆ.

ಹಿಂದೂಸ್ತಾನ್ ಸಮಾಚಾರ್ / NAVEEN PARADESHII


 rajesh pande