
ಬೆಂಗಳೂರು, 27 ಜುಲೈ (ಹಿ.ಸ.):
ಆ್ಯಂಕರ್:
ಮುಂದಿನ 2028ರ ವಿಧಾನಸಭಾ ಚುನಾವಣೆಯಲ್ಲಿ ತಾವು ಸ್ಪರ್ಧಿಸುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ಧಾರವು ರಾಜ್ಯ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ನಡುವೆ, ಅವರು ರಾಜ್ಯದ ಚುನಾವಣಾ ರಾಜಕೀಯದಿಂದ ದೂರವಿದ್ದರೂ ಸಹ, ಮುಂಬರುವ ದಿನಗಳಲ್ಲಿ ರಾಜ್ಯಸಭೆ ಪ್ರವೇಶಿಸಿ ಕೇಂದ್ರ ರಾಜಕಾರಣದಲ್ಲಿ ಸಕ್ರಿಯ ಪಾತ್ರ ವಹಿಸುವ ಸಾಧ್ಯತೆಗಳಿವೆ ಎಂದು ಕಾಂಗ್ರೆಸ್ ಶಾಸಕ ಎಚ್.ಸಿ. ಬಾಲಕೃಷ್ಣ ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಬಾಲಕೃಷ್ಣ, ಪ್ರಸ್ತುತ ರಾಜಕೀಯ ವ್ಯವಸ್ಥೆಯ ಕುರಿತು ಸಿದ್ದರಾಮಯ್ಯ ಅವರು ಮುಕ್ತವಾಗಿ ವಿಶ್ಲೇಷಿಸಿದ್ದಾರೆ ಎಂದು ತಿಳಿಸಿದರು. ಹಿಂದೆಲ್ಲಾ ಚುನಾವಣಾ ವ್ಯವಸ್ಥೆ ಶುದ್ಧವಾಗಿತ್ತು, ಆದರೆ ಇಂದಿನ ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ ಎಂಬ ಕಾರಣಕ್ಕೇ ಅವರು ಮುಂದಿನ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದಿದ್ದಾರೆ.
ಆದಾಗ್ಯೂ, ಕಾಂಗ್ರೆಸ್ ಪಕ್ಷಕ್ಕೆ ಸಿದ್ದರಾಮಯ್ಯ ಅವರ ಮಾರ್ಗದರ್ಶನ ಮತ್ತು ನೇತೃತ್ವ ಅತ್ಯಂತ ಅನಿವಾರ್ಯ ಎಂದು ಬಾಲಕೃಷ್ಣ ಹೇಳಿದರು.
ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಣ್ಣನವರು ಅತ್ಯಂತ ಬಲವಾದ ಆಧಾರಸ್ತಂಭವಾಗಿದ್ದಾರೆ. ಅವರಿಲ್ಲದೆ ಪಕ್ಷಕ್ಕೆ ಹಿನ್ನಡೆಯಾಗಲಿದೆ ಮತ್ತು ಮುನ್ನಡೆಯುವುದು ಕಷ್ಟವಾಗುತ್ತದೆ ಎಂದ ಅವರು, ಸಿದ್ದರಾಮಯ್ಯನವರು ಚುನಾವಣಾ ರಾಜಕೀಯದಿಂದ ಹಿಂದೆ ಸರಿದರೂ ಪಕ್ಷದ ಸಂಘಟನೆಗೆ ಎಂದೆಂದಿಗೂ ಶಕ್ತಿ ತುಂಬಲಿದ್ದಾರೆ ಎಂದರು.
ರಾಜ್ಯದ ಚುನಾವಣಾ ಕಣದಿಂದ ಅವರು ಹಿಂದೆ ಸರಿದರೂ, ಕೇಂದ್ರ ಮಟ್ಟದಲ್ಲಿ ಅವರಿಗೆ ದೊಡ್ಡ ಜವಾಬ್ದಾರಿ ಸಿಗುವ ಅವಕಾಶಗಳಿವೆ. ಮುಂಬರುವ ದಿನಗಳಲ್ಲಿ ರಾಜ್ಯಸಭೆ ಸದಸ್ಯರಾಗಿ ಕೇಂದ್ರ ರಾಜಕಾರಣಕ್ಕೆ ಪ್ರವೇಶಿಸಿ, ಕೇಂದ್ರದಲ್ಲಿ ಪ್ರಮುಖ ಹುದ್ದೆಗಳನ್ನು ಅಲಂಕರಿಸುವ ಸಾಧ್ಯತೆಗಳೂ ಇವೆ ಎಂದು ಬಾಲಕೃಷ್ಣ ವಿಶ್ವಾಸ ವ್ಯಕ್ತಪಡಿಸಿದರು. ರಾಹುಲ್ ಗಾಂಧಿ ಅವರನ್ನು ದೇಶದ ಪ್ರಧಾನಿಯನ್ನಾಗಿ ಮಾಡುವುದೇ ತಮ್ಮ ಮುಂದಿನ ಪ್ರಮುಖ ರಾಜಕೀಯ ಗುರಿ ಎಂದು ಸಿದ್ದರಾಮಯ್ಯ ಈಗಾಗಲೇ ಸ್ಪಷ್ಟಪಡಿಸಿರುವುದನ್ನು ಅವರು ಈ ಸಂದರ್ಭದಲ್ಲಿ ಸ್ಮರಿಸಿದರು.
ಹಿಂದೂಸ್ತಾನ್ ಸಮಾಚಾರ್ / NAVEEN PARADESHII