
ಬಾಗಲಕೋಟೆ, 27 ಜುಲೈ (ಹಿ.ಸ.)
ಆ್ಯಂಕರ್ : ಕೃಷಿ ಕ್ಷೇತ್ರದಲ್ಲಿ ಹೊಸ ತಂತ್ರಜ್ಞಾನ, ವೈಜ್ಞಾನಿಕ ಕೃಷಿ ಪದ್ಧತಿಗಳು ಹಾಗೂ ಮಣ್ಣಿನ ಆರೋಗ್ಯದ ಮಹತ್ವದ ಕುರಿತು ರೈತರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಬಾಗಲಕೋಟೆ ಜಿಲ್ಲೆಯ ಮುಧೋಳ ನಗರದ ರನ್ನ ಭವನದಲ್ಲಿ ‘ಮಣ್ಣಿನೊಂದಿಗೆ ಮಾತು’ ಸಂವಾದ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಚಿಂತನಸಿರಿ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ನೂರಾರು ರೈತರು ಉತ್ಸಾಹದಿಂದ ಪಾಲ್ಗೊಂಡು ಕೃಷಿ ತಜ್ಞರೊಂದಿಗೆ ನೇರ ಸಂವಾದ ನಡೆಸಿದರು.
ಕಾರ್ಯಕ್ರಮದಲ್ಲಿ ಚಿಂತನಸಿರಿ ಟ್ರಸ್ಟ್ನ ಗೌರವಾಧ್ಯಕ್ಷ ಎಂ.ಆರ್. ದೇಸಾಯಿ, ಕೃಷಿ ಸಂಶೋಧಕ ಡಾ. ಸಂಗಮೇಶ ಕಲ್ಯಾಣಿ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಹೊಸಮನಿ ಸೇರಿದಂತೆ ಕೃಷಿ ವಿಜ್ಞಾನಿಗಳು ಭಾಗವಹಿಸಿ ರೈತರಿಗೆ ಮಣ್ಣಿನ ಫಲವತ್ತತೆ ಕಾಪಾಡುವ ವಿಧಾನಗಳು, ಬೆಳೆ ವೈವಿಧ್ಯತೆ, ನೈಸರ್ಗಿಕ ಹಾಗೂ ಸಮಗ್ರ ಕೃಷಿ ಪದ್ಧತಿಗಳು, ನೀರಿನ ಸಮರ್ಪಕ ಬಳಕೆ, ಆಧುನಿಕ ಕೃಷಿ ತಂತ್ರಜ್ಞಾನ ಹಾಗೂ ಮಣ್ಣಿನ ಪರೀಕ್ಷೆಯ ಮಹತ್ವದ ಕುರಿತು ವಿವರವಾದ ಮಾಹಿತಿ ನೀಡಿದರು.
ಸಂವಾದದಲ್ಲಿ ರೈತರು ತಮ್ಮ ಬೆಳೆಗಳಲ್ಲಿ ಎದುರಾಗುತ್ತಿರುವ ಸಮಸ್ಯೆಗಳು, ಮಣ್ಣಿನ ಗುಣಮಟ್ಟ ಕುಸಿತ, ಕೀಟ ಹಾಗೂ ರೋಗಬಾಧೆ, ಉತ್ಪಾದನಾ ವೆಚ್ಚ ಹೆಚ್ಚಳ ಸೇರಿದಂತೆ ಹಲವು ಪ್ರಶ್ನೆಗಳನ್ನು ತಜ್ಞರ ಮುಂದಿಟ್ಟು ಪರಿಹಾರ ಮಾರ್ಗಗಳನ್ನು ತಿಳಿದುಕೊಂಡರು. ಕೃಷಿ ವಿಜ್ಞಾನಿಗಳು ರೈತರ ಪ್ರಶ್ನೆಗಳಿಗೆ ವೈಜ್ಞಾನಿಕ ಹಾಗೂ ಪ್ರಾಯೋಗಿಕ ಉತ್ತರಗಳನ್ನು ನೀಡಿ, ಮಣ್ಣಿನ ಆರೋಗ್ಯ ಕಾಪಾಡಿದರೆ ಮಾತ್ರ ಉತ್ತಮ ಇಳುವರಿ ಮತ್ತು ಶಾಶ್ವತ ಕೃಷಿ ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ವಕ್ತಾರರು ಮಾತನಾಡಿ, ಇಂದಿನ ಕೃಷಿಯಲ್ಲಿ ಮಣ್ಣಿನ ಸಂರಕ್ಷಣೆ ಅತ್ಯಂತ ಮುಖ್ಯವಾಗಿದ್ದು, ನಿರಂತರ ರಾಸಾಯನಿಕ ಗೊಬ್ಬರಗಳ ಅತಿಯಾದ ಬಳಕೆಯಿಂದ ಮಣ್ಣಿನ ಫಲವತ್ತತೆ ಕುಸಿಯುತ್ತಿದೆ. ಆದ್ದರಿಂದ ಮಣ್ಣಿನ ಪರೀಕ್ಷೆ ನಡೆಸಿ ಅದರ ವರದಿಯ ಆಧಾರದ ಮೇಲೆ ಗೊಬ್ಬರ ಬಳಕೆ, ಸಾವಯವ ಗೊಬ್ಬರಗಳ ಪ್ರೋತ್ಸಾಹ ಹಾಗೂ ಬೆಳೆ ಪರಿವರ್ತನೆ ಪದ್ಧತಿಯನ್ನು ಅನುಸರಿಸುವಂತೆ ರೈತರಿಗೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ರೈತರಿಗೆ ಆಧುನಿಕ ಕೃಷಿ ತಂತ್ರಜ್ಞಾನಗಳ ಪರಿಚಯ, ಸರ್ಕಾರದ ವಿವಿಧ ಕೃಷಿ ಯೋಜನೆಗಳ ಮಾಹಿತಿ ಹಾಗೂ ಮಣ್ಣಿನ ಆರೋಗ್ಯ ಕಾಪಾಡುವ ಬಗ್ಗೆ ಉಪಯುಕ್ತ ಸಲಹೆಗಳನ್ನು ನೀಡಲಾಯಿತು. ಕಾರ್ಯಕ್ರಮದ ಕೊನೆಯಲ್ಲಿ ರೈತರು ಇಂತಹ ಸಂವಾದಗಳು ಗ್ರಾಮೀಣ ಮಟ್ಟದಲ್ಲಿಯೂ ಹೆಚ್ಚಾಗಿ ನಡೆಯಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ಅಧಿಕಾರಿಗಳು, ವಿವಿಧ ಕೃಷಿ ಸಂಘಟನೆಗಳ ಪ್ರತಿನಿಧಿಗಳು, ಕೃಷಿ ಆಸಕ್ತರು ಹಾಗೂ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ನೂರಾರು ರೈತರು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande