ಸಸಿ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆ ; ಹಸಿರು ಬಾಗಲಕೋಟೆ ನಿರ್ಮಾಣಕ್ಕೆ ಸಂಕಲ್ಪ
ಬಾಗಲಕೋಟೆ, 09 ಜೂನ್ (ಹಿ.ಸ.) : ಆಂಕರ್ : ಪರಿಸರ ಸಂರಕ್ಷಣೆ ಮತ್ತು ಹಸಿರು ಪರಿಸರ ನಿರ್ಮಾಣದ ಸಂದೇಶವನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಬಾಗಲಕೋಟೆ ನಗರಸಭೆ ವತಿಯಿಂದ ವಿಶ್ವ ಪರಿಸರ ದಿನಾಚರಣೆಯನ್ನು ಮಂಗಳವಾರ ರೂಪಲ್ಯಾಂಡ್ ಕಾಲೋನಿಯಲ್ಲಿ ಸಸಿ ನೆಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು. ಅಧಿಕಾರಿಗ
Sasi


ಬಾಗಲಕೋಟೆ, 09 ಜೂನ್ (ಹಿ.ಸ.) :

ಆಂಕರ್ : ಪರಿಸರ ಸಂರಕ್ಷಣೆ ಮತ್ತು ಹಸಿರು ಪರಿಸರ ನಿರ್ಮಾಣದ ಸಂದೇಶವನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಬಾಗಲಕೋಟೆ ನಗರಸಭೆ ವತಿಯಿಂದ ವಿಶ್ವ ಪರಿಸರ ದಿನಾಚರಣೆಯನ್ನು ಮಂಗಳವಾರ ರೂಪಲ್ಯಾಂಡ್ ಕಾಲೋನಿಯಲ್ಲಿ ಸಸಿ ನೆಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು. ಅಧಿಕಾರಿಗಳು, ಪೌರಕಾರ್ಮಿಕರು ಹಾಗೂ ಸಾರ್ವಜನಿಕರು ಭಾಗವಹಿಸಿ ಪರಿಸರ ಸಂರಕ್ಷಣೆಯ ಮಹತ್ವವನ್ನು ಸಾರಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಉಮೇಶ್ ಮೇಟಿ, ಪರಿಸರ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಹೊಣೆಗಾರಿಕೆಯಾಗಿದೆ ಎಂದು ತಿಳಿಸಿದರು. ಇಂದಿನ ವೇಗದ ನಗರೀಕರಣ ಹಾಗೂ ಪರಿಸರ ಮಾಲಿನ್ಯದ ನಡುವೆಯೂ ಹಸಿರು ಸಂಪತ್ತನ್ನು ಉಳಿಸಿಕೊಳ್ಳುವುದು ಅತ್ಯಂತ ಅಗತ್ಯವಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸಸಿಗಳನ್ನು ನೆಟ್ಟು ಅವುಗಳನ್ನು ಪೋಷಿಸುವ ಮೂಲಕ ಪರಿಸರ ಸಮತೋಲನ ಕಾಪಾಡುವ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಮುಂದಿನ ಪೀಳಿಗೆಗೆ ಆರೋಗ್ಯಕರ ಮತ್ತು ಸುಂದರ ಪರಿಸರವನ್ನು ನೀಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಕೇವಲ ಅಭಿವೃದ್ಧಿಯ ಹೆಸರಿನಲ್ಲಿ ಪ್ರಕೃತಿಯನ್ನು ನಿರ್ಲಕ್ಷಿಸದೆ, ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆ ಎರಡನ್ನೂ ಸಮತೋಲನದಿಂದ ಸಾಗಿಸಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಮಾತನಾಡಿದ ಬಿಟಿಡಿಎ ಅಧ್ಯಕ್ಷ ಪ್ರಕಾಶ್ ತಪ್ಸಟ್ಟಿ, ವಿಶ್ವ ಪರಿಸರ ದಿನಾಚರಣೆ ಒಂದು ದಿನದ ಆಚರಣೆಗೆ ಮಾತ್ರ ಸೀಮಿತವಾಗಬಾರದು ಎಂದು ಹೇಳಿದರು. ಪರಿಸರ ರಕ್ಷಣೆಯ ಕುರಿತು ವರ್ಷಪೂರ್ತಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ನಡೆಯಬೇಕು. ಸಸಿ ನೆಡುವುದೇ ಪರಿಸರ ಸಂರಕ್ಷಣೆಯ ಅಂತಿಮ ಹಂತವಲ್ಲ; ಅವುಗಳನ್ನು ಬೆಳೆಸಿ, ಸಂರಕ್ಷಿಸಿ ದೊಡ್ಡ ಮರಗಳನ್ನಾಗಿ ರೂಪಿಸುವ ಜವಾಬ್ದಾರಿಯನ್ನೂ ಪ್ರತಿಯೊಬ್ಬರೂ ಹೊತ್ತುಕೊಳ್ಳಬೇಕು ಎಂದು ತಿಳಿಸಿದರು.

ನಗರಸಭೆ ವತಿಯಿಂದ ಹಮ್ಮಿಕೊಳ್ಳಲಾಗಿರುವ ವಿವಿಧ ಹಸಿರು ಅಭಿಯಾನಗಳು ನಗರದಲ್ಲಿ ಪರಿಸರ ಜಾಗೃತಿ ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ. ನಗರ ಪ್ರದೇಶಗಳಲ್ಲಿ ಹಸಿರು ವಲಯಗಳ ವಿಸ್ತರಣೆ, ಸಾರ್ವಜನಿಕ ಸ್ಥಳಗಳಲ್ಲಿ ಸಸಿ ನೆಡುವ ಕಾರ್ಯಕ್ರಮಗಳು ಹಾಗೂ ಪರಿಸರ ಸ್ನೇಹಿ ಚಟುವಟಿಕೆಗಳ ಮೂಲಕ ಪರಿಸರ ಸಂರಕ್ಷಣೆಯತ್ತ ಜನರನ್ನು ಸೆಳೆಯುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಕಾರ್ಯಕ್ರಮದ ಅಂಗವಾಗಿ ರೂಪಲ್ಯಾಂಡ್ ಕಾಲೋನಿಯ ವಿವಿಧ ಸ್ಥಳಗಳಲ್ಲಿ ವಿವಿಧ ಜಾತಿಯ ಸಸಿಗಳನ್ನು ನೆಡಲಾಯಿತು. ಭಾಗವಹಿಸಿದ್ದ ಸಾರ್ವಜನಿಕರು ಮತ್ತು ಸ್ಥಳೀಯ ನಿವಾಸಿಗಳು ಪರಿಸರ ಸಂರಕ್ಷಣೆಯ ಪ್ರತಿಜ್ಞೆ ಸ್ವೀಕರಿಸಿ, ನೆಟ್ಟ ಸಸಿಗಳ ಪೋಷಣೆ ಮಾಡುವುದಾಗಿ ಸಂಕಲ್ಪ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಅಕ್ಬರ್ ಮುಲ್ಲಾ, ರಾಜು ಮಣಿಕೇರಿ, ಆಜಿಶಾಬ್ ದಂಡಿನ, ಮಂಜು ಬೀರನವರ, ವಾಸಣ್ಣ ಆರ್., ನಗರಸಭೆ ಪೌರಾಯುಕ್ತರು, ಪರಿಸರ ಅಭಿಯಂತರ ಸತೀಶ್ ಕಜ್ಜಿದೋನಿ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಸಾರವಾನ್, ಕಿರಿಯ ಅಭಿಯಂತರ ನವಿದ್ ಖಾಜಿ, ರೂಪಲ್ಯಾಂಡ್ ಕಾಲೋನಿಯ ಮುಖಂಡರು, ನಗರಸಭೆಯ ಸಿಬ್ಬಂದಿ, ಪೌರಕಾರ್ಮಿಕರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ನಡೆದ ಈ ಕಾರ್ಯಕ್ರಮವು ಪರಿಸರ ಸಂರಕ್ಷಣೆಯ ಮಹತ್ವವನ್ನು ಮತ್ತಷ್ಟು ಬಲವಾಗಿ ಸಾರಿದರೆ, ಹಸಿರು ಬಾಗಲಕೋಟೆ ನಿರ್ಮಾಣದ ಸಂಕಲ್ಪಕ್ಕೆ ಹೊಸ ಉತ್ತೇಜನ ನೀಡಿದಂತಾಯಿತು. ಪರಿಸರ ಉಳಿದರೆ ಮಾತ್ರ ಮಾನವ ಬದುಕು ಸುರಕ್ಷಿತ ಎಂಬ ಸಂದೇಶವನ್ನು ಕಾರ್ಯಕ್ರಮ ಸ್ಪಷ್ಟವಾಗಿ ಪ್ರತಿಪಾದಿಸಿತು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande