
ಬಾಗಲಕೋಟೆ, 09 ಜೂನ್ (ಹಿ.ಸ.) :
ಆಂಕರ್ : ವಿಧಾನ ಪರಿಷತ್ ಸದಸ್ಯೆ, ಮಾಜಿ ಸಚಿವೆ ಹಾಗೂ ತೇರದಾಳ ಕ್ಷೇತ್ರದ ಮಾಜಿ ಶಾಸಕರಾದ ಡಾ ಉಮಾಶ್ರೀ ಅವರಿಗೆ ರಾಜ್ಯ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕು ಎಂದು ಒತ್ತಾಯಿಸಿ ತೇರದಾಳ ಮತಕ್ಷೇತ್ರದ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಬನಹಟ್ಟಿ ನಗರದ ಪ್ರವಾಸಿ ಮಂದಿರದಲ್ಲಿ ಸಭೆ ನಡೆಸಿದರು.
ಸಭೆಯಲ್ಲಿ ಮಾತನಾಡಿದ ಮುಖಂಡರು, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಬಲವರ್ಧನೆ, ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಹಾಗೂ 2028ರ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಅನುಭವಿ ಹಾಗೂ ಪಕ್ಷನಿಷ್ಠ ನಾಯಕರಿಗೆ ಸಚಿವ ಸಂಪುಟದಲ್ಲಿ ಅವಕಾಶ ನೀಡುವುದು ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು. ಈ ನಿಟ್ಟಿನಲ್ಲಿ ಡಾ. ಉಮಾಶ್ರೀ ಅವರಿಗೆ ಸಚಿವ ಸ್ಥಾನ ನೀಡುವ ಮೂಲಕ ಪಕ್ಷದ ಸಂಘಟನೆಗೆ ಮತ್ತಷ್ಟು ಬಲ ತುಂಬಬಹುದು ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದ ಸಂಘಟನೆಗೆ ದೀರ್ಘಕಾಲದಿಂದ ಸೇವೆ ಸಲ್ಲಿಸಿರುವ ಡಾ. ಉಮಾಶ್ರೀ ಅವರು ಜನಸಾಮಾನ್ಯರೊಂದಿಗೆ ನಿಕಟ ಸಂಪರ್ಕ ಹೊಂದಿರುವ ನಾಯಕಿಯಾಗಿದ್ದು, ವಿಶೇಷವಾಗಿ ಮಹಿಳೆಯರು, ನೇಕಾರರು, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು ಹಾಗೂ ಶೋಷಿತ ಸಮುದಾಯಗಳ ಪರವಾಗಿ ನಿರಂತರವಾಗಿ ಧ್ವನಿಯಾಗಿದ್ದಾರೆ ಎಂದು ಮುಖಂಡರು ತಿಳಿಸಿದರು.
2013ರಿಂದ 2018ರವರೆಗೆ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರದಲ್ಲಿ ಸಚಿವೆಯಾಗಿ ಕಾರ್ಯನಿರ್ವಹಿಸಿದ್ದ ಡಾ. ಉಮಾಶ್ರೀ ಅವರು ತಮ್ಮ ಆಡಳಿತಾತ್ಮಕ ದಕ್ಷತೆ, ಪ್ರಾಮಾಣಿಕತೆ ಮತ್ತು ಕಾರ್ಯಕ್ಷಮತೆಯಿಂದ ಜನರ ಮೆಚ್ಚುಗೆ ಗಳಿಸಿದ್ದರು. ತಮ್ಮ ಇಲಾಖೆಯ ಕಾರ್ಯಕ್ಷಮತೆಗೆ ರಾಷ್ಟ್ರಪತಿ ಪ್ರಶಸ್ತಿಯನ್ನು ತಂದುಕೊಟ್ಟ ಹೆಗ್ಗಳಿಕೆಯೂ ಅವರಿಗೆ ಸಲ್ಲುತ್ತದೆ ಎಂದು ಕಾಂಗ್ರೆಸ್ ಮುಖಂಡರು ಸ್ಮರಿಸಿದರು.
ಪಕ್ಷದ ಹಿರಿಯ ನಾಯಕಿಯಾಗಿ ಗುರುತಿಸಿಕೊಂಡಿರುವ ಉಮಾಶ್ರೀ ಅವರು ರಾಜ್ಯದ ವಿವಿಧ ಭಾಗಗಳಲ್ಲಿ ಕಾಂಗ್ರೆಸ್ ಸಿದ್ಧಾಂತಗಳನ್ನು ಜನರಿಗೆ ತಲುಪಿಸುವ ಕಾರ್ಯದಲ್ಲಿ ಸಕ್ರಿಯರಾಗಿದ್ದು, ಮಹಿಳಾ ನಾಯಕತ್ವಕ್ಕೆ ಉತ್ತಮ ಮಾದರಿಯಾಗಿದ್ದಾರೆ. ನೇಕಾರ ಸಮುದಾಯ ಹಾಗೂ ಮಹಿಳಾ ಕೋಟಾದಡಿ ಅವರಿಗೆ ಸಚಿವ ಸ್ಥಾನ ನೀಡುವುದು ನ್ಯಾಯಸಮ್ಮತವಾಗಲಿದೆ ಎಂದು ಆಗ್ರಹಿಸಲಾಯಿತು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಮುಂಚೂಣಿ ಘಟಕಗಳ ಪದಾಧಿಕಾರಿಗಳು, ಗ್ಯಾರಂಟಿ ಸಮಿತಿಯ ಅಧ್ಯಕ್ಷರು, ಚುನಾಯಿತ ಪ್ರತಿನಿಧಿಗಳು, ಮಹಿಳಾ ಕಾಂಗ್ರೆಸ್, ಯೂತ್ ಕಾಂಗ್ರೆಸ್, ಅಲ್ಪಸಂಖ್ಯಾತ ಘಟಕ, ಎಸ್ಸಿ/ಎಸ್ಟಿ ಸೆಲ್, ಸಾಮಾಜಿಕ ಜಾಲತಾಣ ವಿಭಾಗದ ಪದಾಧಿಕಾರಿಗಳು ಹಾಗೂ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.
ಸಭೆಯಲ್ಲಿ ಭಾಗವಹಿಸಿದ್ದ ನಾಯಕರು, ಡಾ. ಉಮಾಶ್ರೀ ಅವರಿಗೆ ಸಚಿವ ಸ್ಥಾನ ನೀಡುವ ಕುರಿತು ಕಾಂಗ್ರೆಸ್ ಹೈಕಮಾಂಡ್ ಮತ್ತು ರಾಜ್ಯ ನಾಯಕತ್ವ ಸಕಾರಾತ್ಮಕ ನಿರ್ಧಾರ ಕೈಗೊಳ್ಳಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಅವರ ಅನುಭವ, ಜನಪರ ಸೇವೆ ಹಾಗೂ ಪಕ್ಷದ ನಿಷ್ಠೆಯನ್ನು ಪರಿಗಣಿಸಿ ಸಚಿವ ಸಂಪುಟದಲ್ಲಿ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.
ಬಾಗಲಕೋಟೆ ಜಿಲ್ಲೆ ಹಾಗೂ ತೇರದಾಳ ಕ್ಷೇತ್ರದ ರಾಜಕೀಯ ಪ್ರಾತಿನಿಧ್ಯ, ಮಹಿಳಾ ನಾಯಕತ್ವಕ್ಕೆ ಉತ್ತೇಜನ ಮತ್ತು ನೇಕಾರ ಸಮುದಾಯದ ಆಶೋತ್ತರಗಳನ್ನು ಗಮನದಲ್ಲಿಟ್ಟುಕೊಂಡು ಡಾ. ಉಮಾಶ್ರೀ ಅವರಿಗೆ ಸಚಿವ ಸ್ಥಾನ ನೀಡಬೇಕೆಂಬ ಒತ್ತಾಯಕ್ಕೆ ಬನಹಟ್ಟಿಯಲ್ಲಿ ನಡೆದ ಸಭೆ ವೇದಿಕೆಯಾಯಿತು.
ಹಿಂದೂಸ್ತಾನ್ ಸಮಾಚಾರ್ / jyothi deshpande