
ಕೊಪ್ಪಳ, 09 ಜೂನ್ (ಹಿ.ಸ.) :
ಆ್ಯಂಕರ್ : ವಿಶ್ವ ಬಾಲಕಾರ್ಮಿಕ ಹಾಗೂ ಕಿಶೋರಕಾರ್ಮಿಕ ಪದ್ಧತಿ ವಿರೋಧಿ ದಿನದ ಅಂಗವಾಗಿ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಇದೇ ಜೂ. 12 ರಂದು ಪ್ರತಿಜ್ಞಾವಿಧಿ ಬೋಧಿಸುವುದು ಕಡ್ಡಾಯವಾಗಿದೆ ಎಂದು ಜಿಲ್ಲಾಧಿಕಾರಿಗಳು ಹಾಗೂ ಕೊಪ್ಪಳ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿಯ ಅಧ್ಯಕ್ಷರಾದ ಡಾ. ಸುರೇಶ ಬಿ. ಇಟ್ನಾಳ ಅವರು ತಿಳಿಸಿದ್ದಾರೆ.
ಬಾಲಕಾರ್ಮಿಕ ಮತ್ತು ಕಿಶೋರಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆಯು 14 ವರ್ಷದ ಒಳಗಿನ ಮಕ್ಕಳು ಬಾಲಕಾರ್ಮಿಕರಾಗಿ ದುಡಿಯುವುದನ್ನು ಸಂಪೂರ್ಣವಾಗಿ ನಿಷೇಧಿಸಿರುತ್ತದೆ. ಹಾಗೆಯೇ 14 ರಿಂದ 18 ವರ್ಷದ ಮಕ್ಕಳು ಬಾಲಕಾರ್ಮಿಕರಾಗಿ ಅಪಾಯಕಾರಿ ಕ್ಷೇತ್ರದಲ್ಲಿ ದುಡಿಯುವುದನ್ನು ನಿಷೇಧಿಸಿ ಅಪಾಯಕಾರಿ ಅಲ್ಲದ ಕ್ಷೇತ್ರಗಳನ್ನು ನಿಯಂತ್ರಿಸುವಂತೆ ತಿಳಿಸುತ್ತದೆ. ದಂಡದ ಪ್ರಮಾಣವನ್ನು ಐವತ್ತು ಸಾವಿರದವರೆಗೆ ವಿಸ್ತರಿಸಲಾಗಿದೆ.
ಎಲ್ಲ ಪ್ರಕರಣಗಳಲ್ಲೂ ಪೊಲೀಸ್ ಠಾಣೆಯಲ್ಲಿ ಪ್ರಥಮ ವರ್ತಮಾನ ವರದಿಯನ್ನು ದಾಖಲಿಸಲು ಅವಕಾಶ ಕಲ್ಪಿಸಿದೆ. ಇದಕ್ಕೆ ಪೂರಕವೆಂಬಂತೆ ನಿಯಮಾವಳಿ ಮತ್ತು ಬಾಲಕಾರ್ಮಿಕ ಮತ್ತು ಕಿಶೋರಕಾರ್ಮಿಕ ಪದ್ದತಿಯನ್ನು ಪರಿಣಾಮಕಾರಿಯಾಗಿ ನಿರ್ಮೂಲನೆ ಮಾಡಲು ಕಾರ್ಯಸೂಚಿಯನ್ನು ಕೇಂದ್ರ ಕಾರ್ಮಿಕ ಸಚಿವಾಲಯ ಬಿಡುಗಡೆ ಮಾಡಿದೆ.
ರಾಜ್ಯ ಕಾರ್ಮಿಕ ಇಲಾಖೆಯು ಬಾಲ ಮತ್ತು ಕಿಶೋರಾವಸ್ಥೆ ಕಾರ್ಮಿಕ ಮುಕ್ತ ವಲಯಗಳನ್ನಾಗಿಸುವ ಕಾರ್ಯಸೂಚಿಯನ್ನು ಹೊರತಂದಿದೆ. ಇವುಗಳ ಪರಿಣಾಮಕಾರಿ ಅನುಷ್ಠಾನ ಅವಶ್ಯಕ. ಈ ನಿಟ್ಟಿನಲ್ಲಿ ಬಾಲಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆಗೊಳಿಸಲು ಶ್ರಮಿಸುತ್ತಿರುವ ಎಲ್ಲಾ ಇಲಾಖೆಗಳು ಮತ್ತು ಸ್ವಯಂ ಸೇವಾ ಸಂಸ್ಥೆಗಳ ಜವಾಬ್ದಾರಿ ಮಹತ್ವದ್ದಾಗಿದೆ. ಎಲ್ಲರೂ ಒಗ್ಗೂಡಿ ಸಹಭಾಗಿತ್ವದಿಂದ ವಿವಿಧ ಕಾರ್ಯತಂತ್ರಗಳನ್ನು ಅನುಷ್ಠಾನ ಮಾಡಿದರೆ ಮಾತ್ರ ಮಕ್ಕಳು ಬಾಲಕಾರ್ಮಿಕ ಪದ್ಧತಿಯತ್ತ ಹೋಗುವುದನ್ನು ತಡೆದು ಬಾಲಕಾರ್ಮಿಕ ಪದ್ಧತಿಯ ಸಂಪೂರ್ಣ ನಿರ್ಮೂಲನೆ ಸಾಧ್ಯ.
ಈ ನಿಟ್ಟಿನಲ್ಲಿ ಅಂತರಾಷ್ಟ್ರೀಯ ಕಾರ್ಮಿಕ ಸಂಘಟನೆ, ವಿಶ್ವಸಂಸ್ಥೆ ಹಾಗೂ ಕರ್ನಾಟಕ ಸರ್ಕಾರದ ಕಾರ್ಮಿಕ ಇಲಾಖೆ ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ಪದ್ಧತಿಯನ್ನು ತೊಡೆದು ಹಾಕುವುದರೊಂದಿಗೆ ಕರ್ನಾಟಕವನ್ನು ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕರ ಪದ್ಧತಿ ಮುಕ್ತ ಕರ್ನಾಟಕವನ್ನಾಗಿಸಲು ಶ್ರಮಿಸುತ್ತಿದೆ. ಹಾಗಾಗಿ ಈ ವರ್ಷ “ಬಾಲ ಕಾರ್ಮಿಕ ಪದ್ಧತಿಗೆ ಕೆಂಪು ಚೀಟಿ: ಮಕ್ಕಳಿಗೆ ನ್ಯಾಯಯುತ ಆಟ, ವಯಸ್ಕರಿಗೆ ಯೋಗ್ಯ ಕೆಲಸ” (Red card to child labour: Fair play for children, decent work for adults) ಎಂಬ ಧ್ಯೇಯ ವಾಕ್ಯದೊಂದಿಗೆ ಹಾಗೂ ವಿಶ್ವಸಂಸ್ಥೆಯ ಮಾರ್ಗಸೂಚಿಯಂತೆ ಈ ಪದ್ಧತಿಯನ್ನು ಕೊನೆಗಾಣಿಸಲು ಸಮಾರೋಪಾದಿಯಲ್ಲಿ ಕ್ರಮ ಜರುಗಿಸುವುದು ಅತ್ಯಂತ ಅಗತ್ಯ.
ಕೊಪ್ಪಳ ಜಿಲ್ಲೆಯಲ್ಲಿ ಈ ಆಂದೋಲನದಲ್ಲಿ ಎಲ್ಲಾ ಇಲಾಖೆಗಳ ಅಧಿಕಾರಿಗಳು ಸಕ್ರಿಯವಾಗಿ ಪಾಲ್ಗೊಳ್ಳಬೇಕಾಗಿದ್ದು, ಇದೇ ಜೂನ್ 12 ರಂದು ನಾವೆಲ್ಲರೂ ವಿಶ್ವ ಬಾಲ ಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ಪದ್ಧತಿ ವಿರೋಧಿ ದಿನವನ್ನು ಜಿಲ್ಲಾ ಮಟ್ಟದಿಂದ ಪ್ರತಿಯೊಂದು ಗ್ರಾಮ ಮಟ್ಟದಲ್ಲಿ ಹಮ್ಮಿಕೊಳ್ಳುವ ಮೂಲಕ ಬಾಲಕಾರ್ಮಿಕ ಹಾಗೂ ಕಿಶೋರಕಾರ್ಮಿಕ ಪದ್ಧತಿಯ ನಿರ್ಮೂಲನೆಗೆ ಕೈಜೋಡಿಸಬೇಕೆಂದು ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್