ಅಪರೂಪದ ‘ಅರಸು ಬೇವು’ ಮರ ಪತ್ತೆ ; ಸಂಶೋಧನೆಗೆ ಆಗ್ರಹ
ಗದಗ, 09 ಜೂನ್ (ಹಿ.ಸ.) : ಆ್ಯಂಕರ್ : ಹಿಂದಿನ ಕಾಲದಲ್ಲಿ ರಾಜಮನೆತನದವರು ಶಕ್ತಿ ದೇವತೆ ನವದುರ್ಗೆಯ ಪ್ರತೀಕವಾಗಿ ಪೂಜಿಸುತ್ತಿದ್ದ ಅಪರೂಪದ ‘ಅರಸು ಬೇವು’ ಮರ ರೋಣ ಪಟ್ಟಣದ ಜಗಳೂರು ರಸ್ತೆಯಲ್ಲಿ ಪತ್ತೆಯಾಗಿದ್ದು, ಪರಿಸರ ಪ್ರೇಮಿಗಳು, ಸಂಶೋಧಕರು ಹಾಗೂ ಸ್ಥಳೀಯರ ಗಮನ ಸೆಳೆಯುತ್ತಿದೆ. ಈ ವಿಶಿಷ್ಟ ಮರವು
ಫೋಟೋ


ಗದಗ, 09 ಜೂನ್ (ಹಿ.ಸ.) :

ಆ್ಯಂಕರ್ : ಹಿಂದಿನ ಕಾಲದಲ್ಲಿ ರಾಜಮನೆತನದವರು ಶಕ್ತಿ ದೇವತೆ ನವದುರ್ಗೆಯ ಪ್ರತೀಕವಾಗಿ ಪೂಜಿಸುತ್ತಿದ್ದ ಅಪರೂಪದ ‘ಅರಸು ಬೇವು’ ಮರ ರೋಣ ಪಟ್ಟಣದ ಜಗಳೂರು ರಸ್ತೆಯಲ್ಲಿ ಪತ್ತೆಯಾಗಿದ್ದು, ಪರಿಸರ ಪ್ರೇಮಿಗಳು, ಸಂಶೋಧಕರು ಹಾಗೂ ಸ್ಥಳೀಯರ ಗಮನ ಸೆಳೆಯುತ್ತಿದೆ. ಈ ವಿಶಿಷ್ಟ ಮರವು ಪಟ್ಟಣದ ಐತಿಹಾಸಿಕ ಹಿನ್ನೆಲೆಯನ್ನು ನೆನಪಿಸುವುದರ ಜೊತೆಗೆ ಜೀವ ವೈವಿಧ್ಯದ ಮಹತ್ವವನ್ನೂ ಸಾರುತ್ತಿದೆ.

ಬರಗಾಲದ ಸಂದರ್ಭದಲ್ಲಿಯೂ ನೀರು ನೀಡುವ ಸಾಮರ್ಥ್ಯದಿಂದ “ಭತ್ತದ ಬಾವಿ” ಎಂದು ಪ್ರಸಿದ್ಧಿ ಪಡೆದಿರುವ ಜಗಳೂರು ರಸ್ತೆಯ ಪತ್ತಾರ ಬಾವಿಯ ಸಮೀಪದಲ್ಲಿಯೇ ಈ ಅಪರೂಪದ ಅರಸು ಬೇವು ಮರ ಪತ್ತೆಯಾಗಿರುವುದು ವಿಶೇಷವಾಗಿದೆ.

ಹಲವು ವರ್ಷಗಳಿಂದ ಈ ಮರ ಅಸ್ತಿತ್ವದಲ್ಲಿದ್ದರೂ ಅದರ ವೈಶಿಷ್ಟ್ಯಗಳ ಬಗ್ಗೆ ಹೆಚ್ಚಿನ ಮಾಹಿತಿ ಇರಲಿಲ್ಲ. ಇತ್ತೀಚೆಗೆ ಪರಿಸರ ತಜ್ಞರು ಮತ್ತು ರೈತರು ಇದರ ಬಗ್ಗೆ ಅಧ್ಯಯನ ನಡೆಸಿದ ನಂತರ ಇದರ ಅಪರೂಪದ ಗುಣಲಕ್ಷಣಗಳು ಬೆಳಕಿಗೆ ಬಂದಿವೆ.

ಪರಿಸರ ತಜ್ಞ ಮಂಜುನಾಥ ನಾಯಕ ಅವರು ಮಾತನಾಡಿ, “ಈ ಅರಸು ಬೇವು ಮರದ ಎಲೆಗಳು ದಕ್ಷಿಣ ಆಫ್ರಿಕಾದಲ್ಲಿ ಕಂಡುಬರುವ ‘ಲೆಮೆಟಿಯಾ ಪರ್ಗುನ್ಯೂ’ ಎಂಬ ಜಾತಿಯ ಮರದ ಎಲೆಗಳನ್ನು ಹೋಲುತ್ತವೆ.

ಭಾರತದಲ್ಲಿ ಈ ರೀತಿಯ ಮರಗಳು ಅತ್ಯಂತ ವಿರಳವಾಗಿದ್ದು, ಇಂಡೋ ವಲಯ ಪ್ರದೇಶ ಹಾಗೂ ಆಫ್ರಿಕಾದ ಉಷ್ಣವಲಯ ಪ್ರದೇಶಗಳಲ್ಲಿ ಮಾತ್ರ ಕಂಡು ಬರುತ್ತವೆ. ಈ ಮರವು ಸಾಮಾನ್ಯ ಮರಗಳಿಗಿಂತ ಹೆಚ್ಚು ಆಮ್ಲಜನಕವನ್ನು ವಾತಾವರಣಕ್ಕೆ ಬಿಡುಗಡೆ ಮಾಡುವ ಸಾಮರ್ಥ್ಯ ಹೊಂದಿದೆ. ಆದ್ದರಿಂದ ಇದರ ಕುರಿತು ವೈಜ್ಞಾನಿಕ ಅಧ್ಯಯನ ಮತ್ತು ಸಂಶೋಧನೆ ನಡೆಯಬೇಕಾಗಿದೆ” ಎಂದು ಅಭಿಪ್ರಾಯಪಟ್ಟರು.

ಅರಸು ಬೇವು ಮರವು ಕೇವಲ ಪರಿಸರದ ದೃಷ್ಟಿಯಿಂದ ಮಾತ್ರವಲ್ಲ, ಔಷಧೀಯ ಗುಣಗಳಿಂದಲೂ ಮಹತ್ವ ಪಡೆದಿದೆ. ಆಯುರ್ವೇದ ಪದ್ಧತಿಯಲ್ಲಿ ಬೇವು ಮರದ ಎಲೆ, ತೊಗಟೆ, ಹಣ್ಣು, ಬೀಜ ಹಾಗೂ ಬೇರುಗಳನ್ನು ವಿವಿಧ ಚಿಕಿತ್ಸಾ ವಿಧಾನಗಳಲ್ಲಿ ಬಳಸಲಾಗುತ್ತದೆ. ಚರ್ಮರೋಗ, ಸೋಂಕು, ಜ್ವರ ಸೇರಿದಂತೆ ಅನೇಕ ಕಾಯಿಲೆಗಳಿಗೆ ಬೇವು ಪರಿಣಾಮಕಾರಿ ಔಷಧಿಯಾಗಿದೆ ಎಂದು ತಜ್ಞರು ಹೇಳುತ್ತಾರೆ.

ಪ್ರಗತಿಪರ ರೈತ ಮಲ್ಲಯ್ಯ ಅವರು ಮಾತನಾಡಿ, “ಬೇವು ಮರವು ಅನೇಕ ಅದ್ಭುತ ಔಷಧೀಯ ಗುಣಗಳನ್ನು ಹೊಂದಿದೆ. ಅದರ ಪ್ರತಿಯೊಂದು ಭಾಗವೂ ಮಾನವನ ಆರೋಗ್ಯಕ್ಕೆ ಉಪಯುಕ್ತವಾಗಿದೆ. ವಿಶೇಷವಾಗಿ ಅರಸು ಬೇವು ಮರದ ಗುಣಗಳು ಇನ್ನಷ್ಟು ವಿಶಿಷ್ಟವಾಗಿದ್ದು, ಅಳಿವಿನ ಅಂಚಿನಲ್ಲಿರುವ ಈ ಜಾತಿಯನ್ನು ಸಂರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಸರ್ಕಾರ ಹಾಗೂ ಅರಣ್ಯ ಇಲಾಖೆ ಈ ಮರಗಳ ಸಂರಕ್ಷಣೆಗೆ ವಿಶೇಷ ಯೋಜನೆ ರೂಪಿಸಬೇಕು” ಎಂದು ಆಗ್ರಹಿಸಿದರು.

ಸ್ಥಳೀಯ ಪರಿಸರಾಸಕ್ತರು ಹಾಗೂ ನಾಗರಿಕರು ಈ ಅಪರೂಪದ ಮರವನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಉಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಅಲ್ಲದೆ, ಈ ಮರದ ಕುರಿತು ಸಮಗ್ರ ಅಧ್ಯಯನ ನಡೆಸಿ ಅದರ ವೈಜ್ಞಾನಿಕ, ಔಷಧೀಯ ಹಾಗೂ ಪರಿಸರ ಮಹತ್ವವನ್ನು ದಾಖಲಿಸಬೇಕೆಂದು ಸಂಬಂಧಪಟ್ಟ ಇಲಾಖೆಗೆ ಮನವಿ ಮಾಡಿದ್ದಾರೆ.

ರೋಣ ಪಟ್ಟಣದಲ್ಲಿ ಪತ್ತೆಯಾದ ಈ ಅಪರೂಪದ ಅರಸು ಬೇವು ಮರವು ಜೀವ ವೈವಿಧ್ಯದ ಶ್ರೀಮಂತಿಕೆಯನ್ನು ಪ್ರತಿಬಿಂಬಿಸುವುದರ ಜೊತೆಗೆ ಪರಿಸರ ಸಂರಕ್ಷಣೆಯ ಅಗತ್ಯತೆಯನ್ನೂ ಮತ್ತೊಮ್ಮೆ ನೆನಪಿಸಿದೆ. ಸಂಶೋಧಕರು ಹಾಗೂ ಪರಿಸರ ತಜ್ಞರ ಗಮನ ಸೆಳೆದಿರುವ ಈ ಮರ ಮುಂದಿನ ದಿನಗಳಲ್ಲಿ ವೈಜ್ಞಾನಿಕ ಅಧ್ಯಯನದ ಪ್ರಮುಖ ವಿಷಯವಾಗುವ ನಿರೀಕ್ಷೆ ಮೂಡಿಸಿದೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande