
ವಿಜಯಪುರ, 09 ಜೂನ್ (ಹಿ.ಸ.) :
ಆಂಕರ್ : ಪರಿಸರ ಸಂರಕ್ಷಣೆ ಮತ್ತು ಹಸಿರೀಕರಣದ ಮಹತ್ವವನ್ನು ಜನಸಾಮಾನ್ಯರಲ್ಲಿ ಬಿತ್ತುವ ಉದ್ದೇಶದಿಂದ 2016ರಲ್ಲಿ ಆರಂಭಗೊಂಡಿದ್ದ ಕೋಟಿವೃಕ್ಷ ಅಭಿಯಾನ ಇಂದು ಅನೇಕ ಯುವಕರಿಗೆ ಸ್ಪೂರ್ತಿಯ ಮೂಲವಾಗಿ ಪರಿಣಮಿಸಿದೆ.
ಅದರ ಜೀವಂತ ಉದಾಹರಣೆಯಾಗಿ ವಿಜಯಪುರ ನಗರದ ವಾರ್ಡ್ ನಂ. 2ರ ಲಿಂಗೇಶ್ವರ ಸ್ವಾಮಿ ಬಡಾವಣೆಯ ಯುವಕರು ಕೈಗೊಂಡಿರುವ ಹಸಿರು ಸೇವೆ ಎಲ್ಲರ ಗಮನ ಸೆಳೆದಿದೆ.
ಲಿಂಗೇಶ್ವರ ಸ್ವಾಮಿ ಬಡಾವಣೆಯ ನಿವಾಸಿ ಸಂತೋಷ್ ಕವಟೆಕರ್ ಅವರ ನೇತೃತ್ವದಲ್ಲಿ ಉದ್ಯಾನವನಕ್ಕಾಗಿ ಮೀಸಲಿರಿಸಲಾಗಿದ್ದ ಖಾಲಿ ಜಾಗದಲ್ಲಿ ಸುಮಾರು 300 ಗಿಡಗಳನ್ನು ನೆಟ್ಟು, ಅವುಗಳ ಸಂರಕ್ಷಣೆ ಮತ್ತು ಪೋಷಣೆಯ ಜವಾಬ್ದಾರಿಯನ್ನು ಯುವಕರೇ ಹೊತ್ತುಕೊಂಡಿದ್ದರು. ಪ್ರತಿದಿನ ನೀರೆರೆದು, ಬೇಲಿ ನಿರ್ಮಿಸಿ, ಗಿಡಗಳ ಆರೈಕೆ ಮಾಡುತ್ತಾ ಬಂದ ಪರಿಣಾಮ ಇಂದು ಆ ಪ್ರದೇಶ ಹಚ್ಚಹಸಿರಿನಿಂದ ಕಂಗೊಳಿಸುತ್ತಿದ್ದು, ಸಣ್ಣ ಉದ್ಯಾನವನದ ರೂಪ ಪಡೆದುಕೊಂಡಿದೆ.
ಈ ಹಸಿರು ಸಾಧನೆಯ ಹಿಂದೆ ಯುವಕರ ನಿರಂತರ ಪರಿಶ್ರಮ ಮತ್ತು ಪರಿಸರದ ಮೇಲಿನ ಕಾಳಜಿ ಅಡಗಿದೆ. ಆರಂಭದಲ್ಲಿ ನಿರ್ಲಕ್ಷ್ಯಗೊಂಡಿದ್ದ ಜಾಗವನ್ನು ಹಸಿರು ವನವಾಗಿ ರೂಪಾಂತರಿಸಿದ ಯುವಕರ ಕಾರ್ಯ ಸ್ಥಳೀಯ ನಿವಾಸಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಪರಿಸರ ಸಂರಕ್ಷಣೆಯೊಂದಿಗೆ ಸಮಾಜಮುಖಿ ಕಾರ್ಯಗಳಲ್ಲಿ ಯುವಕರು ಹೇಗೆ ಸಕ್ರಿಯವಾಗಿ ತೊಡಗಿಸಿಕೊಳ್ಳಬಹುದು ಎಂಬುದಕ್ಕೆ ಈ ಕಾರ್ಯ ಮಾದರಿಯಾಗಿದೆ.
ಕೊರೊನಾ ಸಂಕಷ್ಟದ ಅವಧಿಯಲ್ಲಿ ಪೂಜ್ಯ ಶ್ರೀ ಸಿದ್ದೇಶ್ವರ ಮಹಾಸ್ವಾಮೀಜಿಯವರು ಈ ಸ್ಥಳಕ್ಕೆ ಭೇಟಿ ನೀಡಿ ಯುವಕರ ಕಾರ್ಯವನ್ನು ವೀಕ್ಷಿಸಿ ಸಂತಸ ವ್ಯಕ್ತಪಡಿಸಿದ್ದಲ್ಲದೆ, ಅವರ ಸೇವಾಭಾವವನ್ನು ಶ್ಲಾಘಿಸಿ ಆಶೀರ್ವದಿಸಿದ್ದರು.
ಈ ಘಟನೆಯನ್ನು ಯುವಕರು ಇತ್ತೀಚೆಗೆ ನಡೆದ ಭೇಟಿಯ ಸಂದರ್ಭದಲ್ಲಿ ಸ್ಮರಿಸಿಕೊಂಡು, ತಮ್ಮ ಕಾರ್ಯಕ್ಕೆ ದೊರೆತ ಪ್ರೋತ್ಸಾಹವನ್ನು ಗೌರವದಿಂದ ನೆನಪಿಸಿಕೊಂಡರು. ಈ ಹಸಿರು ಅಭಿಯಾನದಲ್ಲಿ ಬಿ.ಎಸ್. ಶೆಟ್ಟಿ, ಮಲ್ಲು ನಾಲವಾರ್, ಅಜಿತ್ ಉಪಾಧ್ಯಾಯ, ಎಂ.ಎಸ್. ಗೊಂಬಿ, ಪ್ರವೀಣ್ ಕೇಶಿ, ಸಂತೋಷ್ ಅಕೋಡೆ, ಮಹಾವೀರ ಬೋಗಾರ್, ಶಿವಾನಂದ ಬೆಟಗೇರಿ ಸೇರಿದಂತೆ ಹಲವರು ತಮ್ಮ ಅಮೂಲ್ಯ ಕರಸೇವೆಯನ್ನು ಸಲ್ಲಿಸಿದ್ದು, ಮರಗಳ ಪೋಷಣೆ ಮತ್ತು ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಯುವಕರು ತಿಳಿಸಿದರು.
ಪರಿಸರ ಹಾನಿ, ಹವಾಮಾನ ಬದಲಾವಣೆ ಮತ್ತು ತಾಪಮಾನ ಏರಿಕೆಯಂತಹ ಸವಾಲುಗಳು ಹೆಚ್ಚುತ್ತಿರುವ ಇಂದಿನ ಸಂದರ್ಭದಲ್ಲಿ ಇಂತಹ ಹಸಿರು ಸೇವೆಗಳು ಅತ್ಯಂತ ಮಹತ್ವ ಪಡೆದುಕೊಂಡಿವೆ. ಒಂದು ಗಿಡವನ್ನು ನೆಡುವುದಕ್ಕಿಂತ ಅದನ್ನು ಮರವಾಗಿ ಬೆಳೆಸುವುದು ದೊಡ್ಡ ಸಾಧನೆಯಾಗಿದ್ದು, ಲಿಂಗೇಶ್ವರ ಸ್ವಾಮಿ ಬಡಾವಣೆಯ ಯುವಕರು ಅದನ್ನು ಕಾರ್ಯರೂಪಕ್ಕೆ ತಂದು ತೋರಿಸಿದ್ದಾರೆ.
ಸ್ಥಳೀಯರು ಮತ್ತು ಪರಿಸರ ಪ್ರೇಮಿಗಳು ಯುವಕರ ಈ ಕಾರ್ಯವನ್ನು ಶ್ಲಾಘಿಸಿದ್ದು, ಇಂತಹ ಪ್ರಯತ್ನಗಳು ಮುಂದಿನ ಪೀಳಿಗೆಗೆ ಪರಿಸರ ಜಾಗೃತಿಯ ಸಂದೇಶ ಸಾರುವುದರೊಂದಿಗೆ ಸಮಾಜದ ಪಾಲಿನ ಜವಾಬ್ದಾರಿಯನ್ನು ಸಾರ್ಥಕಗೊಳಿಸುತ್ತವೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / jyothi deshpande