
ಕೋಲಾರ, ಜೂ.೦೯ (ಹಿ.ಸ) :
ಆ್ಯಂಕರ್ : ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಸಾರ್ವಜನಿಕರಿಗೆ ಯಾವುದೇ ರೀತಿಯ ಕುಡಿಯುವ ನೀರಿನ ತೊಂದರೆ ಉಂಟಾಗದ0ತೆ ನಿಗಾ ವಹಿಸಬೇಕು. ಹಾಗೇಯೇ ಜಾನುವಾರುಗಳ ಕುಡಿಯುವ ನೀರು ಮತ್ತು ಮೇವಿನ ಸಮಸ್ಯೆಗೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಕೊತ್ತೂರು ಜಿ. ಮಂಜುನಾಥ್ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಟಾಸ್ಕ್ ಫೋರ್ಸ್ (ಕಾರ್ಯಪಡೆ) ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಟಾಸ್ಕ್ ಫೋರ್ಸ್ ಕಮಿಟಿ ಎಂದರೆ ಆಟಾಟಿಕೆ ಅಥವಾ ಬೂಟಾಟಿಕೆಯಲ್ಲ. ಜನರಿಗೆ ಕುಡಿಯುವ ನೀರು ಸೇರಿದಂತೆ ಮೂಲಭೂತ ಸಮಸ್ಯೆಗಳನ್ನು ಬಗೆಹರಿಸುವುದೇ ಈ ಸಮಿತಿಯ ಮುಖ್ಯ ಉದ್ದೇಶ. ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ಮೇಲೆ ಏಕೆ ಶಿಸ್ತು ಕ್ರಮ ಜರುಗಿಸಬಾರದು ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ವಿರುದ್ದ ರೆಸಲ್ಯೂಷನ್ (ಠರಾವು) ಪಾಸ್ ಮಾಡುವಂತೆ ತಹಶಿಲ್ದಾರ್ ಅವರಿಗೆ ನಿರ್ದೇಶನ ನೀಡಿದರು.
ಜಾನುವಾರುಗಳಿಗೆ ಉಂಟಾಗುತ್ತಿರುವ ಸಮಸ್ಯೆಗಳಿಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾತ್ರ ಉತ್ತರಿಸುವಂತೆ ಪಶುಸಂಗೋಪನಾ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ ಅವರು, ಗ್ರಾಮೀಣ ಭಾಗದಲ್ಲಿ ಎಲ್ಲೂ ಮೇವಿನ ಕೊರತೆ ಉಂಟಾಗಬಾರದು. ಒಂದು ವೇಳೆ ಸಮಸ್ಯೆ ಕಂಡುಬ0ದಲ್ಲಿ ಸಂಬ0ಧಪಟ್ಟ ರಾಜಸ್ವ ನಿರೀಕ್ಷಕರನ್ನೇ (ಆರ್.ಐ) ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಸಿದರು.
ನಮ್ಮ ಜಿಲ್ಲೆಯ ರೈತರು ಕೊಂಡೊಯ್ಯುವ ಗೊಬ್ಬರವನ್ನು ಆಂಧ್ರ ಪ್ರದೇಶದ ಗಡಿ ಭಾಗದಲ್ಲಿ ಅಲ್ಲಿನ ಅಧಿಕಾರಿಗಳು ವಶಪಡಿಸಿಕೊಳ್ಳುತ್ತಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿವೆ. ಈ ಸಮಸ್ಯೆಗೆ ಬ್ರೇಕ್ ಹಾಕಲು ಈ ಬಾರಿ ಹೋಬಳಿ ಮಟ್ಟದಲ್ಲೇ ಗೊಬ್ಬರವನ್ನು ವಿತರಿಸಲು ಅಗತ್ಯ ಕ್ರಮ ವಹಿಸಲಾಗುವುದು ಎಂದು ಶಾಸಕರು ಭರವಸೆ ನೀಡಿದರು.
ನೀರಿನ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ನೀರಿನ ಸಮಸ್ಯೆ ಎದುರಾದಾಗ ಕೋಲಾರ ಜಿಲ್ಲೆಗೆ ಮಾತ್ರ ಪ್ರತ್ಯೇಕ ಆದೇಶವಿದ್ದು, ಅನುದಾನದ ಕೊರತೆ ಇಲ್ಲ. ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ಮಾಡಬೇಕು, ಹಣವನ್ನು ಸರ್ಕಾರದಿಂದ ಬಿಡುಗಡೆ ಮಾಡಿಸಲಾಗುವುದು. ಗ್ರಾಮೀಣ ಭಾಗದಲ್ಲಿ ಬೋರ್ವೆಲ್ ಕೆಟ್ಟು ನಿಂತರೆ ಅಥವಾ ಟ್ರಾನ್ಸ್ಫಾರ್ಮರ್ (ಟಿಸಿ) ಸಮಸ್ಯೆ ಎದುರಾದಾಗ ಪಿಡಿಓಗಳು ಕೂಡಲೇ ಕೆಇಬಿ ಅಧಿಕಾರಿಗಳ ಗಮನಕ್ಕೆ ತರಬೇಕು. ಜೊತೆಗೆ ಇಓ, ತಹಶೀಲ್ದಾರ್ ಅಥವಾ ನನ್ನ ಗಮನಕ್ಕೆ ತರಬೇಕು ಎಂದು ತಿಳಿಸಿದರು.
ಇದೇ ವೇಳೆ ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಹರಿಕೃಷ್ಣ ಅವರಿಗೆ ಸಭೆಯಿಂದಲೇ ದೂರವಾಣಿ ಕರೆ ಮಾಡಿದ ಶಾಸಕರು, ನರಸಾಪುರ ಗ್ರಾಮದ ಸರ್ಕಾರಿ ಆಸ್ಪತ್ರೆ ಹಾಗೂ ನಾಡಕಚೇರಿಗೆ ಕೂಡಲೇ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಿದರು.
ಕೋಲಾರ ತಾಲ್ಲೂಕಿನ ದೊಡ್ಡ ದೊಡ್ಡ ಗ್ರಾಮಗಳಲ್ಲಿ ಈಗಾಗಲೇ ಎರಡರಂತೆ ಶುದ್ಧ ನೀರಿನ ಘಟಕಗಳಿದ್ದು ಸದ್ಯಕ್ಕೆ ಎಲ್ಲೂ ಕುಡಿಯುವ ನೀರಿನ ಘಟಕಗಳ ಸಮಸ್ಯೆ ಇಲ್ಲ. ಮುಂದಿನ ದಿನಗಳಲ್ಲಿ ರಾಜಕಲ್ಲಹಳ್ಳಿ ಹಾಗೂ ಮಾರ್ಜೇನಹಳ್ಳಿ ಗ್ರಾಮಗಳಲ್ಲಿ ಹೊಸದಾಗಿ ತಲಾ ಒಂದು ಶುದ್ಧ ನೀರಿನ ಘಟಕ ಸ್ಥಾಪಿಸಲಾಗುವುದು. ಬೆತ್ತನಿ ಗ್ರಾಮದಲ್ಲಿ ನಡೆಯುತ್ತಿರುವ ಘಟಕದ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲಾಗುವುದು. ಘಟಕಗಳು ಕೆಟ್ಟುಹೋದಾಗ ಸಕಾಲಕ್ಕೆ ಸರ್ವೀಸಿಂಗ್ ಮಾಡಿಸಬೇಕು ಎಂದು ಪಿಡಿಓಗಳಿಗೆ ಸೂಚಿಸಿದರು.
ಸೂಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಸ ವಿಲೇವಾರಿಗೆ ಜಾಗದ ಸಮಸ್ಯೆ ಇರುವ ಕುರಿತು ಪಿಡಿಓ ಸಭ ಗಮನಕ್ಕೆ ತಂದರು. ಈ ವೇಳೆ ಸೂಲೂರು ಭಾಗದ ಅರಣ್ಯ ಭೂಮಿ ಸಮಸ್ಯೆಯನ್ನು ಬಗೆಹರಿಸಿ ಪಂಚಾಯಿತಿಗೆ ನೀಡುವಂತೆ ತಹಶೀಲ್ದಾರ್ಗೆ ಸೂಚಿಸಿದ ಶಾಸಕರು, ಅಲ್ಲಿಯವರೆಗೆ ನಗರದ ಕಸ ವಿಲೇವಾರಿ ಘಟಕದಲ್ಲೇ ಒಣ ಮತ್ತು ಹಸಿ ಕಸ ವಿಂಗಡಿಸಿ ವಿಲೇವಾರಿ ಮಾಡಲು ಅವಕಾಶ ಕಲ್ಪಿಸುವಂತೆ ಪೌರಾಯುಕ್ತರಿಗೆ ತಾಕೀತು ಮಾಡಿದರು. ಇನ್ನು ಯರಗೋಳ್ ಯೋಜನೆಗೆ ಸಂಬ0ಧಿಸಿದ0ತೆ ನ್ಯಾಯಾಲಯದಲ್ಲಿದ್ದ ತಡೆಯಾಜ್ಞೆ ತೆರವುಗೊಂಡಿದ್ದು (ಡಿಸ್ಮಿಸ್ ಆಗಿದ್ದು), ಕೂಡಲೇ ವಾಟರ್ ಬೋರ್ಡ್ ಅಧಿಕಾರಿಗಳು ಕಾಮಗಾರಿ ಆರಂಭಿಸಿ ಎಲ್ಲಾ ಕಡೆ ನೀರು ಒದಗಿಸಬೇಕು ಎಂದರು.
ಸಭೆಯಲ್ಲಿ ಮಾತನಾಡಿದ ತಹಶೀಲ್ದಾರ್ ಹೆಚ್. ಶ್ರೀನಿವಾಸ್, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪಿಡಿಓಗಳೇ ಸುಪ್ರೀಂ ಇದ್ದಂತೆ. ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸಲು ಕೋಲಾರ ತಾಲ್ಲೂಕು ಕಛೇರಿಯಲ್ಲಿ ದೂರುಗಳ ಸ್ವೀಕಾರಕ್ಕೆ ೨೪X೭ ಕಾರ್ಯನಿರ್ವಹಿಸುವ ೦೮೧೫೨೨೨೨೦೦೭ ಮತ್ತು ೦೮೧೫೨೨೨೨೦೫೬ ಹೆಲ್ಪ್ಲೈನ್ ವ್ಯವಸ್ಥೆ ಮಾಡಲಾಗಿದೆ. ದಾರಿ ಹಾಗೂ ಸ್ಮಶಾನದ ಜಾಗ ಮತ್ತು ಸರ್ಕಾರಿ ಜಮೀನು ಸಂಬ0ಧಿಸಿದ ಸಮಸ್ಯೆಗಳಿದ್ದರೆ ನೇರವಾಗಿ ನನ್ನ ಬಳಿ ಬನ್ನಿ, ಬಗೆಹರಿಸೋಣ. ಸರ್ಕಾರಿ ಜಮೀನನ್ನು ಸಂರಕ್ಷಿಸುವುದು ನಮ್ಮ ಮೊದಲ ಆದ್ಯತೆಯಾಗಿದೆ. ಕರ್ತವ್ಯದಲ್ಲಿ ಲೋಪವೆಸಗಿದರೆ ಅಧಿಕಾರಿಗಳೇ ಹೊಣೆಗಾರರಾಗುತ್ತಾರೆ ಎಂದು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು.
ಟಾಸ್ಕ್ ಪೋರ್ಸ್ ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಇಓ ಮಂಜುನಾಥ್, ನಗರಸಭೆ ಪೌರಾಯುಕ್ತ ವೆಂಕಟೇಶ್ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಪಂಚಾಯತ್ ರಾಜ್ ಇಲಾಖೆಯ ಜಬೀವುಲ್ಲಾ, ವೇಮಗಲ್ ಕುರಗಲ್ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ವೆಂಕಟೇಶ್ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಪಿಡಿಒ ಗಳು ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್