
ಗದಗ, 09 ಜೂನ್ (ಹಿ.ಸ.) :
ಆ್ಯಂಕರ್ : ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಗುಂಜಳ ರಸ್ತೆಯಲ್ಲಿರುವ ಐತಿಹಾಸಿಕ ಸಾಲಾವಳಿ ಬಸವೇಶ್ವರ ದೇವಸ್ಥಾನದಲ್ಲಿ ಲೋಕಕಲ್ಯಾಣಾರ್ಥವಾಗಿ ಮೂರು ದಿನಗಳ ಕಾಲ ಹಮ್ಮಿಕೊಳ್ಳಲಾಗಿದ್ದ ಇಷ್ಟಲಿಂಗ ಮಹಾಪೂಜೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಭಕ್ತಿಭಾವ, ಶ್ರದ್ಧೆ ಮತ್ತು ಸಂಭ್ರಮದ ವಾತಾವರಣದಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡವು. ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು.
ಕರೆವಾಡಿಮಠದ ನಿಯೋಜಿತ ಉತ್ತರಾದಿಕಾರಿ ಡಾ. ಮಂಜುನಾಥಯ್ಯ ದೇವರು ಅವರ ನೇತೃತ್ವದಲ್ಲಿ ಹಳ್ಳದಕೇರಿಯಿಂದ ಗುಂಜಳ ರಸ್ತೆಯಲ್ಲಿರುವ ಸಾಲಾವಳಿ ಬಸವೇಶ್ವರ ದೇವಸ್ಥಾನದಲ್ಲಿ ಈ ಮಹತ್ವದ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮೂರು ದಿನಗಳ ಕಾಲ ನಿರಂತರವಾಗಿ ನಡೆದ ಪೂಜೆ, ಹೋಮ, ಜಪ, ಭಜನೆ ಹಾಗೂ ಧಾರ್ಮಿಕ ವಿಧಿವಿಧಾನಗಳು ಭಕ್ತರಲ್ಲಿ ಆಧ್ಯಾತ್ಮಿಕ ಚೈತನ್ಯ ಮೂಡಿಸಿದವು.
ಕಾರ್ಯಕ್ರಮದ ಸಮಾರೋಪ ಸಮಾರಂಭದ ವೇಳೆ ಸುರಿದ ಮಳೆಯು ವಿಶೇಷ ಗಮನ ಸೆಳೆಯಿತು.
ಧಾರಾಕಾರವಾಗಿ ಸುರಿದ ಮಳೆಯನ್ನು ಭಕ್ತರು ಶುಭಸೂಚಕವೆಂದು ಪರಿಗಣಿಸಿ, ಇಷ್ಟಲಿಂಗ ಮಹಾಪೂಜೆಯ ಫಲವಾಗಿ ವರುಣನ ಕೃಪೆ ದೊರೆತಿದೆ ಎಂದು ಭಾವಿಸಿದರು. ಮಳೆಯ ನಡುವೆಯೇ ಆಶೀರ್ವಚನ ನೀಡಿದ ಹೂವಿನಶಿಗ್ಲಿ ವೀರಕ್ತಮಠದ ಚನ್ನವೀರ ಮಹಾಸ್ವಾಮಿಗಳು ಮಾತನಾಡಿ, ಧರ್ಮಜಾಗೃತಿ ಹಾಗೂ ಲೋಕಕಲ್ಯಾಣಕ್ಕಾಗಿ ನಡೆಸಿದ ಈ ಮಹಾಪೂಜೆಯ ಫಲವಾಗಿ ಪ್ರಕೃತಿ ಪ್ರಸನ್ನಗೊಂಡಿದ್ದು, ರೈತರ ಬದುಕಿನಲ್ಲಿ ಸಮೃದ್ಧಿ ನೆಲೆಸಲಿ ಎಂದು ಹಾರೈಸಿದರು.
“ವರುಣನ ಕೃಪೆಯಿಂದ ರೈತರ ಹೊಲಗಳಲ್ಲಿ ಉತ್ತಮ ಫಸಲು ಬೆಳೆಯಲಿ. ರೈತರು ಬೆಳೆದ ಬೆಳೆಗಳಿಗೆ ಯೋಗ್ಯ ಬೆಲೆ ದೊರೆಯಲಿ. ನೇಗಿಲ ಯೋಗಿಯ ಪ್ರಾರ್ಥನೆ ಭಗವಂತನಿಗೆ ತಲುಪಿದ್ದು, ನಾಡಿನ ರೈತರ ಮೇಲೆ ದೇವರ ಕೃಪೆ ಸದಾ ಇರಲಿ” ಎಂದು ಅವರು ಆಶೀರ್ವಚನ ನೀಡಿದರು.
ಕಾರ್ಯಕ್ರಮದಲ್ಲಿ ಕೂಡ್ಲಿಗಿ ಆಲೂರಿನ ಹಿರೇಮಠ ಸಂಸ್ಥಾನದ ಮರುಳಸಿದ್ದ ಶಂಕರ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಸದ್ಗುರು ಸಿದ್ದಲಿಂಗ ಶಿವಯೋಗಿಗಳು ಸಹ ಭಾಗವಹಿಸಿ ಆಶೀರ್ವಚನ ನೀಡಿದರು.
ಲೋಕಕಲ್ಯಾಣಕ್ಕಾಗಿ ನಡೆದ ಈ ಮಹಾಪೂಜೆಯಲ್ಲಿ ಪಾಲ್ಗೊಂಡ ಎಲ್ಲ ಭಕ್ತರಿಗೆ ದೇವರ ಅನುಗ್ರಹ ಸದಾ ಲಭಿಸಲಿ ಎಂದು ಅವರು ಹಾರೈಸಿದರು. ಧಾರ್ಮಿಕ ಕಾರ್ಯಕ್ರಮಗಳು ಸಮಾಜದಲ್ಲಿ ಸೌಹಾರ್ದತೆ, ಶಾಂತಿ ಹಾಗೂ ಆಧ್ಯಾತ್ಮಿಕ ಮೌಲ್ಯಗಳನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ತಿಳಿಸಿದರು.
ಮಹಾಪೂಜೆಯ ಮೊದಲ ದಿನ ಪ್ರಾತಃಕಾಲದಲ್ಲಿ ಗಂಗೆ ಪೂಜೆ ಹಾಗೂ ಸಂಕಲ್ಪ ಕಂಕಣ ಧಾರಣೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬಳಿಕ ಡಾ. ಮಂಜುನಾಥಯ್ಯ ದೇವರು ಅವರ ಮೌನಾನುಷ್ಠಾನದೊಂದಿಗೆ ಇಷ್ಟಲಿಂಗ ಪೂಜೆ, ಗಣಪತಿ ಪೂಜೆ, ರುದ್ರಾಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಆಚರಣೆಗಳು ಮೂರು ದಿನಗಳ ಕಾಲ ನಿರಂತರವಾಗಿ ನೆರವೇರಿದವು. ಸಾಲಾವಳಿ ಬಸವೇಶ್ವರನ ಸನ್ನಿಧಿಯಲ್ಲಿ ನಡೆದ ವಿಶೇಷ ಪೂಜೆಗಳಲ್ಲಿ ಭಕ್ತರು ಭಕ್ತಿ ಸಮರ್ಪಣೆಯಿಂದ ಭಾಗವಹಿಸಿ ಆಶೀರ್ವಾದ ಪಡೆದರು.
ಮಹಾಪೂಜೆಯ ಅಂಗವಾಗಿ ವಿವಿಧ ಭಜನಾ ಸಂಘಗಳು ಭಕ್ತಿಸೇವೆಯನ್ನು ಸಲ್ಲಿಸಿದವು. ಬಳಿಗಾರ ಭಜನಾ ಸಂಘ, ಹಾವಳಿ ಆಂಜನೇಯ ದೇವಸ್ಥಾನ ಭಜನಾ ಸಂಘ, ಧಾನಿಕೇರಿ ಭಜನಾ ಸಂಘ ಹಾಗೂ ಸಣ್ಣ ದ್ಯಾಮವ್ವ ಭಜನಾ ಸಂಘಗಳ ಸದಸ್ಯರು ಭಜನೆಗಳ ಮೂಲಕ ದೇವರ ನಾಮಸ್ಮರಣೆ ನಡೆಸಿ ಭಕ್ತರನ್ನು ಭಕ್ತಿರಸದಲ್ಲಿ ತೇಲಿಸಿದರು. ಭಜನೆ, ಕೀರ್ತನೆ ಹಾಗೂ ಶಿವನಾಮ ಸ್ಮರಣೆಯಿಂದ ದೇವಸ್ಥಾನದ ಆವರಣವು ಆಧ್ಯಾತ್ಮಿಕ ವಾತಾವರಣದಿಂದ ಕಂಗೊಳಿಸಿತು.
ಕಾರ್ಯಕ್ರಮದಲ್ಲಿ ಹಳ್ಳದಕೇರಿ ಗ್ರಾಮದ ಸಮಸ್ತ ಭಕ್ತರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.
ಮಹಿಳೆಯರು, ಯುವಕರು ಹಾಗೂ ಹಿರಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪೂಜೆ, ಪ್ರಸಾದ ವಿತರಣೆ ಹಾಗೂ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಮೂರು ದಿನಗಳ ಕಾಲ ನಡೆದ ಈ ಧಾರ್ಮಿಕ ಮಹೋತ್ಸವವು ಭಕ್ತಿ, ಶ್ರದ್ಧೆ ಮತ್ತು ಸಾಮಾಜಿಕ ಸೌಹಾರ್ದತೆಯ ಪ್ರತೀಕವಾಗಿ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಭಾಗವಹಿಸಿದ ಭಕ್ತರಲ್ಲಿ ಹೊಸ ಆಧ್ಯಾತ್ಮಿಕ ಚೈತನ್ಯ ಮೂಡಿಸಿದೆ.
ಸಾಲಾವಳಿ ಬಸವೇಶ್ವರ ದೇವಸ್ಥಾನದಲ್ಲಿ ನಡೆದ ಈ ಇಷ್ಟಲಿಂಗ ಮಹಾಪೂಜೆಯು ಕೇವಲ ಧಾರ್ಮಿಕ ಕಾರ್ಯಕ್ರಮವಾಗಿಯೇ ಉಳಿಯದೆ, ನಾಡಿನ ಜನರ ಸುಖ-ಶಾಂತಿ, ಉತ್ತಮ ಮಳೆ, ರೈತರ ಸಮೃದ್ಧಿ ಹಾಗೂ ಲೋಕಕಲ್ಯಾಣಕ್ಕಾಗಿ ನಡೆದ ಮಹತ್ವದ ಆಧ್ಯಾತ್ಮಿಕ ಯಜ್ಞವಾಗಿ ಜನಮನದಲ್ಲಿ ವಿಶೇಷ ಸ್ಥಾನ ಪಡೆದಿದೆ.
ಹಿಂದೂಸ್ತಾನ್ ಸಮಾಚಾರ್ / lalita MP