ದೇವೇಗೌಡರಿಗೆ ರಾಜ್ಯ ಸಭಾ ಟಿಕೆಟ್ ಕೈತಪ್ಪಿದ ವಿಚಾರ ; ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ
ಮಂಡ್ಯ, 09 ಜೂನ್ (ಹಿ.ಸ.) : ಆ್ಯಂಕರ್ : ಮಾಜಿ ಪ್ರಧಾನಮಂತ್ರಿ ಹೆಚ್.ಡಿ. ದೇವೇಗೌಡರಿಗೆ ರಾಜ್ಯ ಸಭಾ ಟಿಕೆಟ್ ಕೈತಪ್ಪಿರುವ ಕುರಿತು ನಡೆಯುತ್ತಿರುವ ರಾಜಕೀಯ ಚರ್ಚೆಗಳಿಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ. ದೇವೇಗೌಡರು ರಾಜ್ಯಸಭಾ ಸ್ಥಾನಕ್ಕಾಗಿ ಅರ್ಜಿಯನ್ನೇ ಸಲ್ಲಿಸಿರಲಿಲ
Hdk


ಮಂಡ್ಯ, 09 ಜೂನ್ (ಹಿ.ಸ.) :

ಆ್ಯಂಕರ್ : ಮಾಜಿ ಪ್ರಧಾನಮಂತ್ರಿ ಹೆಚ್.ಡಿ. ದೇವೇಗೌಡರಿಗೆ ರಾಜ್ಯ ಸಭಾ ಟಿಕೆಟ್ ಕೈತಪ್ಪಿರುವ ಕುರಿತು ನಡೆಯುತ್ತಿರುವ ರಾಜಕೀಯ ಚರ್ಚೆಗಳಿಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ. ದೇವೇಗೌಡರು ರಾಜ್ಯಸಭಾ ಸ್ಥಾನಕ್ಕಾಗಿ ಅರ್ಜಿಯನ್ನೇ ಸಲ್ಲಿಸಿರಲಿಲ್ಲ ಎಂದು ಅವರು ತಿಳಿಸಿದ್ದಾರೆ.

ಮಂಡ್ಯ ತಾಲೂಕಿನ ತಗ್ಗಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ರಾಜ್ಯಸಭೆ ಟಿಕೆಟ್ಗೆ ಹೆಚ್.ಡಿ. ದೇವೇಗೌಡರು ಅರ್ಜಿ ಹಾಕಿರಲಿಲ್ಲ. ಆದರೆ ಇದೀಗ ಕಾಂಗ್ರೆಸ್ ನಾಯಕರು ಅವರ ಬಗ್ಗೆ ಅನುಕಂಪ ತೋರಿಸುತ್ತಿದ್ದಾರೆ. ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಕಾಂಗ್ರೆಸ್ಗೆ ಭಯ ಆರಂಭವಾಗಿದ್ದು, ನಮ್ಮ ಮೈತ್ರಿಯಲ್ಲಿ ಬಿರುಕು ಮೂಡಿಸಲು ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದರು.

ದೇವೇಗೌಡರ ರಾಜಕೀಯ ಜೀವನವನ್ನು ಉಲ್ಲೇಖಿಸಿದ ಅವರು, ದೇವೇಗೌಡರು ಅಧಿಕಾರಕ್ಕಾಗಿ ಯಾರ ಮನೆಯ ಬಾಗಿಲಿಗೂ ಹೋಗಿಲ್ಲ. ಸ್ವಾಭಿಮಾನಕ್ಕೆ ಧಕ್ಕೆ ಉಂಟಾದ ಸಂದರ್ಭದಲ್ಲಿ ಪ್ರಧಾನಮಂತ್ರಿ ಹುದ್ದೆಯನ್ನೇ ತ್ಯಜಿಸಿ ಹೊರಬಂದವರು ಎಂದು ಹೇಳಿದರು.

ಕಳೆದ ಬಾರಿ ದೇವೇಗೌಡರ ಅವಿರೋಧ ರಾಜ್ಯಸಭಾ ಆಯ್ಕೆಗೆ ಕಾಂಗ್ರೆಸ್ ಬೆಂಬಲ ನೀಡಿತ್ತು ಎಂಬ ಚರ್ಚೆಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ದೇವೇಗೌಡರು ಕಾಂಗ್ರೆಸ್ ಬೆಂಬಲದಿಂದ ರಾಜ್ಯಸಭೆಗೆ ಹೋಗಿಲ್ಲ. ಅವರ ವಿರುದ್ಧ ಸ್ಪರ್ಧಿಸಲು ಬೇರೆ ಅಭ್ಯರ್ಥಿಯೇ ಇರಲಿಲ್ಲ. ಕಳೆದ ಬಾರಿ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಿಲ್ಲ ಎಂದು ಬಿ.ಎಸ್. ಯಡಿಯೂರಪ್ಪ ಅವರು ಕರೆ ಮಾಡಿ ತಿಳಿಸಿದ್ದರು. ನಂತರ ನಾನು ಒತ್ತಾಯ ಮಾಡಿ ದೇವೇಗೌಡರನ್ನು ಅಭ್ಯರ್ಥಿಯನ್ನಾಗಿ ಮಾಡಿದ್ದೆ ಎಂದು ವಿವರಿಸಿದರು.

ಒಕ್ಕಲಿಗ ಸಮುದಾಯಕ್ಕೆ ಬಿಜೆಪಿ ಅನ್ಯಾಯ ಮಾಡಿದೆ ಎಂಬ ಕಾಂಗ್ರೆಸ್ ಆರೋಪವನ್ನು ತಳ್ಳಿಹಾಕಿದ ಕುಮಾರಸ್ವಾಮಿ, ಒಕ್ಕಲಿಗರಿಗೆ ಮುಖ್ಯಮಂತ್ರಿ ಸ್ಥಾನ ಬೇಕೆಂಬ ಬೇಡಿಕೆ ಇರುವಾಗ, ಕೇವಲ ರಾಜ್ಯಸಭೆ ಸ್ಥಾನ ಪಡೆದು ಏನು ಸಾಧಿಸುತ್ತೀರಿ? ಎಂದು ಪ್ರಶ್ನಿಸಿದರು.

ರಾಜ್ಯಸಭಾ ನಾಮನಿರ್ದೇಶನ ಮತ್ತು ಬಿಜೆಪಿ-ಜೆಡಿಎಸ್ ಮೈತ್ರಿ ಕುರಿತ ರಾಜಕೀಯ ಚರ್ಚೆಗಳು ರಾಜ್ಯ ರಾಜಕಾರಣದಲ್ಲಿ ಹೊಸ ತಿರುವು ಪಡೆದುಕೊಂಡಿರುವ ಸಂದರ್ಭದಲ್ಲಿ ಕುಮಾರಸ್ವಾಮಿ ಅವರ ಈ ಹೇಳಿಕೆಗಳು ಮಹತ್ವ ಪಡೆದಿವೆ. ಕಾಂಗ್ರೆಸ್ ಮಾಡುತ್ತಿರುವ ಆರೋಪಗಳು ರಾಜಕೀಯ ಪ್ರೇರಿತವಾಗಿದ್ದು, ಮೈತ್ರಿ ಪಕ್ಷಗಳ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂಬ ಸಂದೇಶವನ್ನು ಅವರು ನೀಡಲು ಪ್ರಯತ್ನಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande