ಮಳೆಗಾಲದ ಸಿದ್ಧತೆಗೆ ಜಿಬಿಎ ಒತ್ತು
ಬೆಂಗಳೂರು, 09 ಜೂನ್ (ಹಿ.ಸ.) : ಆ್ಯಂಕರ್ : ಮಳೆಗಾಲದ ಹಿನ್ನೆಲೆಯಲ್ಲಿ ನಗರದಲ್ಲಿ ಸಂಭವಿಸಬಹುದಾದ ಪ್ರವಾಹ ಮತ್ತು ನೀರು ನಿಲ್ಲುವಿಕೆ ಸಮಸ್ಯೆಗಳನ್ನು ತಡೆಗಟ್ಟುವ ಉದ್ದೇಶದಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಎಫ್.ಇ.ಸಿ.ಸಿ. ವಿಭಾಗದ ವಿಶೇಷ ಆಯುಕ್ತೆ ಸುಷಮಾ ಗೋಡಬೋಲೆ ಅವರು ಇಂದು ಬೆಂಗಳೂರು ಪಶ್ಚಿಮ
Visit


ಬೆಂಗಳೂರು, 09 ಜೂನ್ (ಹಿ.ಸ.) :

ಆ್ಯಂಕರ್ : ಮಳೆಗಾಲದ ಹಿನ್ನೆಲೆಯಲ್ಲಿ ನಗರದಲ್ಲಿ ಸಂಭವಿಸಬಹುದಾದ ಪ್ರವಾಹ ಮತ್ತು ನೀರು ನಿಲ್ಲುವಿಕೆ ಸಮಸ್ಯೆಗಳನ್ನು ತಡೆಗಟ್ಟುವ ಉದ್ದೇಶದಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಎಫ್.ಇ.ಸಿ.ಸಿ. ವಿಭಾಗದ ವಿಶೇಷ ಆಯುಕ್ತೆ ಸುಷಮಾ ಗೋಡಬೋಲೆ ಅವರು ಇಂದು ಬೆಂಗಳೂರು ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕೆಂಗೇರಿ ಮಸೀದಿ ರಸ್ತೆಯಲ್ಲಿರುವ ಪ್ರವಾಹ ಪೀಡಿತ ಸ್ಥಳಗಳನ್ನು (ಫ್ಲಡ್ ಪಾಯಿಂಟ್ಗಳು) ಪರಿಶೀಲಿಸಿದ ಅವರು, ಮಳೆಗಾಲದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ನೀರು ಸರಾಗವಾಗಿ ಹರಿದು ಹೋಗಲು ಚರಂಡಿ ಮತ್ತು ಮಳೆನೀರು ಕಾಲುವೆಗಳ ನಿರ್ವಹಣೆಗೆ ಆದ್ಯತೆ ನೀಡಬೇಕು ಎಂದು ತಿಳಿಸಿದರು.

ನಗರದ ವಿವಿಧ ಭಾಗಗಳಲ್ಲಿ ನೀರು ನಿಲ್ಲುವ ಸಮಸ್ಯೆ ಮರುಕಳಿಸದಂತೆ ಮುಂಚಿತವಾಗಿ ಅಗತ್ಯ ಕ್ರಮಗಳನ್ನು ಕೈಗೊಂಡು, ಸಂಭಾವ್ಯ ಅಪಾಯದ ಪ್ರದೇಶಗಳ ಮೇಲೆ ನಿರಂತರ ನಿಗಾ ವಹಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ನಾಗರಿಕರ ಸುರಕ್ಷತೆ ಮತ್ತು ಸುಗಮ ಸಂಚಾರಕ್ಕೆ ಯಾವುದೇ ಅಡಚಣೆ ಉಂಟಾಗದಂತೆ ನೋಡಿಕೊಳ್ಳುವಂತೆ ಸೂಚಿಸಿದರು.

ಬಳಿಕ ರಾಜರಾಜೇಶ್ವರಿ ನಗರದ ಹಲಗೆವಡೇರಹಳ್ಳಿ ಕೆರೆಗೆ ಭೇಟಿ ನೀಡಿದ ವಿಶೇಷ ಆಯುಕ್ತರು, ನಡೆಯುತ್ತಿರುವ ಕೆರೆ ಅಭಿವೃದ್ಧಿ ಕಾಮಗಾರಿಗಳ ಪ್ರಗತಿಯನ್ನು ಪರಿಶೀಲಿಸಿದರು. ಕಾಮಗಾರಿಗಳನ್ನು ಗುಣಮಟ್ಟದೊಂದಿಗೆ ಹಾಗೂ ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವಂತೆ ಸಂಬಂಧಿತ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಕೆರೆಗಳ ಸಂರಕ್ಷಣೆ ಮತ್ತು ಅಭಿವೃದ್ಧಿ ನಗರ ಪರಿಸರ ಸಮತೋಲನ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಜೊತೆಗೆ ಮಳೆನೀರು ಸಂಗ್ರಹಣೆ, ಅಂತರ್ಜಲ ವೃದ್ಧಿ ಹಾಗೂ ಪ್ರವಾಹ ನಿಯಂತ್ರಣಕ್ಕೂ ಕೆರೆಗಳು ಸಹಕಾರಿಯಾಗಿರುವುದರಿಂದ ಅಭಿವೃದ್ಧಿ ಕಾಮಗಾರಿಗಳನ್ನು ಆದ್ಯತೆಯ ಮೇರೆಗೆ ಪೂರ್ಣಗೊಳಿಸಬೇಕು ಎಂದು ಅವರು ತಿಳಿಸಿದರು.

ನಗರದಲ್ಲಿ ಪ್ರವಾಹ ನಿರ್ವಹಣೆ, ಕೆರೆಗಳ ಪುನಶ್ಚೇತನ, ನಾಗರಿಕರ ಸುರಕ್ಷತೆ ಹಾಗೂ ಸಮಗ್ರ ನಗರ ಮೂಲಸೌಕರ್ಯ ಬಲವರ್ಧನೆಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ವಿಶೇಷ ಗಮನ ಹರಿಸುತ್ತಿದ್ದು, ಮಳೆಗಾಲವನ್ನು ಎದುರಿಸಲು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande