
ಕೋಲಾರ, ೦೯ ಜೂನ್ (ಹಿ.ಸ) :
ಆ್ಯಂಕರ್ : ಶ್ರೀನಿವಾಸಪುರ ನಗರದ ಮುಖ್ಯ ರಸ್ತೆಯಲ್ಲಿರುವ ಡಾಬಾವೊಂದರ ಮೇಲೆ ಅಬಕಾರಿ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ, ಅಕ್ರಮವಾಗಿ ದಾಸ್ತಾನು ಮಾಡಿದ್ದ ಭಾರಿ ಪ್ರಮಾಣದ ಮದ್ಯ ಹಾಗೂ ಬಿಯರ್ ವಶಪಡಿಸಿಕೊಂಡಿದ್ದಾರೆ.
ಕೋಲಾರ ಉಪ ವಿಭಾಗದ ಅಬಕಾರಿ ನಿರೀಕ್ಷಕಿ ಮುನಿರತ್ನಮ್ಮ ಟಿ.ಕೆ. ಹಾಗೂ ಸಿಬ್ಬಂದಿ ಶ್ರೀನಿವಾಸಪುರ ನಗರದಲ್ಲಿ ಗಸ್ತು ತಿರುಗುತ್ತಿದ್ದರು. ಈ ವೇಳೆ ಶ್ರೀನಿವಾಸಪುರ-ಮುಳಬಾಗಿಲು ಮುಖ್ಯ ರಸ್ತೆಯ ಅರಿಕೇರಿ ಗೇಟ್ ಬಳಿ ಇರುವ ‘ಮ್ಯಾಂಗೋ ವ್ಯಾಲಿ ಫ್ಯಾಮಿಲಿ ರೆಸ್ಟೋರೆಂಟ್’ ಡಾಬಾದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಲಭಿಸಿತು. ತಕ್ಷಣ ಎಚ್ಚೆತ್ತ ಅಧಿಕಾರಿಗಳು ಸಾಕ್ಷಿದಾರರ ಸಮಕ್ಷಮದಲ್ಲಿ ಡಾಬಾ ಮೇಲೆ ದಾಳಿ ನಡೆಸಿ ಶೋಧನೆ ನಡೆಸಿದರು
ಡಾಬಾದಲ್ಲಿ ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ಮಾರಾಟ ಮಾಡಲು ಸಂಗ್ರಹಿಸಿಡಲಾಗಿದ್ದ ವಿವಿಧ ಬ್ರ್ಯಾಂಡ್ಗಳ ಬಿಯರ್ ಬಾಟಲಿಗಳು, ಮದ್ಯದ ಬಾಟಲಿಗಳು ಹಾಗೂ ಟೆಟ್ರಾ ಪ್ಯಾಕೆಟ್ಗಳನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಕಾರ್ಯಾಚರಣೆಯಲ್ಲಿ ಒಟ್ಟು ೨೪.೯೬ ಲೀಟರ್ ಮದ್ಯ ಹಾಗೂ ೮೨.೩೦೦ ಲೀಟರ್ ಬಿಯರ್ ಅನ್ನು ವಶಪಡಿಸಿಕೊಂಡಿದ್ದಾರೆ.
ಅಬಕಾರಿ ಪರವಾನಗಿ ಇಲ್ಲದೆ ಮದ್ಯ ದಾಸ್ತಾನು ಮಾಡಿ ಮಾರಾಟ ಮಾಡುವುದು ಕರ್ನಾಟಕ ಅಬಕಾರಿ ಕಾಯ್ದೆ ೧೯೬೫ರ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ. ಈ ಹಿನ್ನೆಲೆಯಲ್ಲಿ ಡಾಬಾ ಮಾಲೀಕನಾದ ಶ್ರೀನಿವಾಸಪುರ ನಗರದ ನಿವಾಸಿ ಶ್ರೀನಿವಾಸ್ ರೆಡ್ಡಿ ಬಿನ್ ಬಚ್ಚರೆಡ್ಡಿ ಎಂಬಾತನ ವಿರುದ್ಧ ಅಬಕಾರಿ ಕಾಯ್ದೆಯಡಿ ಮೊಕದ್ದಮೆ ಸಂಖ್ಯೆ: ೮೧/೨೦೨೫-೨೬ ರಂತೆ ಪ್ರಕರಣ ದಾಖಲಿಸಲಾಗಿದ್ದು, ಪ್ರಥಮ ವರ್ತಮಾನ ವರದಿ ಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಅಬಕಾರಿ ನಿರೀಕ್ಷಕಿ ಮುನಿರತ್ನಮ್ಮ ಟಿ.ಕೆ., ಅಬಕಾರಿ ಪೇದೆ ಸಾಬು ಕಾತ್ರಾಳ್ ಹಾಗೂ ವಾಹನ ಚಾಲಕ ರಜನಿಕಾಂತ್ ಪಾಲ್ಗೊಂಡಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್