
ವಿಜಯಪುರ, 09 ಜೂನ್ (ಹಿ.ಸ.) :
ವಿಶೇಷ ವರದಿ
ಆಂಕರ್ : ವಿಜಯಪುರ ಜಿಲ್ಲೆಯ ಪ್ರಮುಖ ವಿಧಾನ ಸಭಾ ಕ್ಷೇತ್ರಗಳಲ್ಲಿ ಒಂದಾದ ಇಂಡಿ ಮತಕ್ಷೇತ್ರವು ರಾಜ್ಯ ರಾಜಕೀಯದಲ್ಲಿ ತನ್ನದೇ ಆದ ಗುರುತನ್ನು ಹೊಂದಿದ್ದರೂ, ಸಚಿವ ಸ್ಥಾನ ಮಾತ್ರ ಈ ಕ್ಷೇತ್ರಕ್ಕೆ ಇನ್ನೂ ದೊರಕಿಲ್ಲ ಎಂಬುದು ವಿಶೇಷವಾಗಿದೆ.
1957ರಿಂದ ಇಂದಿನವರೆಗೆ ನಡೆದ 15 ವಿಧಾನ ಸಭಾ ಚುನಾವಣೆಗಳಲ್ಲಿ ಏಳು ಮಂದಿ ಶಾಸಕರು ಆಯ್ಕೆಯಾಗಿದ್ದರೂ, ಅವರಲ್ಲಿ ಯಾರೊಬ್ಬರೂ ಕರ್ನಾಟಕ ಸಚಿವ ಸಂಪುಟದಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಿಲ್ಲ.
1957ರಲ್ಲಿ ರಚನೆಯಾದ ಇಂಡಿ ವಿಧಾನ ಸಭಾ ಕ್ಷೇತ್ರದಲ್ಲಿ 1957, 1962, 1967, 1972, 1978, 1983, 1985, 1989, 1994, 1999, 2004, 2008, 2013, 2018 ಹಾಗೂ 2023ರಲ್ಲಿ ಒಟ್ಟು 15 ಬಾರಿ ಚುನಾವಣೆಗಳು ನಡೆದಿವೆ. ಈ ಅವಧಿಯಲ್ಲಿ ಕ್ಷೇತ್ರವನ್ನು ಪ್ರತಿನಿಧಿಸಿದ ಹಲವು ಹಿರಿಯ ರಾಜಕಾರಣಿಗಳು ರಾಜ್ಯ ರಾಜಕೀಯದಲ್ಲಿ ಪ್ರಭಾವ ಬೀರಿದ್ದರೂ, ಸಚಿವ ಸ್ಥಾನ ಮಾತ್ರ ಕೈ ಸೇರಿಲ್ಲ.
ಕ್ಷೇತ್ರದ ರಾಜಕೀಯ ಇತಿಹಾಸದಲ್ಲಿ ಮಲ್ಲಪ್ಪ ಕರಬಸಪ್ಪ ಸುರಪುರ, ಆರ್.ಆರ್. ಕಲ್ಲೂರ, ರವಿಕಾಂತ ಪಾಟೀಲ ಹಾಗೂ ಯಶವಂತರಾಯಗೌಡ ಪಾಟೀಲ ಅವರು ತಲಾ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಇದರ ಜೊತೆಗೆ ಗವಿಸಿದ್ದಪ್ಪಗೌಡ ಪಾಟೀಲ (ಚಾಂದಕವಟೆ), ಎನ್.ಎಸ್. ಖೇಡ ಹಾಗೂ ಡಾ. ಸಾರ್ವಭೌಮ ಬಗಲಿ ಅವರು ತಲಾ ಒಂದು ಬಾರಿ ಶಾಸಕರಾಗಿ ವಿಧಾನ ಸಭೆಗೆ ಪ್ರವೇಶಿಸಿದ್ದಾರೆ. ಆದರೆ ಇವರಲ್ಲಿ ಯಾರಿಗೂ ಸಚಿವ ಸ್ಥಾನ ದೊರಕಿಲ್ಲ.
ಜಿಲ್ಲೆಯಲ್ಲಿ ಉಳಿದ ಎಲ್ಲ ಕ್ಷೇತ್ರಗಳಿಗೆ ಸಚಿವ ಸ್ಥಾನ :
ವಿಜಯಪುರ ಜಿಲ್ಲೆಯ ಇತರ ಕ್ಷೇತ್ರಗಳಿಂದ ಆಯ್ಕೆಯಾದ ಹಲವು ನಾಯಕರು ಸಚಿವ ಸ್ಥಾನ ಅಲಂಕರಿಸಿದ್ದಾರೆ. ಬಬಲೇಶ್ವರ ಕ್ಷೇತ್ರದಿಂದ ರಮೇಶ್ ಜಿಗಜಿಣಗಿ, ಸಿಂದಗಿ ಕ್ಷೇತ್ರದಿಂದ ಎಂ.ಸಿ. ಮನಗೂಳಿ ಮತ್ತು ಆರ್.ಬಿ. ಚೌಧರಿ, ವಿಜಯಪುರ ಕ್ಷೇತ್ರದಿಂದ ಎಂ.ಎಲ್. ಉಸ್ತಾದ್, ತಿಕೋಟಾ ಕ್ಷೇತ್ರದಿಂದ ಬಿ.ಎಂ. ಪಾಟೀಲ ಹಾಗೂ ಎಂ.ಬಿ. ಪಾಟೀಲ, ಬಸವನ ಬಾಗೇವಾಡಿ ಕ್ಷೇತ್ರದಿಂದ ಬಿ.ಎಸ್. ಪಾಟೀಲ ಸಾಸನೂರ, ಬಿ.ಎಸ್. ಪಾಟೀಲ ಮನಗೂಳಿ, ಶಿವಾನಂದ ಪಾಟೀಲ, ಮುದ್ದೇಬಿಹಾಳ ಕ್ಷೇತ್ರದಿಂದ ಜೆ.ಎಸ್. ದೇಶಮುಖ, ಹೂವಿನ ಹಿಪ್ಪರಗಿ ಕ್ಷೇತ್ರದಿಂದ ಶಿವಪುತ್ರಪ್ಪ ದೇಸಾಯಿ ಸೇರಿದಂತೆ ಹಲವರು ನಾನಾ ಅವಧಿಗಳಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.
ರಾಜ್ಯದ 224 ವಿಧಾನ ಸಭಾ ಕ್ಷೇತ್ರಗಳ ಪೈಕಿ ಬಹುತೇಕ ಎಲ್ಲ ಕ್ಷೇತ್ರಗಳು ಒಂದಲ್ಲ ಒಂದು ಬಾರಿ ಸಚಿವ ಸ್ಥಾನವನ್ನು ಪಡೆದಿವೆ. ಆದರೆ ಇಂಡಿ ಕ್ಷೇತ್ರ ಮಾತ್ರ ಇಂದಿಗೂ ಸಚಿವ ಸ್ಥಾನಕ್ಕಾಗಿ ಕಾಯುತ್ತಿರುವುದು ಸ್ಥಳೀಯ ಜನರ ಅಸಮಾಧಾನಕ್ಕೆ ಕಾರಣವಾಗಿದೆ.
ಹಲವು ಮುಖ್ಯಮಂತ್ರಿಗಳ ಅವಧಿಯಲ್ಲೂ ಅವಕಾಶ ಸಿಗಲಿಲ್ಲ : ಇಂಡಿ ಕ್ಷೇತ್ರದ ಶಾಸಕರು ನಾನಾ ಕಾಲಘಟ್ಟಗಳಲ್ಲಿ ಅಧಿಕಾರದಲ್ಲಿದ್ದ ಸರ್ಕಾರಗಳ ಭಾಗವಾಗಿದ್ದರೂ ಸಚಿವ ಸ್ಥಾನ ಮಾತ್ರ ಸಿಕ್ಕಿಲ್ಲ. ನಿಜಲಿಂಗಪ್ಪ, ಬಿ.ಡಿ. ಜತ್ತಿ, ಎಸ್.ಆರ್. ಕಂಠಿ, ದೇವರಾಜ ಅರಸು, ಗುಂಡೂರಾವ್, ರಾಮಕೃಷ್ಣ ಹೆಗಡೆ, ಎಸ್.ಆರ್. ಬೊಮ್ಮಾಯಿ, ಎಸ್.ಎಂ. ಕೃಷ್ಣ, ಧರ್ಮಸಿಂಗ್, ವೀರಪ್ಪ ಮೊಯ್ಲಿ, ಎಚ್.ಡಿ. ದೇವೇಗೌಡ, ಜೆ.ಎಚ್. ಪಟೇಲ್, ಬಿ.ಎಸ್. ಯಡಿಯೂರಪ್ಪ, ಡಿ.ವಿ. ಸದಾನಂದಗೌಡ, ಜಗದೀಶ ಶೆಟ್ಟರ್, ಬಸವರಾಜ ಬೊಮ್ಮಾಯಿ ಹಾಗೂ ಸಿದ್ದರಾಮಯ್ಯ ಅವರ ಸರ್ಕಾರಗಳ ಅವಧಿಯಲ್ಲಿಯೂ ಇಂಡಿ ಕ್ಷೇತ್ರದ ಪ್ರತಿನಿಧಿಗಳಿಗೆ ಸಚಿವ ಸ್ಥಾನ ದೊರೆಯಲಿಲ್ಲ.
ಯಶವಂತರಾಯಗೌಡ ಪಾಟೀಲರಿಗೆ ಸಚಿವ ಸ್ಥಾನ ಸಿಗುತ್ತದೆಯೇ? :
ಪ್ರಸ್ತುತ ಇಂಡಿ ಕ್ಷೇತ್ರದ ಶಾಸಕರಾಗಿರುವ ಯಶವಂತರಾಯಗೌಡ ಪಾಟೀಲ ಅವರು ಕ್ಷೇತ್ರವನ್ನು ಮೂರು ಬಾರಿ ಪ್ರತಿನಿಧಿಸಿರುವ ಹಿರಿಯ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದಾರೆ. ರಾಜ್ಯ ಸಚಿವ ಸಂಪುಟ ವಿಸ್ತರಣೆ ಕುರಿತು ರಾಜಕೀಯ ವಲಯದಲ್ಲಿ ಚರ್ಚೆಗಳು ನಡೆಯುತ್ತಿರುವ ಸಂದರ್ಭದಲ್ಲಿ, ಇಂಡಿ ಕ್ಷೇತ್ರದ ಜನರು ಈ ಬಾರಿ ತಮ್ಮ ಕ್ಷೇತ್ರಕ್ಕೆ ಸಚಿವ ಸ್ಥಾನ ದೊರೆಯಬಹುದೇ ಎಂಬ ನಿರೀಕ್ಷೆಯಲ್ಲಿದ್ದಾರೆ.
ರಾಜಕೀಯ ವಿಶ್ಲೇಷಕ ಹಿರಿಯ ಪತ್ರಕರ್ತ ಸಂಗಮೇಶ್ ಕುಂಬಾರ ಅಭಿಪ್ರಾಯದಂತೆ, ದೀರ್ಘ ಕಾಲದಿಂದ ಸಚಿವ ಸ್ಥಾನದಿಂದ ವಂಚಿತವಾಗಿರುವ ಇಂಡಿ ಕ್ಷೇತ್ರಕ್ಕೆ ಪ್ರಾದೇಶಿಕ ಸಮತೋಲನ ಮತ್ತು ರಾಜಕೀಯ ಪ್ರತಿನಿಧಿತ್ವದ ದೃಷ್ಟಿಯಿಂದ ಅವಕಾಶ ನೀಡಬೇಕೆಂಬ ಒತ್ತಾಯ ಹೆಚ್ಚುತ್ತಿದೆ.
ಜನರ ನಿರೀಕ್ಷೆ :
ಇಂಡಿ ಕ್ಷೇತ್ರದ ಅಭಿವೃದ್ಧಿ, ನೀರಾವರಿ, ಕೈಗಾರಿಕೆ, ಶಿಕ್ಷಣ ಹಾಗೂ ಮೂಲಸೌಕರ್ಯ ಯೋಜನೆಗಳಿಗೆ ಹೆಚ್ಚಿನ ವೇಗ ನೀಡಲು ಸಚಿವ ಸ್ಥಾನ ಅಗತ್ಯ ಎಂಬ ಅಭಿಪ್ರಾಯ ಸ್ಥಳೀಯ ಜನರಲ್ಲಿ ವ್ಯಕ್ತವಾಗುತ್ತಿದೆ. ಹಲವು ದಶಕಗಳಿಂದ ಮುಂದುವರಿದಿರುವ ಈ ಬೇಡಿಕೆ ಈಡೇರುತ್ತದೆಯೇ ಅಥವಾ ಮತ್ತೊಮ್ಮೆ ನಿರಾಸೆಯಾಗುತ್ತದೆಯೇ ಎಂಬುದು ಮುಂದಿನ ರಾಜಕೀಯ ಬೆಳವಣಿಗೆಗಳ ಮೇಲೆ ಅವಲಂಬಿತವಾಗಿದೆ.
ಒಟ್ಟಿನಲ್ಲಿ, 69 ವರ್ಷಗಳ ರಾಜಕೀಯ ಇತಿಹಾಸ ಹೊಂದಿರುವ ಇಂಡಿ ವಿಧಾನ ಸಭಾ ಕ್ಷೇತ್ರವು ಇನ್ನೂ ತನ್ನ ಮೊದಲ ಸಚಿವನಿಗಾಗಿ ಕಾಯುತ್ತಿರುವ ರಾಜ್ಯದ ಅಪರೂಪದ ಕ್ಷೇತ್ರವಾಗಿ ಗುರುತಿಸಿಕೊಂಡಿದೆ.
ಹಿಂದೂಸ್ತಾನ್ ಸಮಾಚಾರ್ / jyothi deshpande