
ವಿಜಯಪುರ, 09 ಜೂನ್ (ಹಿ.ಸ.) :
ಆಂಕರ್ : ವಿಜಯಪುರ ಜಿಲ್ಲೆಯ ರಾಜಕೀಯವಾಗಿ ಮಹತ್ವದ ಹಾಗೂ ಅತಿದೊಡ್ಡ ವಿಧಾನಸಭಾ ಕ್ಷೇತ್ರಗಳಲ್ಲಿ ಒಂದಾದ ಇಂಡಿ ಕ್ಷೇತ್ರಕ್ಕೆ ರಾಜ್ಯ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ನೀಡಬೇಕೆಂಬ ಒತ್ತಾಯ ದಿನದಿಂದ ದಿನಕ್ಕೆ ಬಲ ಪಡೆಯುತ್ತಿದೆ.
ಕ್ಷೇತ್ರದ ಶಾಸಕ ಯಶವಂತ್ರಾಯಗೌಡ ಪಾಟೀಲ್ ಅವರಿಗೆ ಸಚಿವ ಸ್ಥಾನ ನೀಡುವ ಮೂಲಕ ಇಂಡಿ ಕ್ಷೇತ್ರದ ಜನರ ಬಹುಕಾಲದ ಆಶಯವನ್ನು ಈಡೇರಿಸಬೇಕು ಎಂದು ಕಾರ್ಯಕರ್ತರು, ಮುಖಂಡರು ಹಾಗೂ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಇಂಡಿ ಕ್ಷೇತ್ರವು ಕೃಷಿ, ನೀರಾವರಿ, ಶಿಕ್ಷಣ, ಆರೋಗ್ಯ ಹಾಗೂ ಕೈಗಾರಿಕಾ ಅಭಿವೃದ್ಧಿಗೆ ಅಪಾರ ಅವಕಾಶಗಳನ್ನು ಹೊಂದಿದ್ದು, ಉತ್ತರ ಕರ್ನಾಟಕದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುವ ಸಾಮರ್ಥ್ಯ ಹೊಂದಿದೆ. ಈ ಹಿನ್ನೆಲೆಯಲ್ಲಿ ಕ್ಷೇತ್ರಕ್ಕೆ ಸಚಿವ ಸ್ಥಾನ ದೊರೆತರೆ ಅಭಿವೃದ್ಧಿ ಯೋಜನೆಗಳ ಅನುಷ್ಠಾನಕ್ಕೆ ಮತ್ತಷ್ಟು ವೇಗ ಸಿಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಕ್ಷೇತ್ರದ ಜನಪ್ರಿಯ ಶಾಸಕರಾಗಿ ಗುರುತಿಸಿಕೊಂಡಿರುವ ಯಶವಂತರಾಯಗೌಡ ಪಾಟೀಲ ಅವರು ಜನಸಾಮಾನ್ಯರೊಂದಿಗೆ ನಿರಂತರ ಸಂಪರ್ಕ ಹೊಂದಿದ್ದು, ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ವಿಶೇಷ ಗುರುತನ್ನು ಪಡೆದಿದ್ದಾರೆ. ರಸ್ತೆ ಅಭಿವೃದ್ಧಿ, ಕುಡಿಯುವ ನೀರಿನ ಯೋಜನೆಗಳು, ನೀರಾವರಿ ಸೌಲಭ್ಯಗಳ ವಿಸ್ತರಣೆ, ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿ ಹಾಗೂ ಆರೋಗ್ಯ ಕ್ಷೇತ್ರದ ಸುಧಾರಣೆಗೆ ಅವರು ನೀಡಿರುವ ಕೊಡುಗೆ ಗಮನಾರ್ಹವಾಗಿದೆ ಎಂದು ಬೆಂಬಲಿಗರು ತಿಳಿಸಿದ್ದಾರೆ.
ಪಕ್ಷದ ಸಂಘಟನೆ ಬಲಪಡಿಸುವಲ್ಲಿಯೂ ಅವರು ಮಹತ್ವದ ಪಾತ್ರವಹಿಸಿದ್ದು, ಸರ್ಕಾರದ ಜನಪರ ಯೋಜನೆಗಳನ್ನು ಗ್ರಾಮ ಮಟ್ಟಕ್ಕೆ ತಲುಪಿಸುವ ಕಾರ್ಯದಲ್ಲಿ ಸಕ್ರಿಯರಾಗಿದ್ದಾರೆ. ಕ್ಷೇತ್ರದ ಅಭಿವೃದ್ಧಿಗಾಗಿ ನಿರಂತರ ಶ್ರಮಿಸುತ್ತಿರುವ ಅವರ ಸೇವೆಯನ್ನು ಪರಿಗಣಿಸಿ ಸಚಿವ ಸಂಪುಟದಲ್ಲಿ ಸ್ಥಾನ ನೀಡುವುದು ನ್ಯಾಯಸಮ್ಮತವಾಗಲಿದೆ ಎಂದು ಕಾರ್ಯಕರ್ತರು ಅಭಿಪ್ರಾಯಪಟ್ಟಿದ್ದಾರೆ.
ಇಂಡಿ ಕ್ಷೇತ್ರದ ಜನರ ಪ್ರಕಾರ, ಉತ್ತರ ಕರ್ನಾಟಕ ಭಾಗಕ್ಕೆ ಸಮರ್ಪಕ ಪ್ರಾತಿನಿಧ್ಯ ದೊರೆಯಬೇಕಿದ್ದು, ಯಶವಂತರಾಯಗೌಡ ಪಾಟೀಲ ಅವರಿಗೆ ಸಚಿವ ಸ್ಥಾನ ದೊರೆತರೆ ವಿಜಯಪುರ ಜಿಲ್ಲೆ ಸೇರಿದಂತೆ ಇಡೀ ಪ್ರದೇಶದ ಅಭಿವೃದ್ಧಿಗೆ ಹೊಸ ಚೈತನ್ಯ ದೊರೆಯಲಿದೆ. ರೈತರು, ಯುವಕರು, ಮಹಿಳೆಯರು ಹಾಗೂ ಸಮಾಜದ ವಿವಿಧ ವರ್ಗಗಳ ಪರವಾಗಿ ಧ್ವನಿಯಾಗಿರುವ ನಾಯಕನಾಗಿ ಅವರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಕ್ಷೇತ್ರದ ಮುಖಂಡರು ಮಾತನಾಡಿ, ಇಂಡಿ ಕ್ಷೇತ್ರದ ಅಭಿವೃದ್ಧಿಗೆ ಸಚಿವ ಸ್ಥಾನ ಅಗತ್ಯವಾಗಿದೆ. ಕ್ಷೇತ್ರದ ಜನರ ಆಶೋತ್ತರಗಳಿಗೆ ಸ್ಪಂದಿಸಿ, ರಾಜ್ಯ ಸರ್ಕಾರ ಹಾಗೂ ಪಕ್ಷದ ವರಿಷ್ಠರು ಇಂಡಿ ಕ್ಷೇತ್ರದ ಭಾವನೆಗಳನ್ನು ಗೌರವಿಸಬೇಕು. ಯಶವಂತರಾಯಗೌಡ ಪಾಟೀಲ ಅವರಿಗೆ ಸಚಿವ ಸ್ಥಾನ ನೀಡುವ ಮೂಲಕ ಅಭಿವೃದ್ಧಿಗೆ ಮತ್ತಷ್ಟು ಉತ್ತೇಜನ ನೀಡಬೇಕು ಎಂದು ಒತ್ತಾಯಿಸಿದರು.
ರಾಜ್ಯ ಸಚಿವ ಸಂಪುಟದ ವಿಸ್ತರಣೆ ಮತ್ತು ಪುನಾರಚನೆ ಕುರಿತ ಚರ್ಚೆಗಳು ನಡೆಯುತ್ತಿರುವ ಸಂದರ್ಭದಲ್ಲಿ ಇಂಡಿ ಕ್ಷೇತ್ರದಿಂದ ಕೇಳಿಬರುತ್ತಿರುವ ಈ ಬೇಡಿಕೆ ರಾಜಕೀಯ ವಲಯದಲ್ಲಿ ಗಮನ ಸೆಳೆದಿದೆ. ಅಂತಿಮವಾಗಿ ಪಕ್ಷದ ನಾಯಕತ್ವ ಮತ್ತು ಸರ್ಕಾರ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಹಿಂದೂಸ್ತಾನ್ ಸಮಾಚಾರ್ / jyothi deshpande