
ಬೆಂಗಳೂರು, 09 ಜೂನ್ (ಹಿ.ಸ.) :
ಆ್ಯಂಕರ್ : ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ನಾಯಕ ಹಾಗೂ ವಿಧಾನ ಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ್ ತೀವ್ರ ವಾಗ್ದಾಳಿ ನಡೆಸಿದ್ದು, ಕಟ್ಟಡ ಕಾರ್ಮಿಕರಿಗೆ ವಿತರಿಸಲು ಖರೀದಿಸಲಾದ ಮೇಸನ್ ಟೂಲ್ ಕಿಟ್ ಖರೀದಿಯಲ್ಲಿ ಕೋಟ್ಯಂತರ ರೂಪಾಯಿ ಅಕ್ರಮ ನಡೆದಿದೆ ಎಂದು ಆರೋಪಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪ್ರಕಟಿಸಿದ ಹೇಳಿಕೆಯಲ್ಲಿ, ಬಡ ಕಟ್ಟಡ ಕಾರ್ಮಿಕರ ಕಲ್ಯಾಣಕ್ಕಾಗಿ ಮೀಸಲಿಟ್ಟ ಹಣದಲ್ಲಿಯೂ ಭ್ರಷ್ಟಾಚಾರ ನಡೆದಿದೆ ಎಂದು ಅವರು ಆರೋಪಿಸಿದ್ದಾರೆ. ಕರ್ನಾಟಕದಲ್ಲಿ ಭ್ರಷ್ಟಾಚಾರವೇ ಆಡಳಿತದ ಮೂಲಮಂತ್ರವಾಗಿದೆ ಎಂಬುದಕ್ಕೆ ಇದು ಮತ್ತೊಂದು ಉದಾಹರಣೆ ಎಂದು ಟೀಕಿಸಿದ್ದಾರೆ.
ಅವರ ಪ್ರಕಾರ, ಮಾರುಕಟ್ಟೆಯಲ್ಲಿ ಕೇವಲ ₹1,379 ಬೆಲೆಯಿರುವ ಟೂಲ್ ಕಿಟ್ಗೆ ಕಾರ್ಮಿಕ ಕಲ್ಯಾಣ ಮಂಡಳಿಯು ₹3,575 ಬೆಲೆ ನಿಗದಿಪಡಿಸಿದ್ದು, ಖಾಸಗಿ ಕಂಪನಿಗೆ ಪ್ರತಿ ಕಿಟ್ಗೆ ₹3,200 ರಿಂದ ₹3,300ರವರೆಗೆ ಪಾವತಿಸಲಾಗಿದೆ. ಒಟ್ಟು 67,380 ಟೂಲ್ ಕಿಟ್ಗಳ ಖರೀದಿಯಿಂದ ಸರ್ಕಾರಿ ಬೊಕ್ಕಸಕ್ಕೆ ಸುಮಾರು ₹12.92 ಕೋಟಿ ನಷ್ಟ ಉಂಟಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಈ ಪ್ರಕರಣದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಲೋಕಾಯುಕ್ತವು ಪ್ರಾಸಿಕ್ಯೂಷನ್ ಅನುಮತಿ ಕೋರಿದರೂ, ರಾಜ್ಯ ಸರ್ಕಾರ ಕಳೆದ ಒಂಬತ್ತು ತಿಂಗಳಿಂದ ಕಡತವನ್ನು ಬಾಕಿ ಉಳಿಸಿಕೊಂಡಿದೆ ಎಂದು ಅಶೋಕ್ ಆರೋಪಿಸಿದ್ದಾರೆ. ಈ ವಿಳಂಬದ ಹಿಂದೆ ಯಾರನ್ನು ರಕ್ಷಿಸುವ ಉದ್ದೇಶವಿದೆ ಎಂಬ ಪ್ರಶ್ನೆಯನ್ನೂ ಅವರು ಎತ್ತಿದ್ದಾರೆ.
ಹಗರಣದ ಕುರಿತು ಅವರು ನಾಲ್ಕು ಪ್ರಮುಖ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ:
ಬಡ ಕಾರ್ಮಿಕರ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಲೂಟಿ ಮಾಡಿದವರು ಯಾರು?
- ಈ ಪ್ರಕರಣದಲ್ಲಿ ಭಾಗಿಯಾಗಿರುವ ಅಧಿಕಾರಿಗಳಿಗೆ ರಕ್ಷಣೆ ನೀಡುತ್ತಿರುವವರು ಯಾರು?
- ಲೋಕಾಯುಕ್ತ ತನಿಖೆಗೆ ಅನುಮತಿ ನೀಡಲು ಸರ್ಕಾರ ಹಿಂಜರಿಯುತ್ತಿರುವುದು ಏಕೆ?
- ರಾಜ್ಯ ಸರ್ಕಾರ ಈ ಕುರಿತು ಸಾರ್ವಜನಿಕರಿಗೆ ಸ್ಪಷ್ಟ ಉತ್ತರ ನೀಡುತ್ತದೆಯೇ?
ಬಡವರ ಹಣದಲ್ಲಿ ಕಮಿಷನ್ ಪಡೆಯುವವರ ಹೆಸರು ಬಹಿರಂಗವಾಗಬೇಕು ಹಾಗೂ ಹಗರಣದ ಸಂಪೂರ್ಣ ಸತ್ಯ ಹೊರಬರಬೇಕು ಎಂದು ಆಗ್ರಹಿಸಿದ ಅಶೋಕ್, ತಪ್ಪಿತಸ್ಥರ ವಿರುದ್ಧ ತಕ್ಷಣ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಇಲ್ಲವಾದಲ್ಲಿ, ಈ ವಿಚಾರವನ್ನು ಜನಾಂದೋಲನವಾಗಿ ರೂಪಿಸಿ ರಾಜ್ಯಾದ್ಯಂತ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಬಿಜೆಪಿ ಎಚ್ಚರಿಕೆ ನೀಡಿದೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.