



ಬಳ್ಳಾರಿ, 09 ಜೂನ್ (ಹಿ.ಸ.) :
ಆ್ಯಂಕರ್ : ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಪೂರ್ಣಗೊಂಡಿರುವ ಗಡಿಗಿ ಚನ್ನಪ್ಪ ವೃತ್ತದಲ್ಲಿರುವ ಗಡಿಯಾರದ ಕಂಭ ಮತ್ತು ವಿವಿಧ ಕಾಮಗಾರಿಗಳನ್ನು ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಂದ ಶೀಘ್ರದಲ್ಲೇ ಉದ್ಘಾಟಿಸಲಾಗುವುದು ಎಂದು ಶಾಸಕ ನಾರಾ ಭರತರೆಡ್ಡಿ ಅವರು ತಿಳಿಸಿದ್ದಾರೆ.
ಬಳ್ಳಾರಿಯ 14ನೇ ವಾರ್ಡಿನಲ್ಲಿ ಮಂಗಳವಾರ ನಡೆದ `ಸಲಾಂ ಬಳ್ಳಾರಿ' ಹಾಗೂ ಕಿಚನ್ ಕಿಟ್ ವಿತರಣೆ ಮಾಡಿ ಸುದ್ದಿಗಾರರ ಜೊತೆಯಲ್ಲಿ ಮಾತನಾಡಿದ ಅವರು, ಗಡಿಗಿ ಚನ್ನಪ್ಪ ವೃತ್ತ, ಮಹರ್ಷಿ ವಾಲ್ಮೀಕಿ ಪುತ್ಥಳಿ ಸೇರಿ ಈವರೆಗೆ ಪೂರ್ಣಗೊಂಡಿರುವ ರಸ್ತೆ ಇನ್ನಿತರೆ ಕಾಮಗಾರಿಗಳನ್ನು ಲೋಕಾರ್ಪಣೆ ಮಾಡಲಾಗುವುದು ಎಂದರು.
ಬಳ್ಳಾರಿ ನಗರಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆಯ 270 ಕೋಟಿ ರೂ.ಗಳ ವೆಚ್ಚದಲ್ಲಿ ಪ್ರಾಥಮಿಕ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಗುವುದು. ಪ್ರತಿ ವಾರ್ಡಿಗೆ ತಲಾ 2.50 ಕೋಟಿ ರೂ.ಗಳ ಅನುದಾನ ಮಂಜೂರಾಗಿದ್ದು, ಬಳ್ಳಾರಿಯ ಎಲ್ಲಾ ವಾರ್ಡ್ಗಳನ್ನು ಅಭಿವೃದ್ಧಿ ಮಾಡಲಾಗುತ್ತದೆ ಎಂದರು.
ನಗರದಲ್ಲಿ ಕೆಲ ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದ ಭಾರೀ ಹಾನಿಯಾಗಿದೆ. ಮಹಾನಗರ ಪಾಲಿಕೆಯ ಅಧಿಕಾರಿಗಳು, ಜೆಸ್ಕಾಂನ ಅಧಿಕಾರಿಗಳು ಹಾಗೂ ಸಿಬ್ಬಂದಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದಾರೆ. ವಿದ್ಯುತ್ ಪೂರೈಸುವ ಮಾರ್ಗಗಳು, ಕಂಬಗಳು ಹಳೆಯವಾಗಿದ್ದು, ಹಂತ ಹಂತವಾಗಿ ಬದಲಾವಣೆ ಮಾಡಲಾಗುತ್ತದೆ ಎಂದರು.
ಬಳ್ಳಾರಿ ಮಹಾನಗರ ಪಾಲಿಕೆಯ ಸದಸ್ಯ ನೂರ್ ಮೊಹಮ್ಮದ್, ಕಾಂಗ್ರೆಸ್ ಮುಖಂಡ ಬಿಆರೆಲ್ ಸೀನಾ, ಮಹಿಳಾ ಘಟಕದ ಮಂಜುಳಾ, ಪದ್ಮಾ, ಥಿಯೇಟರ್ ಶಿವು, ರಾಕಿ ಮತ್ತಿತರರು ಹಾಜರಿದ್ದರು.
ಬಳ್ಳಾರಿಯ ಅಯ್ಯಪ್ಪಸ್ವಾಮಿ ದೇವಸ್ಥಾನದ ಸಮೀಪದ ರಸ್ತೆಗೆ `ಶ್ರೀ ಮುಂಡ್ಲೂರು ನರಸಿಂಹಪ್ಪ ರಸ್ತೆ' ಎಂದು ನಗರ ಶಾಸಕ ನಾರಾ ಭರತರೆಡ್ಡಿ ಅವರು ಮಂಗಳವಾರ ಉದ್ಘಾಟಿಸಿದ್ದಾರೆ. ಈ ಸಂದಭದಲ್ಲಿ ಕಾಂಗ್ರೆಸ್ ಮುಖಂಡರಾದ ಅಲ್ಲಂ ಪ್ರಶಾಂತ್, ಮುಂಡ್ಲೂರು ಕುಟುಂಬದ ಸದಸ್ಯರು, ಕಾರ್ಪೊರೇಟರ್ ಮುಂಡ್ಲೂರು ಪ್ರಭಂಜನ್ ಇನ್ನಿತರರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್