

ಗಂಗಾವತಿ (ಮರ್ಲಾನಳ್ಳಿ ನವನಗರ್), 09 ಜೂನ್ (ಹಿ.ಸ.) :
ಆ್ಯಂಕರ್ : ಜೆಇಇ ಅಡ್ವಾನ್ಸ್ಡ್-2026ರಲ್ಲಿ ಅಖಿಲ ಭಾರತ ಮಟ್ಟದಲ್ಲಿ 6ನೇ ರ್ಯಾಂಕ್ ಗಳಿಸಿ ರಾಜ್ಯಕ್ಕೆ ಹಾಗೂ ಜಿಲ್ಲೆಯ ಶಿಕ್ಷಣ ಕ್ಷೇತ್ರಕ್ಕೆ ಕೀರ್ತಿ ತಂದ
ವಿದ್ಯಾರ್ಥಿ ಬಿ. ಜಯಕೃಷ್ಣ ಅವರನ್ನು ಕಮ್ಮವಾರಿ ಶಿಕ್ಷಣ ಸಂಸ್ಥೆ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಡಾ.ಮಹಮ್ಮದ್ ರಫೀಕ್ ಮಾತನಾಡಿ ಜಯಕೃಷ್ಣ ಅವರು 9 ಮತ್ತು 10ನೇ ತರಗತಿಯನ್ನು ಕಮ್ಮವಾರಿ ಶಿಕ್ಷಣ ಸಂಸ್ಥೆಯ ರೆಡ್ಡಿ ವೀರಣ್ಣ ಸಂಜೀವಪ್ಪ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದು, ತಮ್ಮ ಶೈಕ್ಷಣಿಕ ಪಯಣದ ಭದ್ರ ಅಡಿಪಾಯವನ್ನು ಇದೇ ಶಾಲೆಯಲ್ಲಿ ಹಾಕಿಕೊಂಡಿದ್ದರು ಎಂದು ತಿಳಿಸಿದರು. ನಂತರ ಪಿಯುಸಿ ಶಿಕ್ಷಣವನ್ನು ಬೇರೆ ಕಾಲೇಜಿನಲ್ಲಿ ಪೂರ್ಣಗೊಳಿಸಿದ ಅವರು, ಹೆಚ್ಚುವರಿಯಾಗಿ ಒಂದು ವರ್ಷ ಏಕಾಗ್ರತೆಯಿಂದ ತಯಾರಿ ನಡೆಸಿ ಜೆಇಇ ಅಡ್ವಾನ್ಸ್ಡ್ನಲ್ಲಿ ದೇಶದಲ್ಲೇ 6ನೇ ರ್ಯಾಂಕ್ ಗಳಿಸುವ ಮೂಲಕ ಅಪರೂಪದ ಸಾಧನೆ ಮಾಡಿದ್ದಾರೆ ಎಂದು ಪ್ರಶಂಸಿಸಿದರು.
ಈ ಸಂದರ್ಭದಲ್ಲಿ ಕಮ್ಮವಾರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಕೊಲ್ಲಾ ಶೇಷಗಿರಿರಾವ್ ಅವರು ಬಿ. ಜಯಕೃಷ್ಣ ಅವರನ್ನು ಸನ್ಮಾನಿಸಿ ಅಭಿನಂದಿಸಿದರು.ಅಲ್ಲದೆ ಅವರ ಹೆತ್ತವರ ಪರಿಶ್ರಮ ಮತ್ತು ಪ್ರೋತ್ಸಾಹವನ್ನು ಮೆಚ್ಚಿ, ವಿದ್ಯಾರ್ಥಿಗಳ ಸಾಧನೆಗೆ ಕುಟುಂಬದ ಬೆಂಬಲವೂ ಮಹತ್ವದ ಪಾತ್ರ ವಹಿಸುತ್ತದೆ ಎಂದು ಹೇಳಿದರು.
ದುರ್ಗಾಕ್ಯಾಂಪ್ ಗ್ರಾಮದ ರೈತ ಕುಟುಂಬದಿಂದ ಬಂದಿರುವ ಜಯಕೃಷ್ಣ ಅವರ ಸಾಧನೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸ್ಫೂರ್ತಿದಾಯಕವಾಗಿದೆ. ದೃಢ ಸಂಕಲ್ಪ, ಪರಿಶ್ರಮ ಹಾಗೂ ನಿರಂತರ ಅಧ್ಯಯನದ ಮೂಲಕ ಯಾವುದೇ ಹಿನ್ನೆಲೆಯ ವಿದ್ಯಾರ್ಥಿಯೂ ಉನ್ನತ ಗುರಿಗಳನ್ನು ಸಾಧಿಸಬಹುದು ಎಂಬುದನ್ನು ಅವರು ಸಾಬೀತುಪಡಿಸಿದ್ದಾರೆ ಎಂದು ಹೇಳಿದರು.
ವಿದ್ಯಾರ್ಥಿ ಜಯಕೃಷ್ಣ ಅವರಿಗೆ ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಐಐಟಿ ಬಾಂಬೆಯಲ್ಲಿ ಪ್ರವೇಶ ಪಡೆಯುವ ಅವಕಾಶ ಲಭಿಸಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್