ಬೀಜ, ಗೊಬ್ಬರ, ಡೀಸೆಲ್ ಕೊರತೆಯಿಂದ ಕೃಷಿ ಕಾರ್ಯ ಹಿನ್ನಡೆ
ಗದಗ, 09 ಜೂನ್ (ಹಿ.ಸ.) : ಆ್ಯಂಕರ್ : ಮುಂಗಾರು ಹಂಗಾಮಿನ ಆರಂಭದಲ್ಲೇ ರೈತ ಸಮುದಾಯ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಘಟನೆ ಬೆಳಕಿಗೆ ಬಂದಿದೆ. ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಡೀಸೆಲ್ ಕೊರತೆ ಒಂದೇ ವೇಳೆ ಎದುರಾಗಿರುವುದರಿಂದ ಕೃಷಿ ಚಟುವಟಿಕೆಗಳು ಗಂಭೀರವಾಗಿ ಹಿನ್ನಡೆಯಾಗುತ್ತಿವೆ ಎಂದು ಕರ್ನಾಟಕ ರಾಜ್
ಫೋಟೋ


ಗದಗ, 09 ಜೂನ್ (ಹಿ.ಸ.) :

ಆ್ಯಂಕರ್ : ಮುಂಗಾರು ಹಂಗಾಮಿನ ಆರಂಭದಲ್ಲೇ ರೈತ ಸಮುದಾಯ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಘಟನೆ ಬೆಳಕಿಗೆ ಬಂದಿದೆ. ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಡೀಸೆಲ್ ಕೊರತೆ ಒಂದೇ ವೇಳೆ ಎದುರಾಗಿರುವುದರಿಂದ ಕೃಷಿ ಚಟುವಟಿಕೆಗಳು ಗಂಭೀರವಾಗಿ ಹಿನ್ನಡೆಯಾಗುತ್ತಿವೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರು ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಮರ್ಪಕ ಪೂರ್ವ ಸಿದ್ಧತೆ ಇಲ್ಲದೆ ಮುಂಗಾರು ಹಂಗಾಮು ಆರಂಭವಾದ ಪರಿಣಾಮ ರೈತರು ಬಿತ್ತನೆ ಕಾರ್ಯವನ್ನೇ ಮುಂದೂಡುವ ಸ್ಥಿತಿಗೆ ತಲುಪಿದ್ದಾರೆ ಎಂದು ಆರೋಪಿಸಲಾಗಿದೆ.

ಗದಗ ಜಿಲ್ಲೆ ರೋಣ ತಾಲೂಕು ತಹಸೀಲ್ದಾರ್ ಕಚೇರಿಗೆ ಆಗಮಿಸಿದ ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರು ಹಾಗೂ ರೈತ ಪ್ರತಿನಿಧಿಗಳು ಸರ್ಕಾರ ಹಾಗೂ ಸಂಬಂಧಿತ ಇಲಾಖೆಗಳ ನಿರ್ಲಕ್ಷ್ಯವನ್ನು ಖಂಡಿಸಿ ಮನವಿ ಸಲ್ಲಿಸಿದರು. ಬಳಿಕ ಕಚೇರಿ ಆವರಣದಲ್ಲಿ ಮಾತನಾಡಿದ ಮುಖಂಡರು, ಮುಂಗಾರು ಹಂಗಾಮು ಆರಂಭಕ್ಕೂ ಮುನ್ನವೇ ಅಗತ್ಯವಾದ ಕೃಷಿ ಸಂಪನ್ಮೂಲಗಳಾದ ಬೀಜ, ರಸಗೊಬ್ಬರ ಮತ್ತು ಡೀಸೆಲ್ ಸಮರ್ಪಕವಾಗಿ ದಾಸ್ತಾನು ಮಾಡಬೇಕಾಗಿತ್ತು. ಆದರೆ ಅದರಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಸ್ಪಷ್ಟವಾಗಿ ಕಂಡುಬರುತ್ತಿದೆ ಎಂದು ಆರೋಪಿಸಿದರು.

ರೈತ ಸಂಘದ ಮುಖಂಡ ಶಿವಲಿಂಗಪ್ಪ ಬೋಪಳಾಪೂರ ಮಾತನಾಡಿ, ಈ ವರ್ಷ ರೋಹಿಣಿ ಮಳೆಯ ಅವಧಿ ಮುಗಿದರೂ ನಿರೀಕ್ಷಿತ ಮಟ್ಟದಲ್ಲಿ ಸರಬರಾಜು ವ್ಯವಸ್ಥೆ ರೂಪುಗೊಂಡಿಲ್ಲ. ಪರಿಣಾಮವಾಗಿ ಬಿತ್ತನೆ ಕಾರ್ಯದಲ್ಲಿ ವಿಳಂಬವಾಗಿದ್ದು, ಹಲವೆಡೆ ರೈತರು ಹೊಲಕ್ಕೆ ಬೀಜ ಹಾಕಲು ಸಾಧ್ಯವಾಗದೇ ಆತಂಕದಲ್ಲಿದ್ದಾರೆ ಎಂದು ಹೇಳಿದರು.

“ಬಿತ್ತನೆ ಸಮಯದಲ್ಲೇ ಬೀಜ, ಗೊಬ್ಬರ ಹಾಗೂ ಡೀಸೆಲ್ ಕೊರತೆ ಎದುರಾದರೆ ಅದು ಕೇವಲ ರೈತರ ಸಮಸ್ಯೆಯಲ್ಲ. ಮುಂದಿನ ದಿನಗಳಲ್ಲಿ ದೇಶದ ಆಹಾರ ಉತ್ಪಾದನೆ ಮೇಲೆಯೇ ನೇರ ಪರಿಣಾಮ ಬೀರುವ ಅಪಾಯವಿದೆ. ಸರ್ಕಾರ ತಕ್ಷಣ ಎಚ್ಚೆತ್ತುಕೊಂಡು ಅಗತ್ಯ ಕ್ರಮ ಕೈಗೊಳ್ಳಬೇಕು,” ಎಂದು ಆಗ್ರಹಿಸಿದರು.

ಯಾಂತ್ರೀಕೃತ ಕೃಷಿಗೆ ಹೊಡೆತ:

ಇಂದಿನ ಕೃಷಿ ಸಂಪೂರ್ಣವಾಗಿ ಯಾಂತ್ರೀಕೃತವಾಗುತ್ತಿರುವ ಹಿನ್ನೆಲೆಯಲ್ಲಿ ಟ್ರ್ಯಾಕ್ಟರ್, ಪಂಪ್ಸೆಟ್ ಸೇರಿದಂತೆ ಕೃಷಿ ಯಂತ್ರೋಪಕರಣಗಳ ಬಳಕೆ ಹೆಚ್ಚಾಗಿದೆ. ಇಂತಹ ಸಂದರ್ಭದಲ್ಲಿ ಡೀಸೆಲ್ ಕೊರತೆ ಗಂಭೀರ ಸಮಸ್ಯೆಯಾಗಿದ್ದು, ಕೃಷಿ ಕಾರ್ಯಗಳು ಸ್ಥಗಿತಗೊಳ್ಳುವ ಹಂತಕ್ಕೆ ತಲುಪಿವೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

ಕೆಲವು ಪ್ರದೇಶಗಳಲ್ಲಿ ಡೀಸೆಲ್ ಪಡೆಯಲು ಟ್ರ್ಯಾಕ್ಟರ್ ಅನ್ನು ನೇರವಾಗಿ ಪೆಟ್ರೋಲ್ ಬಂಕ್ಗೆ ತರಬೇಕು ಎಂಬ ನಿಯಮಗಳನ್ನು ಅನೌಪಚಾರಿಕವಾಗಿ ಜಾರಿಗೊಳಿಸಿರುವುದರಿಂದ ರೈತರಿಗೆ ಹೆಚ್ಚುವರಿ ಆರ್ಥಿಕ ಹೊರೆ ಉಂಟಾಗುತ್ತಿದೆ. ಗ್ರಾಮಗಳಿಂದ ಟ್ರ್ಯಾಕ್ಟರ್ಗಳನ್ನು ಕೊಂಡೊಯ್ಯುವುದು, ಇಂಧನ ಖರೀದಿ ಪ್ರಕ್ರಿಯೆ ಹಾಗೂ ಸಮಯ ವ್ಯಯ ಸೇರಿ ರೈತರ ದಿನನಿತ್ಯದ ಕೃಷಿ ಚಟುವಟಿಕೆಗೆ ಅಡ್ಡಿಯಾಗುತ್ತಿದೆ ಎಂದು ಮುಖಂಡರು ಹೇಳಿದರು.

ಪೆಟ್ರೋಲ್ ಬಂಕ್ಗಳ ಕ್ರಮದ ವಿರುದ್ಧ ಅಸಮಾಧಾನ

ತಾಲೂಕು ರೈತ ಸಂಘದ ಅಧ್ಯಕ್ಷ ಸಂಗಣ್ಣ ಪವಾಡಶೆಟ್ಟಿ ಮಾತನಾಡಿ, ಕೆಲವು ಪೆಟ್ರೋಲ್ ಬಂಕ್ಗಳಲ್ಲಿ ರೈತರು ಕ್ಯಾನ್ನಲ್ಲಿ ಡೀಸೆಲ್ ತೆಗೆದುಕೊಂಡು ಹೋಗಲು ಅವಕಾಶ ನೀಡದೇ ಇರುವುದರಿಂದ ಸಮಸ್ಯೆ ಇನ್ನಷ್ಟು ಗಂಭೀರವಾಗಿದೆ ಎಂದು ಹೇಳಿದರು.

“ಹಳ್ಳಿಗಳಿಂದ ಟ್ರ್ಯಾಕ್ಟರ್ಗಳನ್ನು ನಗರ ಅಥವಾ ಬಂಕ್ಗಳವರೆಗೆ ತಂದು ಡೀಸೆಲ್ ತುಂಬಿಸಿಕೊಳ್ಳುವುದು ರೈತರಿಗೆ ಅನಗತ್ಯ ವೆಚ್ಚವನ್ನುಂಟುಮಾಡುತ್ತಿದೆ. ಇಂಧನ ವಿತರಣೆಯಲ್ಲಿ ಸ್ಪಷ್ಟ ಮಾರ್ಗಸೂಚಿ ಇಲ್ಲದಿರುವುದು ಅಧಿಕಾರಿಗಳ ನಿರ್ಲಕ್ಷ್ಯವನ್ನು ತೋರಿಸುತ್ತದೆ. ಸರ್ಕಾರ ತಕ್ಷಣ ರೈತಪರ ನಿರ್ಧಾರ ಕೈಗೊಳ್ಳಬೇಕು,” ಎಂದು ಒತ್ತಾಯಿಸಿದರು.

ಗೊಬ್ಬರ ದರ ಏರಿಕೆ ಮತ್ತು ಕೃತಕ ಅಭಾವ

ಮೇಘರಾಜ ಭಾವಿ ಮಾತನಾಡಿ, ತಾಲೂಕಿನ ಹಲವು ಗೊಬ್ಬರ ಮಾರಾಟ ಕೇಂದ್ರಗಳಲ್ಲಿ ನಿಗದಿತ ದರಕ್ಕಿಂತ ಹೆಚ್ಚಿನ ಬೆಲೆಯಲ್ಲಿ ಗೊಬ್ಬರ ಮಾರಾಟ ನಡೆಯುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿವೆ ಎಂದು ತಿಳಿಸಿದರು.

ಅವರು ಹೇಳಿದರು:

ಗೊಬ್ಬರ ಅಂಗಡಿಗಳಲ್ಲಿ ದರಪಟ್ಟಿ ಕಡ್ಡಾಯವಾಗಿ ಪ್ರದರ್ಶಿಸಬೇಕು. ಜೊತೆಗೆ ಸರ್ಕಾರದಿಂದ ನಿಗದಿಪಡಿಸಿದ ದರಕ್ಕಿಂತ ಹೆಚ್ಚು ಹಣ ವಸೂಲಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಕೆಲವರು ಕೃತಕ ಅಭಾವ ಸೃಷ್ಟಿಸಿ ಲಾಭ ಪಡೆಯುತ್ತಿರುವುದು ರೈತ ವಿರೋಧಿ ಚಟುವಟಿಕೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಮುಂಗಾರು ಆರಂಭದಲ್ಲೇ ಕಾಣಿಸಿಕೊಂಡಿರುವ ಈ ತ್ರಿವಳಿ ಸಂಕಷ್ಟದಿಂದ ರೈತ ಸಮುದಾಯ ಕಂಗೆಟ್ಟಿದ್ದು, ತಕ್ಷಣ ಸರ್ಕಾರ ಮಧ್ಯಪ್ರವೇಶಿಸಿ ಸಮಸ್ಯೆ ಪರಿಹರಿಸಬೇಕು ಎಂಬ ಒತ್ತಾಯ ಜೋರಾಗುತ್ತಿದೆ. ಇಲ್ಲದಿದ್ದರೆ ಕೃಷಿ ಹಂಗಾಮು ಗಂಭೀರ ಸಂಕಷ್ಟಕ್ಕೆ ಸಿಲುಕುವ ಆತಂಕ ವ್ಯಕ್ತವಾಗುತ್ತಿದೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande