
ವಿಜಯಪುರ, 09 ಜೂನ್ (ಹಿ.ಸ.) :
ಆಂಕರ್ : ಸುಮಾರು 106 ದಿನಗಳ ನಿರಂತರ ಧರಣಿ, ವಿವಿಧ ರೀತಿಯ ಹೋರಾಟಗಳು ಹಾಗೂ 14 ದಿನಗಳ ಜೈಲು ವಾಸದ ಬಳಿಕ ವಿಜಯಪುರ ಜಿಲ್ಲೆಯ ಜನರ ಬಹುಕಾಲದ ಕನಸಾದ ಸಂಪೂರ್ಣ ಸರ್ಕಾರಿ ಒಡೆತನದ ವೈದ್ಯಕೀಯ ಕಾಲೇಜು ಸ್ಥಾಪನೆಯ ಕನಸು ನನಸಾಗುವತ್ತ ಮಹತ್ವದ ಹೆಜ್ಜೆ ಇಡಲಾಗಿದೆ ಎಂದು ಹೊರಟಗಾರ ಅನೀಲ್ ಹೊಸಮನಿ ಸಂತಸ ವ್ಯಕ್ತಪಡಿಸಿದ್ದಾರೆ.
ರಾಜ್ಯ ಸರ್ಕಾರ ವೈದ್ಯಕೀಯ ಶಿಕ್ಷಣ ಇಲಾಖೆಯ ಮೂಲಕ ವಿಜಯಪುರದಲ್ಲಿ ಸರಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಅಗತ್ಯ ಪ್ರಕ್ರಿಯೆ ಆರಂಭಿಸಲು ವಿಶೇಷಾಧಿಕಾರಿಯನ್ನು ನೇಮಕ ಮಾಡಿರುವುದು ಹೋರಾಟಗಾರರು ಮತ್ತು ಜಿಲ್ಲೆಯ ಜನರಲ್ಲಿ ಹೊಸ ಭರವಸೆ ಮೂಡಿಸಿದೆ.
ವಿಜಯಪುರದಲ್ಲಿ ಖಾಸಗಿ ಸಹಭಾಗಿತ್ವದ ವೈದ್ಯಕೀಯ ಕಾಲೇಜು ಸ್ಥಾಪನೆಗೆ ವಿರೋಧ ವ್ಯಕ್ತಪಡಿಸಿ, ಸಂಪೂರ್ಣ ಸರ್ಕಾರಿ ಒಡೆತನದ ಮೆಡಿಕಲ್ ಕಾಲೇಜು ಸ್ಥಾಪಿಸಬೇಕೆಂಬ ಬೇಡಿಕೆಯೊಂದಿಗೆ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಆರಂಭಗೊಂಡಿದ್ದ ಧರಣಿ ರಾಜ್ಯದ ಗಮನ ಸೆಳೆದಿತ್ತು.
ಹೋರಾಟಗಾರರು ವಿವಿಧ ವಿನೂತನ ಪ್ರತಿಭಟನೆಗಳ ಮೂಲಕ ತಮ್ಮ ಬೇಡಿಕೆಯನ್ನು ಸರ್ಕಾರದ ಮುಂದಿಟ್ಟಿದ್ದರು. ಆದರೆ ಹೋರಾಟದ ಸಂದರ್ಭದಲ್ಲಿ ಹಲವು ಸವಾಲುಗಳು ಎದುರಾದವು. ಕೆಲ ಹೋರಾಟಗಾರರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಆರು ಜನರನ್ನು 14 ದಿನಗಳ ಕಾಲ ಕಾರಾಗೃಹಕ್ಕೆ ಕಳುಹಿಸಲಾಗಿತ್ತು.
ಹೋರಾಟವನ್ನು ಹತ್ತಿಕ್ಕುವ ಪ್ರಯತ್ನಗಳು ನಡೆದಿದ್ದರೂ, ಜಿಲ್ಲೆಯ ಜನರು ತಮ್ಮ ಬೇಡಿಕೆಯಿಂದ ಹಿಂದೆ ಸರಿಯಲಿಲ್ಲ. ಜನರ ಒಗ್ಗಟ್ಟು ಮತ್ತು ನಿರಂತರ ಹೋರಾಟದಿಂದ ವಿಷಯವು ರಾಜ್ಯ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಯಿತು.
ಈ ಹೋರಾಟದ ಪರಿಣಾಮವಾಗಿ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಜಯಪುರ ಭೇಟಿಯ ಸಂದರ್ಭದಲ್ಲಿ ಸರ್ಕಾರದಿಂದಲೇ ವೈದ್ಯಕೀಯ ಕಾಲೇಜು ಸ್ಥಾಪಿಸುವ ಭರವಸೆ ನೀಡಿದ್ದರು. ಬಳಿಕ ರಾಜ್ಯ ಬಜೆಟ್ನಲ್ಲಿಯೂ ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ಕುರಿತ ಪ್ರಸ್ತಾಪ ಮಾಡಲಾಗಿತ್ತು. ಆದರೆ ಅದರ ನಂತರ ಯಾವುದೇ ಸ್ಪಷ್ಟ ಪ್ರಗತಿ ಕಾಣದ ಹಿನ್ನೆಲೆಯಲ್ಲಿ ಹೋರಾಟ ಸಮಿತಿಯ ಸದಸ್ಯರಲ್ಲಿ ಆತಂಕ ಮೂಡಿತ್ತು.
ಇತ್ತೀಚೆಗೆ ಹೋರಾಟ ಸಮಿತಿಯ ಪ್ರಮುಖರು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಯೋಜನೆಯ ಪ್ರಗತಿ ಕುರಿತು ಚರ್ಚೆ ನಡೆಸಿ, ಶೀಘ್ರದಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು. ಈ ಬೆಳವಣಿಗೆಯ ಬೆನ್ನಲ್ಲೇ ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ದೇಶನಾಲಯ ಮಹತ್ವದ ಆದೇಶ ಹೊರಡಿಸಿದ್ದು, ವಿಜಯಪುರ, ಕೋಲಾರ, ಪುತ್ತೂರುಗಳಲ್ಲಿ ಆರಂಭಗೊಳ್ಳಲಿರುವ ಸರ್ಕಾರಿ ವೈದ್ಯಕೀಯ ಕಾಲೇಜುಗಳ ಸ್ಥಾಪನೆಗೆ ಪ್ರಕ್ರಿಯೆ ಆರಂಭಿಸುವಂತೆ ವಿಶೇಷಾಧಿಕಾರಿಗಳನ್ನು ನೇಮಕ ಮಾಡಿದೆ.
ವಿಜಯಪುರದ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಸಂಬಂಧಿಸಿದಂತೆ ಡಾ. ರಾಜಶೇಖರ ದ್ಯಾಬೇರಿ ಅವರನ್ನು ವಿಶೇಷಾಧಿಕಾರಿಯಾಗಿ ನೇಮಕ ಮಾಡಲಾಗಿದೆ. ಅವರು ರಾಷ್ಟ್ರೀಯ ವೈದ್ಯಕೀಯ ಆಯೋಗ (NMC) ಜತೆ ಸಮನ್ವಯ ಸಾಧಿಸಿ, ಭೂಮಿ, ಕಟ್ಟಡ, ಬೋಧನಾ ಆಸ್ಪತ್ರೆ, ವೈದ್ಯಕೀಯ ಉಪಕರಣಗಳು, ಮಾನವ ಸಂಪನ್ಮೂಲ ಸೇರಿದಂತೆ ಅಗತ್ಯ ಮೂಲಸೌಕರ್ಯಗಳ ಕುರಿತ ಸಮಗ್ರ ಪ್ರಸ್ತಾವನೆ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲಿದ್ದಾರೆ.
ಈ ನಿರ್ಧಾರದಿಂದ ವಿಜಯಪುರ ಜಿಲ್ಲೆಯಲ್ಲಿ ವೈದ್ಯಕೀಯ ಶಿಕ್ಷಣ ಕ್ಷೇತ್ರಕ್ಕೆ ಹೊಸ ದಿಕ್ಕು ದೊರೆಯಲಿದ್ದು, ಸ್ಥಳೀಯ ವಿದ್ಯಾರ್ಥಿಗಳಿಗೆ ಉತ್ತಮ ವೈದ್ಯಕೀಯ ಶಿಕ್ಷಣದ ಅವಕಾಶ ಸಿಗುವ ನಿರೀಕ್ಷೆ ಮೂಡಿದೆ. ಜೊತೆಗೆ ಜಿಲ್ಲೆಯ ಆರೋಗ್ಯ ಸೇವೆಗಳ ಗುಣಮಟ್ಟ ಹೆಚ್ಚಲು ಸಹಕಾರಿಯಾಗಲಿದೆ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.
ಹೋರಾಟ ಸಮಿತಿಯ ಸದಸ್ಯರು ಹಾಗೂ ಸಾರ್ವಜನಿಕರು ಸರ್ಕಾರದ ಈ ಕ್ರಮವನ್ನು ಸ್ವಾಗತಿಸಿದ್ದು, ದೀರ್ಘಕಾಲದ ಜನಾಂದೋಲನಕ್ಕೆ ಸಿಕ್ಕ ಮಹತ್ವದ ಜಯ ಎಂದು ಬಣ್ಣಿಸಿದ್ದಾರೆ. ಹೋರಾಟ ಯಶಸ್ವಿಯಾಗಲು ಬೆಂಬಲ ನೀಡಿದ ಮಾಧ್ಯಮ ಪ್ರತಿನಿಧಿಗಳು, ಸಾಮಾಜಿಕ ಸಂಘಟನೆಗಳು ಮತ್ತು ಜಿಲ್ಲೆಯ ಜನತೆಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / jyothi deshpande