ಬೀಜ-ಗೊಬ್ಬರ ಸಮರ್ಪಕವಾಗಿ ಪೂರೈಕೆ ಮಾಡಿ : ಬಸವರಾಜ ಬೊಮ್ಮಾಯಿ
ಗದಗ, 09 ಜೂನ್ (ಹಿ.ಸ.) : ಆ್ಯಂಕರ್ : ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಭಾಗಿತ್ವದ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಮೂಲಕ ಜನಸಾಮಾನ್ಯರಿಗೆ ತಲುಪಿಸುವ ಜವಾಬ್ದಾರಿ ಅಧಿಕಾರಿಗಳ ಮೇಲಿದೆ. ಅಧಿಕಾರಿಗಳು ಸ್ಪಷ್ಟ ಗುರಿ, ಬದ್ಧತೆ ಹಾಗೂ ಮಾನವೀಯ ದೃಷ್ಟಿಕೋನದೊಂದಿಗೆ ಕಾರ್ಯನಿರ್ವಹಿಸಬೇಕು ಎಂದ
ಫೋಟೋ


ಗದಗ, 09 ಜೂನ್ (ಹಿ.ಸ.) :

ಆ್ಯಂಕರ್ : ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಭಾಗಿತ್ವದ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಮೂಲಕ ಜನಸಾಮಾನ್ಯರಿಗೆ ತಲುಪಿಸುವ ಜವಾಬ್ದಾರಿ ಅಧಿಕಾರಿಗಳ ಮೇಲಿದೆ. ಅಧಿಕಾರಿಗಳು ಸ್ಪಷ್ಟ ಗುರಿ, ಬದ್ಧತೆ ಹಾಗೂ ಮಾನವೀಯ ದೃಷ್ಟಿಕೋನದೊಂದಿಗೆ ಕಾರ್ಯನಿರ್ವಹಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಗದಗ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ನಡೆದ ಕೇಂದ್ರ ಪುರಸ್ಕೃತ ಯೋಜನೆಗಳ ಜಿಲ್ಲಾ ಅಭಿವೃದ್ಧಿ ಮತ್ತು ಉಸ್ತುವಾರಿ ಸಮಿತಿಯ (ದಿಶಾ) ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ಕಾರದ ಮುಖವಾಗಿ ಆಡಳಿತ ವ್ಯವಸ್ಥೆ ಕಾರ್ಯನಿರ್ವಹಿಸುತ್ತಿದ್ದು, ಜನರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ಅಧಿಕಾರಿಗಳು ಹೆಚ್ಚು ಹೊಣೆಗಾರಿಕೆ ಪ್ರದರ್ಶಿಸಬೇಕು ಎಂದರು.

ಪ್ರಸ್ತುತ ಜಾಗತಿಕ ಪರಿಸ್ಥಿತಿಯಲ್ಲಿ ಯುದ್ಧ ಸೇರಿದಂತೆ ಹಲವು ಬೆಳವಣಿಗೆಗಳು ದೇಶದ ಆರ್ಥಿಕತೆ ಮತ್ತು ಜನಜೀವನದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ. ಇಂತಹ ಸಂದರ್ಭಗಳಲ್ಲಿ ಜನರಿಗೆ ಸರ್ಕಾರ ತಮ್ಮೊಂದಿಗಿದೆ ಎಂಬ ಭರವಸೆ ಮೂಡಿಸುವ ಕೆಲಸವನ್ನು ಆಡಳಿತ ವ್ಯವಸ್ಥೆ ಮಾಡಬೇಕು.

ಅಧಿಕಾರಿಗಳಲ್ಲಿ ಧನಾತ್ಮಕ ಚಿಂತನೆ ಮತ್ತು ಸೇವಾ ಮನೋಭಾವ ಇರಬೇಕು. ಆಳ್ವಿಕೆ ಮಾಡುವವರು ಆಡಳಿತ ಮಾಡಲು ಹೊರಟಿದ್ದಾರೆ, ಆಡಳಿತ ಮಾಡುವವರು ಆಳ್ವಿಕೆ ಮಾಡಲು ಹೊರಟಿದ್ದಾರೆ. ಇದು ಸರಿಯಾದ ಕ್ರಮವಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಗದಗ-ಬೆಟಗೇರಿ ಅವಳಿ ನಗರದ ಕುಡಿಯುವ ನೀರಿನ ಸಮಸ್ಯೆಯನ್ನು ಪ್ರಸ್ತಾಪಿಸಿದ ಬೊಮ್ಮಾಯಿ, ಮುಖ್ಯ ನೀರು ಸರಬರಾಜು ಪೈಪ್ಗಳಿಗೆ ಅಳವಡಿಸಲಾಗಿರುವ ಅಕ್ರಮ ಸಂಪರ್ಕಗಳನ್ನು ತೆರವುಗೊಳಿಸುವಂತೆ ಹಿಂದಿನ ಸಭೆಯಲ್ಲಿಯೇ ಸೂಚನೆ ನೀಡಲಾಗಿತ್ತು. ಆದರೆ ಇದುವರೆಗೆ ಕ್ರಮ ಕೈಗೊಳ್ಳದಿರುವುದು ಅಧಿಕಾರಿಗಳ ನಿರ್ಲಕ್ಷ್ಯವನ್ನು ತೋರಿಸುತ್ತದೆ ಎಂದು ಬೊಮ್ಮಾಯಿ ಹೇಳಿದರು.

ಅಧಿಕಾರಿಗಳಲ್ಲಿ ಜನರಿಗೆ ನೀರು ಪೂರೈಸುವ ಬದ್ಧತೆ ಇರಬೇಕು. ಹಾವೇರಿ ಜಿಲ್ಲೆಯಲ್ಲಿಯೂ ಇದೇ ರೀತಿಯ ಸಮಸ್ಯೆ ಇತ್ತು. ಆದರೆ ಸಮರ್ಪಕ ಕ್ರಮಗಳಿಂದ ವಾರಕ್ಕೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ. ಅದೇ ರೀತಿಯ ವ್ಯವಸ್ಥೆಯನ್ನು ಗದಗದಲ್ಲಿಯೂ ಜಾರಿಗೆ ತರಬೇಕು ಎಂದು ಸೂಚಿಸಿದರು.

ಅವಳಿ ನಗರ ಸೇರಿದಂತೆ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ನೀರು ಪೂರೈಕೆಯಲ್ಲಿ ಉಂಟಾಗುತ್ತಿರುವ ವ್ಯತ್ಯಯದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, ನಮ್ಮ ಸಹನೆಯನ್ನು ಪರೀಕ್ಷಿಸಬೇಡಿ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಗದುಗಿನ ನೀರಿನ ಗ್ರಹಣ ಪ್ರದೇಶ ಹೂಳಿನಿಂದ ತುಂಬಿರುವ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದರು.

ಸಭೆಗಳಿಗೆ ಅಧಿಕಾರಿಗಳು ಸಂಪೂರ್ಣ ಮಾಹಿತಿಯೊಂದಿಗೆ ಹಾಜರಾಗಬೇಕು. ಕೈ ಬೀಸಿಕೊಂಡು ಬರುವ ಪ್ರವೃತ್ತಿ ಬಿಡಬೇಕು. ಇಲಾಖೆಯ ಯೋಜನೆಗಳು, ಅನುದಾನ ಬಳಕೆ, ಪ್ರಗತಿ ಹಾಗೂ ಸಮಸ್ಯೆಗಳ ಬಗ್ಗೆ ಸಮಗ್ರ ಮಾಹಿತಿ ಹೊಂದಿರಬೇಕು. ಅಧಿಕಾರಿಗಳಲ್ಲಿ ಗುಣಾತ್ಮಕ ಬದಲಾವಣೆ ಅಗತ್ಯವಿದ್ದು, ಕಾರ್ಯಕ್ಷಮತೆ ಮತ್ತು ಉತ್ತರದಾಯಿತ್ವ ಹೆಚ್ಚಬೇಕು ಎಂದು ಸಂಸದರು ಹೇಳಿದರು.

ಅಮೃತ್ 2.0, ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಸೇರಿದಂತೆ ವಿವಿಧ ಕೇಂದ್ರ ಸರ್ಕಾರಗಳ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದ ಅವರು, ಯೋಜನೆಗಳ ಅನುಷ್ಠಾನಕ್ಕೆ ಕೇವಲ ಅನುದಾನ ಇದ್ದರಷ್ಟೆ ಸಾಕಾಗುವುದಿಲ್ಲ. ಕೆಲಸ ಮಾಡುವ ಮನಸ್ಸು ಹಾಗೂ ಸಮಾಜದ ಬಗ್ಗೆ ಕಾಳಜಿ ಇರಬೇಕು ಎಂದರು.

ಶಿಕ್ಷಣ, ಆರೋಗ್ಯ, ವಸತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಕಾರ್ಯಕ್ರಮಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಯೋಜನೆಗಳ ಲಾಭ ಜಿಲ್ಲೆಯ ಬಡವರು, ರೈತರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ಜನರಿಗೆ ತಲುಪುವಂತೆ ನೋಡಿಕೊಳ್ಳಬೇಕು ಎಂದು ಬಸವರಾಜ ಬೊಮ್ಮಾಯಿ ಸೂಚಿಸಿದರು.

ಆಧುನಿಕ ತಂತ್ರಜ್ಞಾನ ಬಳಕೆಯಾಗುತ್ತಿದ್ದರೂ ಸಾರ್ವಜನಿಕರು ಸರ್ಕಾರಿ ಕಚೇರಿಗಳು ಮತ್ತು ಆಸ್ಪತ್ರೆಗಳಿಗೆ ಅಲೆದಾಡುವ ಪರಿಸ್ಥಿತಿ ಮುಂದುವರಿದಿರುವುದು ವಿಷಾದನೀಯ. ಜನರ ಕೆಲಸಗಳು ತ್ವರಿತವಾಗಿ ಆಗುವಂತೆ ಆಡಳಿತ ವ್ಯವಸ್ಥೆ ರೂಪುಗೊಳ್ಳಬೇಕು ಎಂದರು.

ಮುಂಗಾರು ಹಂಗಾಮು ಆರಂಭವಾಗಿರುವ ಹಿನ್ನೆಲೆಯಲ್ಲಿ ರೈತರಿಗೆ ಯಾವುದೇ ಕಾರಣಕ್ಕೂ ಬೀಜ ಹಾಗೂ ರಸಗೊಬ್ಬರ ಕೊರತೆಯಾಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಕೃಷಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ ಅವರು, ಗದಗ ಜಿಲ್ಲೆ ಕೃಷಿ ಪ್ರಧಾನ ಜಿಲ್ಲೆಯಾಗಿದ್ದು, ರೈತರಿಗೆ ಗುಣಮಟ್ಟದ ಬೀಜ ಹಾಗೂ ಅಗತ್ಯ ಪ್ರಮಾಣದ ಗೊಬ್ಬರವನ್ನು ಸಮಯಕ್ಕೆ ಸರಿಯಾಗಿ ಪೂರೈಸಬೇಕು ಎಂದರು.

ಡಿಎಪಿ ಹಾಗೂ ಯೂರಿಯಾ ಗೊಬ್ಬರಗಳಿಗೆ ಹೆಚ್ಚಿನ ಬೇಡಿಕೆ ಬರಬಹುದಾದ್ದರಿಂದ ಸರಬರಾಜು ವ್ಯವಸ್ಥೆಯಲ್ಲಿ ಯಾವುದೇ ಗೊಂದಲ ಉಂಟಾಗದಂತೆ ಕ್ರಮ ಕೈಗೊಳ್ಳಬೇಕು. ಬೇಡಿಕೆಗೆ ಅನುಗುಣವಾಗಿ ಸಹಕಾರ ಸಂಘಗಳಿಗೆ ಗೊಬ್ಬರ ಹಂಚಿಕೆ ಮಾಡಬೇಕು. ಡೀಲರ್ಗಳು ಅನಗತ್ಯವಾಗಿ ಗೊಬ್ಬರ ದಾಸ್ತಾನು ಮಾಡಿ ಕಾಳಸಂತೆ ಸೃಷ್ಟಿಸದಂತೆ ನಿಗಾ ವಹಿಸಬೇಕು ಎಂದು ಅಧಿಕಾರಿಗಳಿಗೆ ಬೊಮ್ಮಾಯಿ ಅವರು ಸೂಚಿಸಿದರು.

ಜಿಲ್ಲೆಯ ಅಭಿವೃದ್ಧಿಗೆ ಎಲ್ಲ ಇಲಾಖೆಗಳ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಕೋವಿಡ್ ಸಂದರ್ಭದಲ್ಲಿ ತೋರಿದ ಬದ್ಧತೆ ಮತ್ತು ಸಮರ್ಪಣೆಯೊಂದಿಗೆ ಈಗಲೂ ಕೆಲಸ ಮಾಡಬೇಕು. ಯೋಜನೆಗಳ ಅನುಷ್ಠಾನದಲ್ಲಿ ಯಾವುದೇ ಸಮಸ್ಯೆಗಳಿದ್ದರೆ ವಿಳಂಬ ಮಾಡದೆ ತಮ್ಮ ಗಮನಕ್ಕೆ ತರಬೇಕು. ಅವುಗಳನ್ನು ಪರಿಹರಿಸಿ ಯೋಜನೆಗಳ ಯಶಸ್ವಿ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಸಭೆಯಲ್ಲಿ ಶಾಸಕ ಸಿ.ಸಿ. ಪಾಟೀಲ ಹಾಗೂ ಶಾಸಕ ಎಸ್.ವಿ. ಸಂಕನೂರ ಅವರು ಗದಗ-ಬೆಟಗೇರಿ ಅವಳಿ ನಗರದ ಕುಡಿಯುವ ನೀರಿನ ಸಮಸ್ಯೆ ಕುರಿತು ಸುದೀರ್ಘ ಚರ್ಚೆ ನಡೆಸಿ ಶಾಶ್ವತ ಪರಿಹಾರಕ್ಕೆ ಒತ್ತಾಯಿಸಿದರು.

ಶಾಸಕ ಡಾ. ಚಂದ್ರು ಲಮಾಣಿ ಅವರು ಲಕ್ಷ್ಮೇಶ್ವರ, ಮುಂಡರಗಿ ಹಾಗೂ ಶಿರಹಟ್ಟಿ ಭಾಗಗಳ ನಗರ ಮತ್ತು ಗ್ರಾಮೀಣ ಕುಡಿಯುವ ನೀರಿನ ಸಮಸ್ಯೆಯನ್ನು ಸಭೆಯ ಗಮನಕ್ಕೆ ತಂದು ಶೀಘ್ರ ಪರಿಹಾರಕ್ಕೆ ಆಗ್ರಹಿಸಿದರು.

ಸಭೆಯಲ್ಲಿ ತೋಟಗಾರಿಕೆ, ಕೈಗಾರಿಕೆ, ಆರೋಗ್ಯ, ಪಶು ಸಂಗೋಪನೆ, ಹೆಸ್ಕಾಂ, ವಿಕಲಚೇತನರ ಕಲ್ಯಾಣ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು.

ಸಭೆಯಲ್ಲಿ ಅಧಿಕಾರಿಗಳು ಈ ಮುಂದಿನಂತೆ ಮಾಹಿತಿ ವದಸಿದರು. ಗದಗ ಜಿಲ್ಲೆಯಲ್ಲಿ 2026-27ನೇ ಸಾಲಿನ ರಾಷ್ಟ್ರೀಯ ಸಾಮಾಜಿಕ ಸಹಾಯ ಕಾರ್ಯಕ್ರಮ (NSAP) ಅಡಿಯಲ್ಲಿ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳ ಮೂಲಕ ಒಟ್ಟು 1,16,953 ಫಲಾನುಭವಿಗಳನ್ನು ಗುರುತಿಸಲಾಗಿದ್ದು, ಅವರಿಗೆ ಡಿಬಿಟಿ (Direct Benefit Transfer) ಮೂಲಕ ಮಾಸಿಕ ಪಿಂಚಣಿ ವಿತರಿಸಲಾಗುತ್ತಿದೆ.

ಮೇ 31, 2026ರ ಅಂತ್ಯದ ಮಾಹಿತಿಯಂತೆ ವೃದ್ಧಾಪ್ಯ ವೇತನ ಯೋಜನೆಯಡಿ 51,011, ವಿಧವಾ ವೇತನ ಯೋಜನೆಯಡಿ 40,572 ಹಾಗೂ ಅಂಗವಿಕಲ ವೇತನ ಯೋಜನೆಯಡಿ 25,370 ಫಲಾನುಭವಿಗಳು ಪಿಂಚಣಿ ಪಡೆಯುತ್ತಿದ್ದಾರೆ.

ಪಿಂಚಣಿ ಯೋಜನೆಗಳಡಿ ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನ (60 ರಿಂದ 64 ವರ್ಷದವರೆಗೆ ) ಯೋಜನೆಯ 12,835 ಫಲಾನುಭವಿಗಳಿಗೆ ತಿಂಗಳಿಗೆ ₹600, ಇಂದಿರಾ ಗಾಂಧಿ ರಾಷ್ಟ್ರೀಯ ವಿಧವಾ ವೇತನ (65 ರಿಂದ 80 ವರ್ಷದವರೆಗೆ ) ಯೋಜನೆಯ 37,874 ಫಲಾನುಭವಿಗಳಿಗೆ ₹1,200 ಹಾಗೂ ಇಂದಿರಾ ಗಾಂಧಿ ರಾಷ್ಟ್ರೀಯ ಅಂಗವಿಕಲ ವೇತನ (80 ವರ್ಷ ಮೇಲ್ಪಟ್ಟು ) ಯೋಜನೆಯ 302 ಫಲಾನುಭವಿಗಳಿಗೆ ₹1,200 ನೀಡಲಾಗುತ್ತಿದೆ. ಇದಲ್ಲದೆ ವಿಧವಾ ವೇತನ, ಅಂಗವಿಕಲ, ಸಂದ್ಯಾ ಸುರಕ್ಷಾ, ಮನಸ್ವಿನಿ ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 1,48,961 ಫಲಾನುಭವಿಗಳಿಗೆ ವಿವಿಧ ಪಿಂಚಣಿ ಯೋಜನೆಗಳ ಸೌಲಭ್ಯ ದೊರೆಯುತ್ತಿದ್ದು, ಪ್ರತಿಮಾಹೆ ಸುಮಾರು ₹15.34 ಕೋಟಿ ಪಿಂಚಣಿ ಮೊತ್ತವನ್ನು ಡಿಬಿಟಿ ಮೂಲಕ ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುತ್ತಿದೆ.

ಗದಗ ಜಿಲ್ಲೆಯ ರೈತರು ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ (PMFBY) ಅಡಿಯಲ್ಲಿ ಬೆಳೆ ವಿಮೆ ಮಾಡಿಸಿಕೊಳ್ಳುವಲ್ಲಿ ಮುಂಗಾರು-2025 ಹಂಗಾಮಿನಲ್ಲಿ ಜಿಲ್ಲೆಯ ಐದು ತಾಲೂಕುಗಳಲ್ಲಿ ಒಟ್ಟು 1,93,810 ರೈತರು ಬೆಳೆ ವಿಮೆ ಮಾಡಿಸಿಕೊಂಡಿದ್ದು, 2,25,976 ಹೆಕ್ಟೇರ್ ಪ್ರದೇಶ ವಿಮಾ ವ್ಯಾಪ್ತಿಗೆ ಒಳಪಟ್ಟಿದೆ. ಗದಗ ತಾಲೂಕಿನಲ್ಲಿ 50,483 ರೈತರು, ಶಿರಹಟ್ಟಿ ತಾಲೂಕಿನಲ್ಲಿ 47,785 ರೈತರು, ಮುಂಡರಗಿ ತಾಲೂಕಿನಲ್ಲಿ 25,685 ರೈತರು ಹಾಗೂ ನರಗುಂದ ತಾಲೂಕಿನಲ್ಲಿ 14,071 ರೈತರು ವಿಮೆ ಸೌಲಭ್ಯ ಪಡೆದಿದ್ದಾರೆ.

ಹಿಂಗಾರು-2025 ಹಂಗಾಮಿನಲ್ಲಿ ಒಟ್ಟು 91,438 ರೈತರು ಬೆಳೆ ವಿಮೆ ಮಾಡಿಸಿಕೊಂಡಿದ್ದಾರೆ. ಈ ಅವಧಿಯಲ್ಲಿ 1,14,793 ಹೆಕ್ಟೇರ್ ಪ್ರದೇಶ ವಿಮೆ ವ್ಯಾಪ್ತಿಗೆ ಸೇರಿದೆ. ರೋಣ ತಾಲೂಕಿನಲ್ಲಿ 31,475 ರೈತರು ಹಾಗೂ 39,069 ಹೆಕ್ಟೇರ್ ಪ್ರದೇಶದೊಂದಿಗೆ ಅಗ್ರಸ್ಥಾನದಲ್ಲಿದ್ದು, ಗದಗ ತಾಲೂಕಿನಲ್ಲಿ 27,825 ರೈತರು, ಶಿರಹಟ್ಟಿ ತಾಲೂಕಿನಲ್ಲಿ 14,343 ರೈತರು, ಮುಂಡರಗಿ ತಾಲೂಕಿನಲ್ಲಿ 12,484 ರೈತರು ಹಾಗೂ ನರಗುಂದ ತಾಲೂಕಿನಲ್ಲಿ 5,311 ರೈತರು ವಿಮೆ ಸೌಲಭ್ಯ ಪಡೆದುಕೊಂಡಿದ್ದಾರೆ.

ಗದಗ ಜಿಲ್ಲೆಯಲ್ಲಿ ಜಲ ಜೀವನ್ ಮಿಷನ್ ಯೋಜನೆಯಡಿ ಒಟ್ಟು 336 ಕಾಮಗಾರಿಗಳಿಗೆ 243.51 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಸರಾಸರಿ 70% ಗಿಂತ ಹೆಚ್ಚು ಆರ್ಥಿಕ ಪ್ರಗತಿ ಕಾಣಲಾಗಿದೆ. ಗದಗ ತಾಲ್ಲೂಕಿನಲ್ಲಿ 78.75% ಪ್ರಗತಿಯೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಮುಂಡರಗಿ (70.07%), ರೋಣ (73.48%) ಹಾಗೂ ಲಕ್ಷ್ಮೇಶ್ವರ (70.36%) ಸಾಧನೆ ಮಾಡಿವೆ. ಶಿರಹಟ್ಟಿ (60.24%) ಮತ್ತು ನರಗುಂದ (61.74%) ತಾಲ್ಲೂಕುಗಳಲ್ಲೂ ಪ್ರಗತಿ ಸಾಧಿಸಲಾಗಿದೆ.

ನರೇಗಾ ಯೋಜನೆಯಡಿ ಜಿಲ್ಲೆಯಲ್ಲಿ 2025-26ನೇ ಸಾಲಿನ ಮಾರ್ಚ್ ಅಂತ್ಯದ ವೇಳೆಗೆ ಒಟ್ಟು 1,69,504 ಜಾಬ್ ಕಾರ್ಡ್ ಹೊಂದಿರುವಲ್ಲಿ 32,203 ಕುಟುಂಬಗಳು ಕೆಲಸಕ್ಕೆ ಬೇಡಿಕೆ ಸಲ್ಲಿಸಿದ್ದು, 99.32% ಮಂದಿಗೆ ಕೆಲಸ ನೀಡಲಾಗಿದೆ.

ಸಭೆಯಲ್ಲಿ ಜಿಲ್ಲಾಧಿಕಾರಿ ಸಿ ಎನ್ ಶ್ರೀಧರ್, ಎಸ್ಪಿ ರೋಹನ್ ಜಗದೀಶ್, ಡಿಸಿಎಫ್ ಸಂತೋಷ ಕುಮಾರ, ಎಡಿಸಿ ಡಾ. ದುರಗೇಶ್ ಕೆ ಆರ್, ಜಿಪಂ ಡಿಎಸ್ ಸಿ ಆರ್ ಮುಂಡರಗಿ ಸೇರಿದಂತೆ ಜಿಲ್ಲಾಮಟ್ಟದ, ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande