
ಗದಗ, 09 ಜೂನ್ (ಹಿ.ಸ.) :
ಆ್ಯಂಕರ್ : ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಕೆಂಚಲಾಪುರ ಓಣಿ, ಭಜಂತ್ರಿ ಓಣಿ, ಬನಶಂಕರಿ ಬಡಾವಣೆ ಹಾಗೂ ಹಳ್ಳದಕೇರಿ ಭಾಗಗಳಿಗೆ ಹೊಂದಿಕೊಂಡಿರುವ ಲಂಡಿಹಳ್ಳದಲ್ಲಿ ಗಿಡಗಂಟಿಗಳು ಅತಿಯಾಗಿ ಬೆಳೆದು ನೀರಿನ ಸರಾಗ ಹರಿವಿಗೆ ತೀವ್ರ ಅಡಚಣೆ ಉಂಟಾಗಿರುವ ಹಿನ್ನೆಲೆಯಲ್ಲಿ ಸ್ಥಳೀಯ ನಿವಾಸಿಗಳ ದೀರ್ಘಕಾಲದ ಬೇಡಿಕೆ ಮತ್ತು ಅಸಮಾಧಾನಕ್ಕೆ ಪ್ರತಿಕ್ರಿಯೆಯಾಗಿ ಗದಗ ಜಿಲ್ಲಾ ಉಪವಿಭಾಗಾಧಿಕಾರಿ ಗಂಗಪ್ಪ ಎಂ ಸ್ಥಳಕ್ಕೆ ಭೇಟಿ ನೀಡಿ ಸಮಗ್ರ ಪರಿಶೀಲನೆ ನಡೆಸಿದರು.
ಮಳೆಗಾಲ ಆರಂಭವಾಗಿರುವ ಈ ಸಂದರ್ಭದಲ್ಲಿ ಹಳ್ಳದಲ್ಲಿ ನೀರು ಸರಾಗವಾಗಿ ಹರಿಯದ ಸ್ಥಿತಿ ಮುಂದುವರಿದರೆ ಜನವಸತಿ ಪ್ರದೇಶಗಳಿಗೆ ನೀರು ನುಗ್ಗುವ ಅಪಾಯ ಹೆಚ್ಚಿರುವುದನ್ನು ಗಮನಿಸಿದ ಅಧಿಕಾರಿಗಳು, ತಕ್ಷಣ ಕ್ರಮ ಕೈಗೊಳ್ಳುವಂತೆ ಸಂಬಂಧಿತ ಇಲಾಖೆಗೆ ಸ್ಪಷ್ಟ ನಿರ್ದೇಶನ ನೀಡಿದರು.
ಸ್ಥಳೀಯರ ಅಹವಾಲು ಸಮಸ್ಯೆಯ ಗಂಭೀರತೆ ಬಿಚ್ಚಿಟ್ಟ ನಿವಾಸಿಗಳು ಪರಿಶೀಲನೆ ವೇಳೆ ಸ್ಥಳೀಯ ನಿವಾಸಿಗಳು ಮಂಜುನಾಥ ಮಾಗಡಿ ಸೇರಿದಂತೆ ಹಲವರು ಅಧಿಕಾರಿಗಳ ಗಮನಕ್ಕೆ ಸಮಸ್ಯೆಯ ವಿವರಗಳನ್ನು ತಂದರು. ಹಳ್ಳದಲ್ಲಿ ವರ್ಷಗಳಿಂದ ಸ್ವಚ್ಛತಾ ಕಾರ್ಯ ಸರಿಯಾಗಿ ನಡೆಯದ ಕಾರಣ ಗಿಡಗಂಟಿಗಳು, ಕಸಕಡ್ಡಿ ಮತ್ತು ಮಣ್ಣು ತುಂಬಿಕೊಂಡು ನೀರಿನ ಹರಿವು ಅಡ್ಡಿಯಾಗಿರುವುದಾಗಿ ಅವರು ತಿಳಿಸಿದರು.
ಮಳೆಗಾಲದಲ್ಲಿ ಪ್ರತಿ ವರ್ಷವೂ ಈ ಭಾಗದ ಜನರು ನೀರು ನುಗ್ಗುವ ಭೀತಿ ಎದುರಿಸುತ್ತಿದ್ದು, ಮನೆಮಠಗಳಿಗೆ ಹಾನಿಯಾಗುವ ಸಾಧ್ಯತೆ ಹೆಚ್ಚಿರುವುದನ್ನು ಅವರು ಮನವಿ ಮೂಲಕ ವಿವರಿಸಿದರು.
ಉಪವಿಭಾಗಾಧಿಕಾರಿಗಳ ಸ್ಥಳ ಪರಿಶೀಲನೆ – ತಕ್ಷಣ ಕ್ರಮಕ್ಕೆ ಸೂಚನೆ
ಸ್ಥಳ ಪರಿಶೀಲನೆ ನಡೆಸಿದ ಗಂಗಪ್ಪ ಎಂ ಅವರು ಲಂಡಿಹಳ್ಳದ ವಿವಿಧ ಭಾಗಗಳನ್ನು ವೀಕ್ಷಿಸಿ, ನೀರಿನ ಹರಿವಿನ ತಡೆಗಳನ್ನೂ ಗಮನಿಸಿದರು. ನಂತರ ಅಧಿಕಾರಿಗಳೊಂದಿಗೆ ಚರ್ಚಿಸಿ ತುರ್ತು ಸ್ವಚ್ಛತಾ ಕಾರ್ಯ ಆರಂಭಿಸುವಂತೆ ಆದೇಶಿಸಿದರು.
ಅವರು ಮಾತನಾಡುತ್ತಾ,
“ಎರಡು ದಿನಗಳೊಳಗೆ ಜೆಸಿಬಿ, ಹಿಟಾಚಿ ಹಾಗೂ ಟ್ಯಾಕ್ಟರ್ಗಳ ಮೂಲಕ ಸ್ವಚ್ಛತಾ ಕಾರ್ಯ ಆರಂಭಿಸಬೇಕು. ಹಳ್ಳದಲ್ಲಿ ಬೆಳೆದಿರುವ ಗಿಡಗಂಟಿಗಳನ್ನು ಸಂಪೂರ್ಣವಾಗಿ ತೆರವುಗೊಳಿಸಿ, ನೀರು ಸರಾಗವಾಗಿ ಹರಿಯುವಂತೆ ವ್ಯವಸ್ಥೆ ಮಾಡುವುದು ಪುರಸಭೆಯ ಮೂಲ ಜವಾಬ್ದಾರಿ” ಎಂದು ಸ್ಪಷ್ಟವಾಗಿ ಸೂಚಿಸಿದರು.
ಪುರಸಭೆಗೆ ಕಟ್ಟುನಿಟ್ಟಿನ ಸೂಚನೆ
ಪುರಸಭೆಯ ಹಿರಿಯ ಆರೋಗ್ಯ ನಿರೀಕ್ಷಕ ಮಂಜುನಾಥ ಹಾಗೂ ಸಂಬಂಧಿತ ಅಧಿಕಾರಿಗಳೊಂದಿಗೆ ನಡೆದ ಚರ್ಚೆಯಲ್ಲಿ, ಸ್ವಚ್ಛತಾ ಕಾರ್ಯವನ್ನು ವಿಳಂಬ ಮಾಡದೆ ಮಳೆಗಾಲದೊಳಗೆ ಪೂರ್ಣಗೊಳಿಸುವಂತೆ ಸೂಚಿಸಲಾಯಿತು. ಲಂಡಿಹಳ್ಳದ ಒಳಭಾಗದಲ್ಲಿ ಜಮಾಯಿಸಿರುವ ಹೂಳು ಮತ್ತು ಗಿಡಗಂಟಿಗಳನ್ನು ತೆರವುಗೊಳಿಸಲು ಯಂತ್ರೋಪಕರಣಗಳನ್ನು ತಕ್ಷಣ ನಿಯೋಜಿಸುವಂತೆ ನಿರ್ದೇಶನ ನೀಡಲಾಗಿದೆ.
ಸ್ಥಳೀಯ ಆಡಳಿತದ ಉಪಸ್ಥಿತಿ
ಪರಿಶೀಲನೆ ವೇಳೆ ತಹಶೀಲ್ದಾರ್ ದನಂಜಯ ಎಮ್ ಅವರು ಉಪಸ್ಥಿತರಿದ್ದು, ಕಾರ್ಯಾಚರಣೆ ಯೋಜನೆ ಕುರಿತು ವಿವರ ನೀಡಿದರು. ಮುಂದಿನ ದಿನಗಳಲ್ಲಿ ಕಾಮಗಾರಿ ಮೇಲ್ವಿಚಾರಣೆಗೆ ವಿಶೇಷ ತಂಡ ರಚಿಸುವ ಸಾಧ್ಯತೆಯೂ ಇದೆ ಎಂದು ತಿಳಿದುಬಂದಿದೆ.
ಸಾರ್ವಜನಿಕ ಪ್ರತಿನಿಧಿಗಳು ಮತ್ತು ಸ್ಥಳೀಯ ಮುಖಂಡರ ಉಪಸ್ಥಿತಿ
ಈ ಸಂದರ್ಭದಲ್ಲಿ ಪುರಸಭೆಯ ಮಾಜಿ ಉಪಾಧ್ಯಕ್ಷ ದಾದಾಪೀರ ಮುಚ್ಚಾಲೆ, ಮಾಜಿ ಸದಸ್ಯ ಸಾಹೇಬಜಾನ್ ಹವಾಲ್ದಾರ ಸೇರಿದಂತೆ ಅನೇಕ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.
ನಾಗರಾಜ ಚಿಂಚಲಿ, ಗಣೇಶ ನೂಲ್ವಿ, ಚನ್ನಬಸನಗೌಡ ಉದ್ದನಗೌಡ್ರ, ಹೇಮಣ್ಣ ಬುರಡಿ, ದೇವು ಶಿರಹಟ್ಟಿ, ಸೋಮು ಮಜ್ಜಿಗುಡ್ಡ, ರಾಜಪ್ಪ ಕಣವಿ, ದಶರಥ ಘೋರ್ಪಡೆ, ಪರಪ್ಪ ಕಣವಿ, ಫಕ್ಕೀರೇಶ ಭಜಂತ್ರಿ, ಮುದಕಪ್ಪ ಭಜಂತ್ರಿ, ಮಹಾದೇವಪ್ಪ ಅಂದಲಗಿ, ಮುದಕಪ್ಪ ಸಾಲ್ಮನಿ, ಈಶಪ್ಪ ರೋಣದ, ಅರುಣಾ ಕಣವಿ, ಫಕ್ಕೀರೇಶ ಕಣವಿ, ಪವನ ಬಂಕಾಪುರ, ಶಂಕರ ಬ್ಯಾಡಗಿ ಸೇರಿದಂತೆ ಅನೇಕರು ಸ್ಥಳದಲ್ಲಿದ್ದು, ಹಳ್ಳದ ಸಮಸ್ಯೆಗೆ ಶಾಶ್ವತ ಪರಿಹಾರ ಅಗತ್ಯವಿದೆ ಎಂದು ಒತ್ತಾಯಿಸಿದರು.
ಮಳೆಗಾಲದ ಮುನ್ನ ಎಚ್ಚರಿಕೆ – ಆಡಳಿತದ ತುರ್ತು ಕ್ರಮ ನಿರೀಕ್ಷೆ
ಲಂಡಿಹಳ್ಳದ ಸ್ವಚ್ಛತಾ ಕಾರ್ಯ ವಿಳಂಬವಾದರೆ ಮಳೆಗಾಲದಲ್ಲಿ ನೀರು ನುಗ್ಗುವ ಅಪಾಯ ಹೆಚ್ಚುವ ಸಾಧ್ಯತೆ ಇರುವುದರಿಂದ, ಸಾರ್ವಜನಿಕರು ತಕ್ಷಣದ ಮತ್ತು ಶಾಶ್ವತ ಪರಿಹಾರಕ್ಕೆ ಒತ್ತಾಯಿಸಿದ್ದಾರೆ. ಉಪವಿಭಾಗಾಧಿಕಾರಿಗಳ ಕಟ್ಟುನಿಟ್ಟಿನ ಸೂಚನೆಯ ನಂತರ ಈಗ ಪುರಸಭೆ ಯಾವ ವೇಗದಲ್ಲಿ ಕಾರ್ಯಾರಂಭ ಮಾಡುತ್ತದೆ ಎಂಬುದರ ಮೇಲೆ ಸ್ಥಳೀಯರ ನಿರೀಕ್ಷೆ ನೆಟ್ಟಿದೆ.
ಮಳೆಯ ತೀವ್ರತೆ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಆಡಳಿತದ ತುರ್ತು ಕ್ರಮಗಳು ಜನಜೀವನಕ್ಕೆ ಭದ್ರತೆ ನೀಡುವ ನಿರ್ಣಾಯಕ ಪಾತ್ರವಹಿಸುವುದಾಗಿ ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / lalita MP