ರೈತರ ಕಣ್ಣೀರಿಗೆ ಕರಗದ ಕಾಂಗ್ರೆಸ್ ಸರ್ಕಾರ : ಶಂಕರ ಪಾಟೀಲ ಮುನೇನಕೊಪ್ಪ ಆಕ್ರೋಶ
ಹುಬ್ಬಳ್ಳಿ, 08 ಜೂನ್ (ಹಿ.ಸ.) : ಆ್ಯಂಕರ್ : ಪ್ರಕೃತಿ ವಿಕೋಪ ಮತ್ತು ಸರ್ಕಾರದ ಉದಾಸೀನತೆಯಿಂದಾಗಿ ರಾಜ್ಯದ ಬೆನ್ನೆಲುಬಾದ ರೈತಾಪಿ ವರ್ಗ ಇಂದು ಸಂಪೂರ್ಣವಾಗಿ ಬೀದಿಗೆ ಬಿದ್ದಿದೆ. ಕಾಂಗ್ರೆಸ್ ಸರ್ಕಾರ ತಕ್ಷಣವೇ ತನ್ನ ಕುಂಭಕರ್ಣ ನಿದ್ರೆಯಿಂದ ಎಚ್ಚೆತ್ತು, ಸಂಕಷ್ಟದಲ್ಲಿರುವ ಅನ್ನದಾತನ ನೆರವಿಗೆ ಧಾವಿಸದ
Munenakoppa


ಹುಬ್ಬಳ್ಳಿ, 08 ಜೂನ್ (ಹಿ.ಸ.) :

ಆ್ಯಂಕರ್ : ಪ್ರಕೃತಿ ವಿಕೋಪ ಮತ್ತು ಸರ್ಕಾರದ ಉದಾಸೀನತೆಯಿಂದಾಗಿ ರಾಜ್ಯದ ಬೆನ್ನೆಲುಬಾದ ರೈತಾಪಿ ವರ್ಗ ಇಂದು ಸಂಪೂರ್ಣವಾಗಿ ಬೀದಿಗೆ ಬಿದ್ದಿದೆ. ಕಾಂಗ್ರೆಸ್ ಸರ್ಕಾರ ತಕ್ಷಣವೇ ತನ್ನ ಕುಂಭಕರ್ಣ ನಿದ್ರೆಯಿಂದ ಎಚ್ಚೆತ್ತು, ಸಂಕಷ್ಟದಲ್ಲಿರುವ ಅನ್ನದಾತನ ನೆರವಿಗೆ ಧಾವಿಸದಿದ್ದರೆ ಮುಂದಿನ ದಿನಗಳಲ್ಲಿ ತಕ್ಕ ಶಾಸ್ತಿ ಅನುಭವಿಸಬೇಕಾಗುತ್ತದೆ ಎಂದು ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅತ್ಯಂತ ಗಂಭೀರವಾಗಿ ಎಚ್ಚರಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ರಾಜ್ಯ ಸರ್ಕಾರದ ರೈತವಿರೋಧಿ ಧೋರಣೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.

ಬಿತ್ತನೆ ಮಾಡುವ ಆರಂಭಿಕ ಹಂತದಲ್ಲೇ ರೈತರು ಹತ್ತಾರು ಸಂಕಷ್ಟಗಳನ್ನು ಎದುರಿಸಿದ್ದರು. ಈಗ ಸುರಿದ ಭಾರಿ ಮಳೆಗೆ ಹಳ್ಳ-ಕೊಳ್ಳಗಳ ಪಕ್ಕದಲ್ಲಿರುವ ಜಮೀನುಗಳು ಜಲಾವೃತಗೊಂಡು, ರೈತರು ಸಾಲಸೋಲ ಮಾಡಿ ಬಿತ್ತಿದ್ದ ಬೆಳೆ ಸಂಪೂರ್ಣವಾಗಿ ನಾಶವಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿ ಅನ್ನದಾತ ಹತಾಶನಾಗಿದ್ದಾನೆ. ಆದರೆ, ಸರ್ಕಾರಕ್ಕೆ ಮಾತ್ರ ಇದ್ಯಾವುದೂ ಕಣ್ಣಿಗೆ ಕಾಣಿಸುತ್ತಿಲ್ಲ ಎಂದು ಮುನೇನಕೊಪ್ಪ ಆತಂಕ ವ್ಯಕ್ತಪಡಿಸಿದ್ದಾರೆ.

ಮನೆ ಕಳೆದುಕೊಂಡು ಬೀದಿಗೆ ಬಿದ್ದ ಜನತೆ

ಬೆಳೆ ಹಾನಿ ಮಾತ್ರವಲ್ಲದೆ, ಅತಿವೃಷ್ಟಿಯ ಹೊಡೆತಕ್ಕೆ ಗ್ರಾಮೀಣ ಭಾಗದಲ್ಲಿ ನೂರಾರು ಬಡವರ ಮನೆಗಳು ಕುಸಿದು ಬಿದ್ದಿವೆ. ಇನ್ನು ಹಲವು ಮನೆಗಳಿಗೆ ನೀರು ನುಗ್ಗಿ, ಜನರು ನಿರಾಶ್ರಿತರಾಗಿದ್ದಾರೆ. ಕುಡಿಯಲು ನೀರಿಲ್ಲದೆ, ಇರಲು ಸೂರಿಲ್ಲದೆ ಜನಸಾಮಾನ್ಯರು ನರಕಯಾತನೆ ಅನುಭವಿಸುತ್ತಿದ್ದಾರೆ. ಸರ್ಕಾರ ತಕ್ಷಣವೇ ಯುದ್ಧೋಪಾದಿಯಲ್ಲಿ ಕಾರ್ಯಾಚರಣೆ ನಡೆಸಿ, ಸಂತ್ರಸ್ತರಿಗೆ ತುರ್ತು ಪರಿಹಾರ ವಿತರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಬಿಜೆಪಿ ಆಡಳಿತದ ಸುವರ್ಣಕಾಲ ನೆನೆದ ಮಾಜಿ ಸಚಿವರು

ಹಿಂದಿನ ಬಿಜೆಪಿ ಸರ್ಕಾರದ ಜನಪರ ಕಾರ್ಯಗಳನ್ನು ನೆನಪಿಸಿಕೊಂಡಿದ್ದು, ಪ್ರಕೃತಿ ವಿಕೋಪ ಸಂಭವಿಸಿದ ತಕ್ಷಣ ಅಧಿಕಾರಿಗಳು ಸ್ಥಳಕ್ಕೆ ಧಾವಿಸುತ್ತಿದ್ದರು. ಕೇವಲ ಸಂಪೂರ್ಣ ಬಿದ್ದ ಮನೆಗಳಿಗಷ್ಟೇ ಅಲ್ಲ, ಮಳೆಯಿಂದ ಸೋರುತ್ತಿದ್ದ ಸಣ್ಣಪುಟ್ಟ ಮನೆಗಳಿಗೂ ಗುರುತಿಸಿ ತಕ್ಷಣವೇ ಪರಿಹಾರದ ಹಣವನ್ನು ನೇರವಾಗಿ ಸಂತ್ರಸ್ತರ ಖಾತೆಗೆ ಜಮೆ ಮಾಡಲಾಗುತ್ತಿತ್ತು.

ಇಂದು ರೈತರ ಮತ್ತು ಬಡವರ ಪರಿಸ್ಥಿತಿ ಅತ್ಯಂತ ದಯನೀಯವಾಗಿದೆ. ಸರ್ಕಾರ ಸಂಪೂರ್ಣವಾಗಿ ದಿವಾಳಿಯಾಗಿದ್ದು, ಕನಿಷ್ಠ ನೆರವನ್ನೂ ನೀಡದೆ ಜನರನ್ನು ನಿರ್ಲಕ್ಷಿಸುತ್ತಿದೆ.

ಅಧಿಕಾರದ ಮದದಲ್ಲಿ ತೇಲಾಡುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ಬಡವರ, ರೈತರ ಕಷ್ಟಗಳು ಅರ್ಥವಾಗುತ್ತಿಲ್ಲ. ಅನ್ನ ನೀಡುವ ರೈತಕುಲವನ್ನು ಹೀಗೆ ಸಂಪೂರ್ಣವಾಗಿ ಕಡೆಗಣಿಸಿದರೆ, ಆ ಅನ್ನದಾತನ ಒಡಲ ಆಕ್ರೋಶ ಮತ್ತು ಕಣ್ಣೀರಿನ ಶಾಪ ಈ ಸರ್ಕಾರವನ್ನು ಸುಡದೆ ಬಿಡದು. ಇನ್ನಾದರೂ ರಾಜಕೀಯ ಬಿಟ್ಟು, ತಕ್ಷಣವೇ ಪರಿಹಾರ ಕಾರ್ಯ ಕೈಗೊಳ್ಳಿ ಎಂದು ಶಂಕರ ಪಾಟೀಲ ಮುನೇನಕೊಪ್ಪ ಎಚ್ಚರಿಕೆ ನೀಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande