
ಜಮಖಂಡಿ, 08 ಜೂನ್ (ಹಿ.ಸ.) :
ಆ್ಯಂಕರ್ : ಜಮಖಂಡಿಯ ವಿಜಯ ಸಿಂಧೂರ ಆರ್ಟ್ ಗ್ಯಾಲರಿಯಲ್ಲಿ ನಿನ್ನೆ ಖ್ಯಾತ ಕಲಾವಿದ ವಿಜಯ ಸಿಂಧೂರ ಅವರ 87ನೇ ಜನ್ಮದಿನದ ಅಂಗವಾಗಿ ವಿಜಯ ಸಿಂಧೂರ ಪ್ರಶಸ್ತಿ ಪ್ರದಾನ ಸಮಾರಂಭ, ಗೌರವ ಸನ್ಮಾನ ಕಾರ್ಯಕ್ರಮ ಹಾಗೂ ವಿಜಯ ಸಿಂಧೂರ ಆರ್ಟ್ ಫೌಂಡೇಶನ್ (ರಿ.) ಉದ್ಘಾಟನಾ ಕಾರ್ಯಕ್ರಮ ಅತ್ಯಂತ ವಿಜೃಂಭಣೆಯಿಂದ ಮತ್ತು ಯಶಸ್ವಿಯಾಗಿ ನೆರವೇರಿತು.
ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಕಲಾವಿದರು, ಕಲಾಭಿಮಾನಿಗಳು, ಗಣ್ಯರು ಹಾಗೂ ಸಂಸ್ಕೃತಿ ಕ್ಷೇತ್ರದ ಪ್ರತಿನಿಧಿಗಳು ಭಾಗವಹಿಸಿ ವಿಜಯ ಸಿಂಧೂರ ಅವರ ಕಲಾಸಾಧನೆ ಮತ್ತು ಸಮಾಜಮುಖಿ ಕೊಡುಗೆಗಳನ್ನು ಸ್ಮರಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಕಲಾ ಮಹಾವಿದ್ಯಾಲಯದ ಮಾಜಿ ಪ್ರಾಂಶುಪಾಲರಾದ ಪ್ರೊ. ಬಾಬು ಜಟ್ಟಕರ್ ಹಾಗೂ ಶ್ರೀಮತಿ ಗೀತಾ ಜಟ್ಟಕರ್ ಅವರನ್ನು ವಿಶೇಷವಾಗಿ ಗೌರವಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ವಿಜಯ ಸಿಂಧೂರ ಆರ್ಟ್ ಫೌಂಡೇಶನ್ (ರಿ.) ಅನ್ನು ಅಧಿಕೃತವಾಗಿ ಉದ್ಘಾಟಿಸಲಾಯಿತು. ಈ ಫೌಂಡೇಶನ್ ಮೂಲಕ ಯುವ ಕಲಾವಿದರಿಗೆ ಪ್ರೋತ್ಸಾಹ, ಕಲಾ ಸಂರಕ್ಷಣೆ, ಕಲಾ ಪ್ರದರ್ಶನಗಳ ಆಯೋಜನೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಉದ್ದೇಶ ಹೊಂದಿರುವುದಾಗಿ ಆಯೋಜಕರು ತಿಳಿಸಿದರು.
ಸಭೆಯಲ್ಲಿ ಮಾತನಾಡಿದ ಗಣ್ಯರು, ವಿಜಯ ಸಿಂಧೂರ ಅವರು ಹಲವು ದಶಕಗಳಿಂದ ಚಿತ್ರಕಲೆ ಕ್ಷೇತ್ರಕ್ಕೆ ನೀಡಿರುವ ಅಪೂರ್ವ ಸೇವೆಯನ್ನು ಕೊಂಡಾಡಿದರು. ಅವರ ಕಲಾ ಪರಂಪರೆ ಮುಂದಿನ ಪೀಳಿಗೆಗೆ ಪ್ರೇರಣೆಯಾಗಿದ್ದು, ಫೌಂಡೇಶನ್ನ ಕಾರ್ಯಚಟುವಟಿಕೆಗಳು ಕಲಾ ಕ್ಷೇತ್ರದ ಬೆಳವಣಿಗೆಗೆ ಹೊಸ ಆಯಾಮ ನೀಡಲಿವೆ ಎಂದು ಅಭಿಪ್ರಾಯಪಟ್ಟರು.
ಹಿಂದೂಸ್ತಾನ್ ಸಮಾಚಾರ್ / Rakesh.M.B.