
ಬೆಂಗಳೂರು, 08 ಜೂನ್ (ಹಿ.ಸ.) :
ಆ್ಯಂಕರ್ : ಎಐಸಿಸಿ ಕಾರ್ಯದರ್ಶಿ ಹಾಗೂ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಉಪಾಧ್ಯಕ್ಷರಾಗಿದ್ದ ಸೂರಜ್ ಹೆಗ್ಡೆ ಅವರ ನಿಧನಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಅವರನ್ನು ತ್ಯಾಗಮಯ ವ್ಯಕ್ತಿತ್ವದ ಹಾಗೂ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಎಂದು ಸ್ಮರಿಸಿದ್ದಾರೆ.
ಸೋಮವಾರ ವಿಧಾನ ಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಸೂರಜ್ ಹೆಗ್ಡೆ ನನ್ನ ಆತ್ಮೀಯ ಸ್ನೇಹಿತರಾಗಿದ್ದರು. ಅವರು ತ್ಯಾಗಕ್ಕೆ ಹೆಸರಾದವರು. ಯಾವುದೇ ಹುದ್ದೆ ಅಥವಾ ಸ್ಥಾನಕ್ಕಾಗಿ ಒತ್ತಾಯ ಮಾಡುತ್ತಿರಲಿಲ್ಲ. ಮೈಸೂರು ಲೋಕ ಸಭಾ ಕ್ಷೇತ್ರದಿಂದ ಅವರಿಗೆ ಟಿಕೆಟ್ ನೀಡುವಂತೆ ನಾನು ಹಿಂದೆ ಸಾಕಷ್ಟು ಪ್ರಯತ್ನ ಮಾಡಿದ್ದೆ. ಅವರು ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಮೊಮ್ಮಗರಾಗಿದ್ದು, ಪಕ್ಷದ ಮೇಲಿನ ಅವರ ನಿಷ್ಠೆ ಅಪಾರವಾಗಿತ್ತು” ಎಂದು ಹೇಳಿದರು.
“ಅವರು ನನ್ನೊಂದಿಗೆ ಪಕ್ಷದ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದರು. ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಉಪಾಧ್ಯಕ್ಷರಾಗಿದ್ದರು. ರಾಜ್ಯ ಸಚಿವರ ದರ್ಜೆಯ ಸ್ಥಾನಮಾನವನ್ನೂ ಸರ್ಕಾರ ನೀಡಿತ್ತು. ಅವರ ಬಗ್ಗೆ ನನಗೆ ಅಪಾರ ನಿರೀಕ್ಷೆಗಳಿದ್ದವು. ಪಕ್ಷವೂ ಅವರ ಮೇಲೆ ಅನೇಕ ಜವಾಬ್ದಾರಿಗಳನ್ನು ನಂಬಿಕೆಯಿಂದ ವಹಿಸಿತ್ತು” ಎಂದು ನೆನಪಿಸಿಕೊಂಡರು.
ನಿಷ್ಠಾವಂತ ಕಾರ್ಯಕರ್ತರು ಪಕ್ಷಕ್ಕೆ ಅಪರೂಪ ಎಂದು ಹೇಳಿದ ಮುಖ್ಯಮಂತ್ರಿ, “ಎಐಸಿಸಿ ಕಾರ್ಯದರ್ಶಿಯಾಗಿ ಹಾಗೂ ರಾಜ್ಯ ಮಟ್ಟದ ಪದಾಧಿಕಾರಿಯಾಗಿ ಅವರು ಸಮರ್ಪಣಾಭಾವದಿಂದ ಕೆಲಸ ಮಾಡುತ್ತಿದ್ದರು. ಅವರ ಅಗಲಿಕೆ ಪಕ್ಷಕ್ಕೆ ತುಂಬಲಾರದ ನಷ್ಟ” ಎಂದು ಹೇಳಿದರು.
ಸೂರಜ್ ಹೆಗ್ಡೆ ಅವರ ಕುಟುಂಬದ ನೋವನ್ನು ಕಂಡು ದುಃಖವಾಗುತ್ತಿದೆ ಎಂದು ಹೇಳಿದ ಅವರು, “ಅವರ ತಂದೆಯವರೂ ಹಿರಿಯ ರಾಜಕಾರಣಿಯಾಗಿದ್ದರು. ವೈಯಕ್ತಿಕವಾಗಿ ನಮ್ಮೆಲ್ಲರಿಗೂ ಇದು ದೊಡ್ಡ ದುಃಖದ ಸಂಗತಿ. ಪಕ್ಷ ಹಾಗೂ ಸರ್ಕಾರದ ಪರವಾಗಿ ಅವರಿಗೆ ಗೌರವ ನಮನ ಸಲ್ಲಿಸುತ್ತೇನೆ” ಎಂದು ಹೇಳಿದರು.
ಹಿಂದೂಸ್ತಾನ್ ಸಮಾಚಾರ್ / Rakesh.M.B.