ಮಮದಾಪುರ ಗ್ರಾಮದ ಪಾನ್ ಶಾಪ್ ನಲ್ಲಿ ನಿಗೂಢ ಸ್ಫೋಟ
ವಿಜಯಪುರ, 08 ಜೂನ್ (ಹಿ.ಸ.) : ಆಂಕರ್ : ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಮಮದಾಪುರ ಗ್ರಾಮದ ಪಾನ್ ಶಾಪ್ ಒಂದರಲ್ಲಿ ನಿಗೂಢವಾಗಿ ಸ್ಫೋಟ ಸಂಭವಿಸಿದ ಘಟನೆ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಸ್ಫೋಟದ ತೀವ್ರತೆಗೆ ಶೆಡ್ ಮಾದರಿಯ ಅಂಗಡಿಯ ಕೆಲ ಭಾಗಗಳಿಗೆ ಹಾನಿಯಾಗಿದ್ದು, ಘಟನೆಯ ನಿಖರ ಕಾರಣ ಇನ್ನೂ
ಸ್ಪೋಟ


ವಿಜಯಪುರ, 08 ಜೂನ್ (ಹಿ.ಸ.) :

ಆಂಕರ್ : ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಮಮದಾಪುರ ಗ್ರಾಮದ ಪಾನ್ ಶಾಪ್ ಒಂದರಲ್ಲಿ ನಿಗೂಢವಾಗಿ ಸ್ಫೋಟ ಸಂಭವಿಸಿದ ಘಟನೆ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಸ್ಫೋಟದ ತೀವ್ರತೆಗೆ ಶೆಡ್ ಮಾದರಿಯ ಅಂಗಡಿಯ ಕೆಲ ಭಾಗಗಳಿಗೆ ಹಾನಿಯಾಗಿದ್ದು, ಘಟನೆಯ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ.

ಗ್ರಾಮದ ನಿವಾಸಿ ರವಿಕಿರಣ ಅವರಿಗೆ ಸೇರಿದ ಶೆಡ್ ಮಾದರಿಯ ಪಾನ್ ಶಾಪ್ನಲ್ಲಿ ಈ ಘಟನೆ ಸಂಭವಿಸಿದೆ. ರಾತ್ರಿ ವೇಳೆ ಏಕಾಏಕಿ ಭಾರೀ ಶಬ್ದದೊಂದಿಗೆ ಸ್ಫೋಟ ಸಂಭವಿಸಿದ್ದು, ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಸ್ಫೋಟದ ಶಬ್ದ ಕೇಳಿ ಸುತ್ತಮುತ್ತಲಿನ ಜನರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಬಬಲೇಶ್ವರ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಾಥಮಿಕ ತನಿಖೆಯಲ್ಲಿ ಅಂಗಡಿಯೊಳಗಿದ್ದ ಫ್ರಿಡ್ಜ್ ಸೇರಿದಂತೆ ಕೆಲವು ವಸ್ತುಗಳಿಗೆ ಯಾವುದೇ ರೀತಿಯ ಹಾನಿಯಾಗಿಲ್ಲ ಎಂಬುದು ಗಮನಕ್ಕೆ ಬಂದಿದೆ. ಇದರಿಂದಾಗಿ ಸ್ಫೋಟವು ಅಂಗಡಿಯೊಳಗಿನಿಂದ ಸಂಭವಿಸಿಲ್ಲ, ಹೊರಗಡೆಯಿಂದ ಯಾವುದೋ ವಸ್ತು ಎಸೆದು ಅಥವಾ ಬೇರೆ ಕಾರಣದಿಂದ ಸಂಭವಿಸಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಘಟನೆಯ ಗಂಭೀರತೆಯನ್ನು ಪರಿಗಣಿಸಿ ಅಗ್ನಿಶಾಮಕ ದಳ, ಸೊಕೋ (Scene of Crime Officer) ತಂಡ ಹಾಗೂ ಶ್ವಾನದಳವನ್ನು ಸ್ಥಳಕ್ಕೆ ಕರೆಸಿ ಪರಿಶೀಲನೆ ನಡೆಸಲಾಯಿತು. ತಂಡಗಳು ಅಂಗಡಿ ಹಾಗೂ ಸುತ್ತಮುತ್ತಲಿನ ಪ್ರದೇಶವನ್ನು ಕೂಲಂಕಷವಾಗಿ ತಪಾಸಣೆ ನಡೆಸಿದರೂ ಇದುವರೆಗೆ ಯಾವುದೇ ಸ್ಪೋಟಕ ವಸ್ತುಗಳ ಅವಶೇಷಗಳು ಅಥವಾ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ.

ಸ್ಫೋಟದ ಹಿಂದೆ ದುಷ್ಕರ್ಮಿಗಳ ಕೈವಾಡವಿದೆಯೇ, ತಾಂತ್ರಿಕ ದೋಷದಿಂದ ಈ ಘಟನೆ ಸಂಭವಿಸಿತೇ ಅಥವಾ ಇತರೆ ಯಾವುದೇ ಕಾರಣಗಳಿವೆಯೇ ಎಂಬ ಕುರಿತು ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ.

ಘಟನಾ ಸ್ಥಳದಿಂದ ಕೆಲ ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ತಜ್ಞರ ವರದಿಗಾಗಿ ಕಾಯಲಾಗುತ್ತಿದೆ.

ಗ್ರಾಮದಲ್ಲಿ ನಡೆದ ಈ ನಿಗೂಢ ಸ್ಫೋಟ ಪ್ರಕರಣ ಸ್ಥಳೀಯರಲ್ಲಿ ಕುತೂಹಲ ಮತ್ತು ಆತಂಕಕ್ಕೆ ಕಾರಣವಾಗಿದ್ದು, ಪೊಲೀಸರು ಶೀಘ್ರದಲ್ಲೇ ಸ್ಫೋಟದ ನಿಖರ ಕಾರಣವನ್ನು ಪತ್ತೆಹಚ್ಚಲಿದ್ದಾರೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.

ಈ ಸಂಬಂಧ ಬಬಲೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ತಜ್ಞರ ವರದಿ ಹಾಗೂ ವೈಜ್ಞಾನಿಕ ಪರೀಕ್ಷೆಗಳ ಬಳಿಕ ಸ್ಫೋಟಕ್ಕೆ ಕಾರಣವಾದ ಅಂಶಗಳು ಬೆಳಕಿಗೆ ಬರುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande